ಚಾಮರಾಜನಗರ: ವರದಕ್ಷಿಣೆ ತಾರದ ಹೆಂಡತಿಗೆ ಕಿರುಕುಳ ನೀಡಿ ಕೊಲೆ ಮಾಡಿ ನೇಣು ಹಾಕಿದ್ದ ಅಪರಾಧಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ತೀರ್ಥ ಗ್ರಾಮದ ಆನಂದ್ ಶ್ಯಾಮ್ ಕಾಂಬಳೆ ಜೀವಾವಧಿ ಶಿಕ್ಷೆಗೆ ಗುರಿಯಾದವನು. ಈತ ಹನೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಓ ಆಗಿದ್ದ.
ಅಪರಾಧಿ ಆನಂದ ಶ್ಯಾಮ್ ಕಾಂಬಳೆ ಜಮಖಂಡಿ ತಾಲೂಕಿನ ಆಲಬಾಳು ಗ್ರಾಮದ ವಿದ್ಯಾಶ್ರೀ ಅವರನ್ನು 2019ರಲ್ಲಿ ವಿವಾಹವಾಗಿದ್ದ. 26 ಗ್ರಾಂ ತೂಕದ ಚಿನ್ನದ ಚೈನ್ ಅನ್ನು ವರದಕ್ಷಿಣೆಯಾಗಿ ಪಡೆದು ಮದುವೆಯಾಗಿ ಕೊಳ್ಳೇಗಾಲ ಟೌನ್ ನ ಬಸ್ತಿಪುರ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ವಿದ್ಯಾಶ್ರೀ ಮತ್ತು 7 ತಿಂಗಳ ಮಗುವಿನೊಡನೆ ವಾಸವಿದ್ದ. ತನ್ನ ಹೆಂಡತಿ ವಿದ್ಯಾಶ್ರೀ ರವರನ್ನು ತವರು ಮನೆಯಿಂದ 2 ಲಕ್ಷ ವರದಕ್ಷಿಣೆ ಕೊಡಿಸಿ ಕೊಡುವಂತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. 2022 ರ ಮಾರ್ಚ್ 14 ರಂದು ರಾತ್ರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ, ತನ್ನ ತಂದೆಯ ಸಹಕಾರದಿಂದ ಮೇಲ್ಛಾವಣಿಗೆ ನೇತು ಹಾಕಿದ್ದ. ವಿದ್ಯಾಶ್ರೀಯೇ ನೇಣು ಹಾಕಿಕೊಂಡಿದ್ದಾರೆಂದು ಬಿಂಬಿಸಲು ಯತ್ನಿಸಿದ್ದ.
ಈ ಬಗ್ಗೆ ಕೊಳ್ಳೇಗಾಲ ಟೌನ್ ಪೊಲೀಸರು ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆದು ಮೊದಲ ಆರೋಪಿ ಆನಂದ್ ಶ್ಯಾಮ್ ಕಾಂಬಳೆಯನ್ನು ದೋಷಿ ಎಂದು ಪರಿಗಣಿಸಿ ಸೋಮವಾರ ತೀರ್ಪು ನೀಡಲಾಗಿದೆ. ನ್ಯಾಯಾಧೀಶ ಟಿ.ಸಿ. ಶ್ರೀಕಾಂತ್ ಅವರು ಮೊದಲ ಆರೋಪಿ ಶ್ಯಾಮ್‌ಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಎರಡನೇ ಆರೋಪಿ ಶ್ಯಾಮ್ ನ ತಂದೆ ವಿಚಾರಣೆ ಸಂದರ್ಭದಲ್ಲಿ ಮೃತಪಟ್ಟಿದ್ದರು.
ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ವಾದ ಮಂಡಿಸಿದ್ದರು.