Advertisement
ಇನ್ನು ಫೆಬ್ರವರಿ ಕೊನೆಯವಾರ ಸಮೀಪಿಸುತ್ತಿದ್ದಂತೆ, ಸ್ಯಾಂಡಲ್ ವುಡ್ ನಲ್ಲಿ ಸಿನಿಮಾಗಳ ಬಿಡುಗಡೆಯ ಭರಾಟೆ ಕೂಡ ಜೋರಾಗುತ್ತಿದೆ. ಸದ್ಯ ಫೆ. 24ಕ್ಕೆ ಕನ್ನಡದಲ್ಲಿ ಬರೋಬ್ಬರಿ 11 ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಈ ಸಂಖ್ಯೆ ಮುಂದಿನ ಎರಡು – ಮೂರು ದಿನಗಳಲ್ಲಿ, ಇನ್ನಷ್ಟು ಹೆಚ್ಚಾದರೂ ಆಗಬಹುದು.
Related Articles
Advertisement
ಸೌತ್ ಇಂಡಿಯನ್ ಹೀರೋ
ಈಗಾಗಲೇ ತನ್ನ ಟೈಟಲ್, ಫಸ್ಟ್ ಲುಕ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ “ಸೌತ್ ಇಂಡಿಯನ್ ಹೀರೋ’ ಈ ವಾರ ತೆರೆ ಕಾಣುತ್ತಿದೆ. ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಸೌತ್ ಇಂಡಿಯನ್ ಹೀರೋವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ನರೇಶ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಸೌತ್ ಇಂಡಿಯನ್ ಹೀರೋ ಸಿನಿಮಾದಲ್ಲಿ ಸಾರ್ಥಕ್, ಕಾಶಿಮಾ, ಊರ್ವಶಿ, ವಿಜಯ ಚೆಂಡೂರ್, ಅಮಿತ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಸಂಭ್ರಮ
ಯುವನಟ ಅಭಯ ವೀರ್ ನಾಯಕನಾಗಿ ಅಭಿನಯಿಸಿರುವ ಪ್ರೇಮ ಕಥಾ ಹಂದರದ ಸಂಭ್ರಮ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. “ಫೀನಿಕ್ಸ್ ಪ್ರೊಡಕ್ಷನ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾಕ್ಕೆ ಶ್ರೀ ನಿರ್ದೇಶನವಿದೆ. ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಸಂಭ್ರಮ’ ಸಿನಿಮಾವನ್ನು ರಾಜ್ಯಾದ್ಯಂತ ಸುಮಾರು ಮೂವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ
ಜ್ಯುಲಿಯೆಟ್ 2
ಬೃಂದಾ ಆಚಾರ್ಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ನಾಯಕಿ ಪ್ರದಾನ ಕಥಾಹಂದರದ ಜ್ಯೂಲಿಯೆಟ್-2′ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಸುಮಾರು ನೂರಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಲಿಖೀತ್ ಆರ್. ಕೋಟ್ಯಾನ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ವಿರಾಟ್ ನಿರ್ದೇಶನವಿದೆ. ಈಗಾಗಲೇ ಬಿಡುಗಡೆಯಾಗಿರುವ “ಜ್ಯೂಲಿಯೆಟ್ 2′ ಸಿನಿಮಾದ ಟ್ರೇಲರ್ ಸಿನಿ ಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಸಿನಿಮಾ ಥಿಯೇಟರಿನಲ್ಲೂ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ವಿಶ್ವಾಸದಲ್ಲಿದೆ ಚಿತ್ರತಂಡ. ಕನ್ನಡದ ಜೊತೆಗೆ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಭಾಷೆಗಳಲ್ಲೂ ಈ ಸಿನಿಮಾ ನಿರ್ಮಾಣವಾಗಿದೆ.
ಕ್ಯಾಂಪಸ್ ಕ್ರಾಂತಿ
ಆರ್ಯ, ಅಲಂಕಾರ್, ಆರತಿ, ಇಶಾನ ನಾಯಕ – ನಾಯಕಿಯರಾಗಿರುವ, ಹಿರಿಯ ನಟ ಕೀರ್ತಿರಾಜ್, ಹನುಮಂತೇಗೌಡ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ “ಕ್ಯಾಂಪಸ್ ಕ್ರಾಂತಿ’ ಸಿನಿಮಾ ಈ ವಾರ ಸುಮಾರು 50 ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ. ಲವ್, ಆ್ಯಕ್ಷನ್ ಕಥಾಹಂದರದ ಈ ಸಿನಿಮಾಕ್ಕೆ ಆರ್. ಎಸ್ ಸಂತೋಷ್ ನಿರ್ದೇಶನವಿದೆ.
ಹೊಟ್ಟೆಪಾಡು
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಹೊಟ್ಟೆಪಾಡು’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ವಸಂತ್, ಜಾಹ್ನವಿ ವಿಶ್ವನಾಥ್, ವಿನಯ ಪ್ರಸಾದ್, ಶೋಭರಾಜ್, ಅಪೂರ್ವಾ, ಶೈಲೇಶ್ ಮೊದಲಾದವರು ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಡಿ. ವಿ ರಾಧಾ ನಿರ್ಮಿಸಿರುವ ಹೊಟ್ಟೆಪಾಡು’ ಸಿನಿಮಾಕ್ಕೆ ವಸಂತ್ ನಿರ್ದೇಶನವಿದೆ.
ಪಾಲಾರ್
ಕೋಲಾರ ಮತ್ತು ದೇವನಹಳ್ಳಿ ಸುತ್ತಮುತ್ತ ಕೆಲ ವರ್ಷಗಳ ಹಿಂದೆ ನಡೆದ ಶೋಷಿತ ಸಮುದಾಯದ ನೈಜ ಘಟನೆಯನ್ನು ಇಟ್ಟುಕೊಂಡು ತಯಾರಾದ “ಪಾಲಾರ್’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಜೀವಾ ನವೀನ್ ನಿರ್ದೇಶನದಲ್ಲಿ ಮೂಡಿಬಂದಿರುವ “ಪಾಲಾರ್’ ಸಿನಿಮಾದಲ್ಲಿ ವೈ.ಜಿ.ಉಮಾ, ತಿಲಕ್ ರಾಜ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.