ಬೆಳಗಾವಿ: ಖಾನಾಪುರ ಕಾಂಗ್ರೆಸ್ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ತಾಲೂಕು ಆಸ್ಪತ್ರೆಯಲ್ಲಿ ನೂತನ ಆಂಬ್ಯುಲೆನ್ಸ್ಗೆ ಚಾಲನೆ ನೀಡಿದ ಬಳಿಕ ಸ್ವತಃ ಆಂಬ್ಯುಲೆನ್ಸ್ ಓಡಿಸುವ ಮೂಲಕ ಗಮನಸೆಳೆದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ತಾಲೂಕು ಆಸ್ಪತ್ರೆಯ ಆವರಣದಲ್ಲಿ ನಾಲ್ಕು ಆಂಬ್ಯುಲೆನ್ಸ್ಗಳಿಗೆ ಚಾಲನೆ ನೀಡಿದ ನಂತರ ಖಾನಾಪುರ ಪಟ್ಟಣದಲ್ಲಿ ಆ್ಯಂಬುಲೆನ್ಸ್ ಓಡಿಸಿದರು. ಶಾಸಕಿ ನಿಂಬಾಳ್ಕರ್ ಅವರು ಆಂಬ್ಯುಲೆನ್ಸ್ ಓಡಿಸುತ್ತಿರುವುದುನ್ನು ಸಾರ್ವಜನಿಕರು ರಸ್ತೆ ಬದಿ ನಿಂತು ನೋಡುತ್ತಿರುವುದು ಕಂಡು ಬಂತು.
ಕೊರೊನಾ ಸೋಂಕಿಗೆ ತತ್ತರಿಸಿರುವ ಕ್ಷೇತ್ರದ ಜನತೆಗೆ ನೆರವಾಗಿರುವ ಶಾಸಕಿ ನಿಂಬಾಳ್ಕರ್ ಅವರು ಕೆಲವು ದಿನಗಳಿಂದ ಆಸ್ಪತ್ರೆಗೆ ಅಗತ್ಯ ಇರುವ ಸೌಲಭ್ಯವನ್ನು ಒದಗಿಸುವಲ್ಲಿ ನಿರತರಾಗಿದ್ದಾರೆ. ಆಂಬ್ಯುಲೆನ್ಸ್ ಕೊರತೆಯಿಂದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದರು. ಇವರ ನೆರವಿಗೆ ನಿಂತಿದ್ದಾರೆ.
ಇದನ್ನೂ ಓದಿ :ಕೋವಿಡ್ : ರಾಜ್ಯದಲ್ಲಿಂದು 14975 ಸೋಂಕಿತರು ಗುಣಮುಖ, 8249 ಜನರಿಗೆ ಪಾಸಿಟಿವ್
ಕ್ಷೇತ್ರದ ಬಹಳಷ್ಟು ಜನ ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಹೋಗಿರುತ್ತಾರೆ. ಅಲ್ಲಿಂದ ಬಂದ ವಲಸಿಗರಿಗೆ ಕೊರೊನಾ ಸೋಂಕು ಒಕ್ಕರಿಸಿದೆ. ವಲಸಿಗರಿಂದ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಹೇಗಾದರೂ ಮಾಡಿ ಕೊರೊನಾ ಮುಕ್ತ ಮಾಡಲು ಶ್ರಮಿಸುತ್ತಿದ್ದೇನೆ ಎಂದು ಶಾಸಕಿ ನಿಂಬಾಳ್ಕರ್ ಹೇಳಿದರು.
ಕಳೆದ ವಾರ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಸ್ವಂತ ಖರ್ಚಿನಲ್ಲಿ 8 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಖರೀದಿಸಿ ತಾಲೂಕು ಆಸ್ಪತ್ರೆಗೆ ನೀಡಿದ್ದರು.