Advertisement

KKRDB : ಜೂನ್ 14 ರಂದು ಸಿಎಂ ಪ್ರಗತಿ ಪರಿಶೀಲನೆ ಸಭೆ: ಡಾ. ಅಜಯಸಿಂಗ್

03:58 PM Jun 12, 2024 | sudhir |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ವೇಗ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಜೂನ್ 14 ರಂದು ಬೆಳಿಗ್ಗೆ 11 ಕ್ಕೆ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾ ದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ( ಕೆಕೆಆರ್ ಡಿಬಿ) ಯ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ‌ ಎಂದು ಮಂಡಳಿ ಅಧ್ಯಕ್ಷರು ಹಾಗೂ ಜೇವರ್ಗಿ ಮತಕ್ಷೇತ್ರದ ಶಾಸಕರಾಗಿರುವ ಡಾ. ಅಜಯಸಿಂಗ್ ಹೇಳಿದ್ದಾರೆ.

Advertisement

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಭೆಯಲ್ಲಿ ಮಂಡಳಿಯಿಂದ ಪ್ರಸಕ್ತವಾಗಿ ಆಗಿರುವ ಕಾಮಗಾರಿ ಹಾಗೂ ಆಗಬೇಕಿರುವ ಕಾಮಗಾರಿಗಳ ಜತೆಗೆ ಅನುದಾನ ಮಂಜೂರು ಸೇರಿದಂತೆ ಇತರ ಕಾರ್ಯಗಳೆಲ್ಲ ಪರಿಶೀಲನೆ ನಡೆಸುವರು ಎಂದು ತಿಳಿಸಿದರು.

ಪ್ರಸಕ್ತ 2024-25ನೇ ಸಾಲಿಗೆ ಬಜೆಟ್ ದಲ್ಲಿ 5,000 ಕೋಟಿ ರೂ. ಅನುದಾನ ನೀಡಿದ್ದು, ಇದನ್ನು ಸಂಪೂರ್ಣ ಬಿಡುಗಡೆ ಹಾಗೂ ಎಲ್ಲ ಕಾರ್ಯಗಳು ಅನುಷ್ಠಾನಕ್ಕೆ ತರಲು ಮತ್ತು ಜತೆಗೆ ಅನುದಾನ ಪ್ರಸಕ್ತ ವರ್ಷದಲ್ಲಿ ಖರ್ಚು ಮಾಡುವ ಸಂಬಂಧ ಯೋಜನಾ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಕ.ಕ.ಭಾಗದ ಸಚಿವರನ್ನು ಸಹ ಸಭೆಗೆ ಆಹ್ವಾನಿಸಲಾಗಿದೆ ಎಂದು ವಿವರಣೆ ನೀಡಿದರು.

ಸಿ.ಎಂ. ಸಭೆ ನಂತರ ಇದೇ ಜೂನ್ 28ಕ್ಕೆ ಮಂಡಳಿ ಸಭೆ ಸಹ ನಡೆಸಲು ನಿರ್ಧರಿಸಿದ್ದು, 15 ದಿನದೊಳಗೆ ಪ್ರದೇಶದ ಶಾಸಕರಿಂದ ಕ್ರಿಯಾ ಯೋಜನೆ ಪಡೆದು ಪ್ರಸಕ್ತ ಸಾಲಿನ ಕೆಲಸಗಳು ಬೇಗನೇ ಆರಂಭಿಸಲಾಗುವುದು. ಕಳೆದ ವರ್ಷ ನಮ್ಮ ಸರ್ಕಾರ ಈ ಭಾಗಕ್ಕೆ 5 ಸಾವಿರ ಕೋಟಿ ರೂ. ಅನುದಾನ ಘೋಷಿಸಿ 3 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಅದರಂತೆ ಪ್ರದೇಶದಲ್ಲಿ ರಸ್ತೆ, ಚರಂಡಿ ನಿರ್ಮಾಣ, ಮೂಲಸೌಕರ್ಯ ಕೆಲಸ ಭರದಿಂದ ಸಾಗಿದೆ. ಇದರೊಂದಿಗೆ ಪ್ರದೇಶದಲ್ಲಿ ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಅಕ್ಷರ ಆವಿಷ್ಕಾರ, ಆರೋಗ್ಯ ಆವಿಷ್ಕಾರ ಯೋಜನೆ ಜಾರಿಗೆ ತರಲಾಗಿದೆ.‌ ಪ್ರಸಕ್ತವಾಗಿ ಕೃಷಿ ಆವಿಷ್ಕಾರ ಯೋಜನೆ ರೂಪಿಸಲಾಗುತ್ತಿದೆ ಎಂದು ಡಾ. ಅಜಯಸಿಂಗ್ ತಿಳಿಸಿದರು.

ನೀಟ್ ಪರೀಕ್ಷೆ ಮರು ನಡೆಸಿ: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಗ್ರೇಸ್ ಅಂಕ ಹಾಗೂ ಇತರ ಆರೋಪಗಳಿಗೆ ತುತ್ತಾಗಿರುವ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಯುಜಿ – 2024 ರದ್ದುಪಡಿಸಿ ಮರು ಪರೀಕ್ಷೆ ನಡೆಸಬೇಕೆಂದು ಇದೇ ಸಂದರ್ಭದಲ್ಲಿ ಡಾ. ಅಜಯಸಿಂಗ್ ಆಗ್ರಹಿಸಿದರು.

Advertisement

ಲೋಕಸಭಾ ಚುನಾವಣಾ ಫಲಿತಾಂಶ ದಿನವೆ ಪರೀಕ್ಷೆ ರಿಸಲ್ಟ್ ಘೋಷಣೆ ಮಾಡಿದ್ದು, ಹಲವು ಅವಮಾನಕ್ಕೆ ಎಡೆಮಾಡಿಕೊಟ್ಟಿದೆ. ಎಲ್ಲೆಡೆ ಅವ್ಯವಹಾರ ಕೇಳಿ ಬರುತ್ತಿದ್ದು, ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ‌ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ‌ ಎಂದರಲ್ಲದೇ ಮೊದಲಿನ ಹಾಗೆ ಸಿಇಟಿ ನಡೆಯುದೇ ಉತ್ತಮ ವಾಗಿದೆ ಎಂದರು.‌

ಶಿಕ್ಷಣಕ್ಕೆ ಹೆಚ್ಚಿನ ಒತ್ತು:
ಪ್ರದೇಶದಲ್ಲಿ ಶಿಕ್ಷಕರ ಕೊರತೆ ಇರುವುದು ನಿಜ. ಮಂಡಳಿ ಅತಿಥಿ ಶಿಕ್ಷಕರನ್ನು ನೇಮಿಸಬಹುದು. ಪೂರ್ಣ ಪ್ರಮಾಣದಲ್ಲಿ ಶಿಕ್ಣಕರ ನೇಮಕ ಸರ್ಕಾರದ ಹಂತದಲ್ಲಿಯೇ ನಡೆಯಬೇಕಾಗುತ್ತದೆ. ಮುಖ್ಯಮಂತ್ರಿಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ ಒತ್ತಾಯ ಮಾಡಲಾಗುವುದು. ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಅನುಭವಿ ಶಿಕ್ಷಣ ತಜ್ಞರ ಸಮಿತಿ ರಚಿಸಿ ಅವರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷ ಮಂಡಳಿಯು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಲಾದ 652 ಕೋಟಿ ರೂ. ಮೊತ್ತದಲ್ಲಿ ಫಲಿತಾಂಶ‌ ಸುಧಾರಣೆ ನಿಟ್ಟಿನಲ್ಲಿ ಕೇವಲ 3 ಕೋಟಿ ರೂ. ಖರ್ಚು ಮಾಡಿದೆ. ಮುಂದಿನ‌ ದಿನದಲ್ಲಿ ಈ ಮೊತ್ತ ಹೆಚ್ಚಿಸಲಾಗುವುದು ಎಂದರು.

2,009 ಕೋಟಿ ರೂ. ಖರ್ಚು:
ಕೆ.ಕೆ.ಆರ್.ಡಿ.ಬಿ. ಮಂಡಳಿಗೆ 2023-24ನೇ ಸಾಲಿಗೆ ರಾಜ್ಯ ಸರ್ಕಾರ 5 ಸಾವಿರ ಕೋಟಿ ರೂ. ಅನುದಾನ ಘೋಷಿಸಿ, 3 ಸಾವಿರ ಕೋಟಿ ರೂ. ಹಂಚಿಕೆ‌ ಮಾಡಲಾಗಿದೆ. ಇದರಲ್ಲಿ ಇದೂವರೆಗೆ 2,009 ಕೋಟಿ ರೂ. ಖರ್ಚು ಮಾಡಿದ್ದು, ಬರುವ ಆಗಸ್ಟ್ ಮಾಹೆ ವರೆಗೆ ಉಳಿದ ಅನುದಾನ ಸಹ ಖರ್ಚು ಮಾಡಲಾಗುವುದು ಎಂದರು.

371ಜೆ ಮೀಸಲಾತಿ ವಿರೋಧಕ್ಕೆ ಖಂಡನೆ: ದೇಶದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವೆಂದು ಕಲ್ಯಾಣ ಕರ್ನಾಟಕ ಭಾಗಕ್ಕೆ
ದಶಕಗಳ ಹೋರಾಟ ಫಲವಾಗಿ 371(ಜೆ) ಮೀಸಲಾತಿ ದೊರಕಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕೆಲವು ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಲ್ಲದೇ 371ರ ಮೀಸಲಾತಿ ಸಂಬಂಧ ಅಪಸ್ವರ ಎತ್ತಿ ಸಚಿವ ಎಚ್.ಕೆ. ಪಾಟೀಲ ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಖಂಡಿಸಿರ ಅವರು, ಈ ಭಾಗಕ್ಕೆ ಸಂವಿಧಾನ ಬದ್ಧ ಸಿಗಬೇಕಾದ ಸವಲತ್ತು ದೊರಕಿಸಲು ಮತ್ತು ಮೀಸಲಾತಿ ರಕ್ಷಣೆ‌ಗೆ ತಾವು ಬದ್ಧರಾಗಿದ್ದೇವೆ. ಯಾವುದೇ ಹಂತದ ಹೋರಾಟಕ್ಕೂ ಹಿಂಜರಿಯುವುದಿಲ್ಲ ಎಂದರು.

ಯಾವಾಗಲು ಸಚಿವ ಸ್ಥಾನದ ಆಕಾಂಕ್ಷಿ: 2018 ರಿಂದ ತಾವು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಪಕ್ಷದ ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿಗೆ ಬದ್ದ ಹೊಂದಿರುವುದಾಗಿ ಡಾ. ಅಜಯಸಿಂಗ್ ತಿಳಿಸಿದರು. ‌

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಐದು ಸ್ಥಾನಗಳಲ್ಲಿ ಇದೇ ಮೊದಲ‌ ಬಾರಿಗೆ ಗೆಲುವು ಸಾಧಿಸಿರುವುದು ಮಂಡಳಿಯ ಅಭಿವೃದ್ಧಿ ಕಾರ್ಯಗಳು, 371 ಜೆ ವಿಧಿ ಪರಿಣಾಮಕಾರಿಯಾಗಿ ಜಾರಿ, ರಾಜ್ಯ ಸರ್ಕಾರದ ಗ್ಯಾರಂಟಿ ಯಿಂದ ಸಾಧ್ಯವಾಗಿದೆ ಎಂದು ಡಾ.‌ಅಜಯಸಿಂಗ್ ವಿವರಣೆ ನೀಡಿದರು.

ಇದನ್ನೂ ಓದಿ: Kuwait: ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 35 ಮಂದಿ ದುರ್ಮರಣ

Advertisement

Udayavani is now on Telegram. Click here to join our channel and stay updated with the latest news.

Next