ಬರ್ಲಿನ್: ಹೊಸ ವರ್ಷದ ಸಂಭ್ರಮಕ್ಕಾಗಿ ಅಳವಡಿಸಿದ್ದ ವಿದ್ಯುತ್ ದೀಪದ ಬೆಳಕು ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವಾರು ಮಂಗಗಳು ಜೀವಂತವಾಗಿ ಸುಟ್ಟು ಕರಕಲಾಗಿರುವ ಬೀಭತ್ಸ ಘಟನೆ ಜರ್ಮನಿಯ ಪ್ರಾಣಿಸಂಗ್ರಹಾಲಯದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡಿದ್ದರಿಂದ ಝೂನಲ್ಲಿದ್ದ ಸುಮಾರು 30ಕ್ಕೂ ಅಧಿಕ ಮಂಗಗಳು ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಿಸಂಗ್ರಹಾಲಯದಲ್ಲಿ ಗೊರಿಲ್ಲಾ, ದೊಡ್ಡ ಜಾತಿಯ ಮಂಗಗಳು, ಜಿಂಪಾಂಚಿಗಳು ಹಾಗೂ ಹೊಸ ತಳಿಯ ಮಂಗಗಳಿದ್ದವು. ಕೇವಲ ಎರಡು ಜಿಂಪಾಂಚಿಗಳು ಬದುಕಿದ್ದು, ಗೊರಿಲ್ಲಾಗಳನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಎಂದು ವರದಿ ವಿವರಿಸಿದೆ.
ಝೂಗೆ ಭೇಟಿ ನೀಡಿದ ಪ್ರವಾಸಿಗರು ಝೂ ಹೊರಭಾಗದಲ್ಲಿಯೇ ಕಂಬನಿ ತುಂಬಿ ಮೇಣದ ಬತ್ತಿಯನ್ನು ಉರಿಸಿ, ಹೂಗಳನ್ನು ಇಟ್ಟು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪೇಪರ್ ನಿಂದ ತಯಾರಿಸಿದ್ದ ಗೂಡು ದೀಪಗಳು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡು ಗಾಳಿಗೆ ಎಲ್ಲೆಡೆ ಹರಡಿತ್ತು ಎಂದು ಪ್ರಾಥಮಿಕ ವರದಿ ತಿಳಿಸಿದೆ. ಇಂತಹ ಡಿವೈಸ್ ಅನ್ನು ಈ ಪ್ರದೇಶದಲ್ಲಿ 2009ರಲ್ಲಿಯೇ ನಿಷೇಧಿಸಲಾಗಿತ್ತು.