ಚಿಕ್ಕಬಳ್ಳಾಪುರ: ಹಣ ದ್ವಿಗುಣಗೊಳಿಸುವ (ಡಬ್ಲಿಂಗ್) ದಂಧೆಯಲ್ಲಿ ತೊಡಗಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಆರೋಪದಡಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರಕ್ಷಕ ಉಪಾಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ನಾಗೇಂದ್ರ ಪ್ರಸಾದ್ ಅವರನ್ನು ಬೆಂಗಳೂರಿನ ಗಂಗಮ್ಮನಗುಡಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಳೆದ ಶನಿವಾರ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಬಂದೋಬಸ್ತ್ ಕಾರ್ಯಕ್ಕೆ ತೆರಳಿದ್ದ ನಾಗೇಂದ್ರ ಪ್ರಸಾದ್ ಅವರನ್ನು ಬೆಂಗಳೂರಿನ ಗಂಗಮ್ಮಗುಡಿ ಠಾಣೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ವಸತಿ ಗೃಹದಲ್ಲಿದ್ದ ಅವರನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
ಡಿವೈಎಸ್‌ಪಿ ನಾಗೇಂದ್ರ ಪ್ರಸಾದ್ ಹಣ ದ್ವಿಗುಣಗೊಳಿಸುವ ವಂಚನೆ ಜಾಲದಲ್ಲಿ ತೊಡಗಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ವಂಚನೆಗೆ ಒಳಗಾದ ವ್ಯಕ್ತಿ ಸ್ಥಳೀಯ ಪೊಲೀಸರ ಮೇಲೆ ವಿಶ್ವಾಸ ಇಡದೇ ಬೆಂಗಳೂರಿನ ಯಶವಂತಪುರ ಉಪ ವಿಭಾಗದ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅದರಂತೆ ಶನಿವಾರ ಗೌರಿಬಿದನೂರಿನಲ್ಲಿ ಬಂದೋಬಸ್ತ್ನಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ನಾಗೇಂದ್ರ ಪ್ರಸಾದ್‌ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ ಎಂದು ಮೂಲಗಳು ತಿಳಿಸಿದೆ.
ಪೊಲೀಸ್ ಪೇದೆಗಳು ಭಾಗಿ: ಇನ್ನೂ ದಂಧೆಯಲ್ಲಿ ಪೊಲೀಸ್ ಪೇದೆಗಳಾದ ವೆಂಕಟ್, ಸಂತೋಷ್ ಎಂಬುವರು ಸಹ ಭಾಗಿಯಾಗಿದ್ದಾರೆ ಎಂದು ದೂರುದಾರರು ದೂರಿನಲ್ಲಿ ವಿವರಿಸಿದ್ದಾರೆ. ಇವರ ಬಂಧನಕ್ಕೂ ಸಹ ಗಂಗಮ್ಮನಗುಡಿ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ಬಲೆ ಬೀಸಿದ್ದಾರೆ ಎಂದು ಪೊಲೀಸ್ ಇಲಾಖೆಯ ಮೂಲಗಳು ಖಚಿತಪಡಿಸಿವೆ.
ಪರಪ್ಪನ ಆಗ್ರಹಾರ ಜೈಲಿಗೆ?: ಇನ್ನೂ ವ್ಯಕ್ತಿಯೊಬ್ಬರಿಗೆ ಹಣಕಾಸಿನ ವಿಚಾರದಲ್ಲಿ ವಂಚನೆ ಮಾಡಿ ಪೊಲೀಸರ ಕೈಗೆ ಸಾಕ್ಷ್ಯಧಾರಗಳ ಸಮೇತ ಸಿಕ್ಕಿ ಬಿದ್ದಿರುವ ಸದ್ಯ ಬಂಧಿತರಾಗಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್‌ಪಿ ನಾಗೇಂದ್ರ ಪ್ರಸಾದ್‌ರನ್ನು ನಾಯಾಧೀಶರ ಮುಂದೆ ಹಾಜರಿಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶವಾಗಿ ಪೊಲೀಸರು ಪರಪ್ಪನ ಆಗ್ರಹಾರ ಜೈಲಿಗೆ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿವೈಎಸ್‌ಪಿರನ್ನು ಬೆಂಗಳೂರಿನ ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ನಮಗೂ ಗೊತ್ತಾಗಿದೆ. ಆದರೆ ಯಾವ ವಿಚಾರಕ್ಕೆ ಏನು ಎಂಬ ಮಾಹಿತಿ ನಮಗೆ ಗೊತ್ತಿಲ್ಲ.
-ಸುದರ್ಶನ್, ಚಿಕ್ಕಬಳ್ಳಾಪುರ ಆರಕ್ಷಕ ವೃತ್ತ ನಿರೀಕ್ಷಕ