Advertisement

Tax: ವಾಹನಗಳ ಸಂಖ್ಯೆ ದುಪ್ಪಟ್ಟು: ತೆರಿಗೆ ಸಂಗ್ರಹ ಖೋತಾ

11:33 PM Jan 06, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ರಸ್ತೆಗಿಳಿ ಯುತ್ತಿರುವ ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದರೆ ತೆರಿಗೆ ಸಂಗ್ರಹ ಮಾತ್ರ ಕಡಿಮೆ ಆಗುತ್ತಿದೆ!

Advertisement

ಒಂದೆಡೆ ಗ್ಯಾರಂಟಿ ಅನುಷ್ಠಾನಕ್ಕಾಗಿ ಸಾವಿರಾರು ಕೋಟಿ ರೂ. ಖರ್ಚು ಆಗಿರುವುದರಿಂದ ಈ ಬಾರಿ ತೆರಿಗೆ ಸಂಗ್ರಹ ಗುರಿ ಸಾಧಿಸುವುದು ಹೆಚ್ಚು ಮಹತ್ವ ಪಡೆದುಕೊಂಡಿದೆ. ಗುರಿ ಸಾಧನೆಗೆ ಕಟ್ಟುನಿಟ್ಟಿನ ಸೂಚನೆಯೂ ಬಂದಿದೆ. ಅದರಂತೆ ನೋಂದಣಿ ಯಾಗುತ್ತಿರುವ ವಾಹನಗಳ ಸಂಖ್ಯೆ ಏರಿಕೆ ಕ್ರಮದಲ್ಲಿ ಸಾಗಿದೆ. ಅದಕ್ಕೆ ತಕ್ಕಂತೆ ತೆರಿಗೆ ಸಂಗ್ರಹವಾಗುತ್ತಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಇದು ಸಾರಿಗೆ ಇಲಾಖೆಗೆ ಸವಾಲಾಗಿದೆ.

ಇದಕ್ಕೆ ವಿದ್ಯುತ್‌ ಚಾಲಿತ ವಾಹನಗಳು ಹೆಚ್ಚುತ್ತಿ ರುವುದೂ ಒಂದು ಕಾರಣ. ಪೆಟ್ರೋಲ್‌ ಮತ್ತು ಡೀಸೆಲ್‌ ತುಟ್ಟಿಯಾಗುತ್ತಿರುವುದು, ಪರಿಸರ ರಕ್ಷಣೆ ದೃಷ್ಟಿಯಿಂದ ವಿದ್ಯುತ್‌ಚಾಲಿತ ವಾಹನಗಳಿಗೆ ಸರಕಾರಗಳು ನೀಡಿರುವ ಉತ್ತೇಜನ, ಜನರಲ್ಲಿ ಉಂಟಾದ ಜಾಗೃತಿ ಇತ್ಯಾದಿ ಕಾರಣಗಳಿಂದ ರಾಜ್ಯದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಸಂಖ್ಯೆ 2 ವರ್ಷಗಳಿಂದೀಚೆಗೆ ಲಕ್ಷದ ಗಡಿ ದಾಟುತ್ತಿದೆ. ಇದು ನೋಂದಣಿಯಾಗುವ ಸಾಮಾನ್ಯ ವಾಹನಗಳ ಶೇ.10ರಷ್ಟಾಗಿದೆ (ಉದಾ: 10 ಲಕ್ಷದಲ್ಲಿ 1 ಲಕ್ಷ ಇ-ವಾಹನಗಳು). ಈ ಮಾದರಿಯ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಸಹಜವಾಗಿ ಇದು ತೆರಿಗೆ ಸಂಗ್ರಹದ ಮೇಲೆ ಪರಿಣಾಮ ಬೀರುತ್ತಿದೆ.

ಕೇವಲ 4 ವರ್ಷಗಳ ಹಿಂದೆ ನೋಂದಣಿ ಯಾಗುತ್ತಿದ್ದ ವಿದ್ಯುತ್‌ಚಾಲಿತ ವಾಹನಗಳ ಸಂಖ್ಯೆ ಅಂದಾಜು 10ರಿಂದ 11 ಸಾವಿರ ಇತ್ತು. ಈಗ ಇದು ಹತ್ತುಪಟ್ಟು ಅಂದರೆ, 1.10 ಲಕ್ಷಕ್ಕೆ ಏರಿಕೆಯಾಗಿದೆ. ಇದರಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆಯೇ ಹೆಚ್ಚಿದೆ. ಈ ಎಲ್ಲ ವಾಹನಗಳಿಗೆ ತೆರಿಗೆ ವಿನಾಯಿತಿ ಇರುವುದರಿಂದ ತೆರಿಗೆ ಸಂಗ್ರಹ ಖೋತಾ ರೂಪದಲ್ಲಿ ಪರಿಣಮಿಸುವ ಸಾಧ್ಯತೆ ಇದೆ. ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಗಿಂತ 250-300 ಕೋಟಿ ರೂ.ಗಳಷ್ಟು ಕಡಿಮೆ ಆಗಲಿದೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

2023-24ನೇ ಸಾಲಿನಲ್ಲಿ ಸಾರಿಗೆ ಇಲಾಖೆಗೆ 8,625 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ನೀಡಲಾಗಿದೆ. ಡಿಸೆಂಬರ್‌ ಅಂತ್ಯದ ವರೆಗೆ 8,063 ಕೋಟಿ ರೂ. ಸಂಗ್ರಹವಾಗಿದೆ. ಡಿಸೆಂಬರ್‌ ಒಂದೇ ತಿಂಗಳಲ್ಲಿ 877 ಕೋಟಿ ರೂ. ಹರಿದುಬಂದಿದೆ. ಇನ್ನೂ 3 ತಿಂಗಳು ಕಾಲಾವಕಾಶ ಇದ್ದು, ಫೆಬ್ರವರಿ-ಮಾರ್ಚ್‌ ನಲ್ಲಿ ಮತ್ತಷ್ಟು ಸಂಪನ್ಮೂಲ ಕ್ರೋಢೀಕರಣ ಆಗುವ ಸಾಧ್ಯತೆ ಇದ್ದು, ಗುರಿ ತಲುಪಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ’ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಹೇಮಂತ್‌ ಕುಮಾರ್‌ ಹೇಳಿದರು.

Advertisement

ಇವಿ ವಾಹನಗಳಿಗೆ ತೆರಿಗೆ ಪ್ರಸ್ತಾವನೆ ತಿರಸ್ಕೃತ
ವಿದ್ಯುತ್‌ಚಾಲಿತ ವಾಹನಗಳ ನೋಂದಣಿ ಹೆಚ್ಚುತ್ತಿರುವುದರಿಂದ ತೆರಿಗೆ ವಿಧಿಸಲು ಅನುಮತಿ ನೀಡುವಂತೆ ಸಾರಿಗೆ ಇಲಾಖೆಯು ಸರಕಾರಕ್ಕೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರಕಾರ ತಿರಸ್ಕರಿಸಿತು. ಇದಾದ ಬಳಿಕ 20 ಲಕ್ಷಕ್ಕೂ ಅಧಿಕ ಮೌಲ್ಯದ ಇ-ವಾಹನಗಳಿಗಾದರೂ ತೆರಿಗೆ ವಿಧಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೂ ಸರಕಾರ ಒಪ್ಪಿರಲಿಲ್ಲ.

ಪೆಟ್ರೋಲ್‌ ದರ ದುಬಾರಿ: ಇವಿ ವಾಹನಗಳ ಮೊರೆ
ವಿದ್ಯುತ್‌ಚಾಲಿತ ವಾಹನಗಳ ಸಂಖ್ಯೆ ಹೆಚ್ಚಾಗಲು ಹಲವು ಕಾರಣಗಳಿವೆ. ಈ ಪೈಕಿ ಮುಖ್ಯವಾಗಿ ಅವುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಚಾರ್ಜಿಂಗ್‌ ಸ್ಟೇಷನ್‌ಗಳ ಸಂಖ್ಯೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲೇ ಬೆಸ್ಕಾಂನಿಂದ 126 ಚಾರ್ಜಿಂಗ್‌ ಸ್ಟೇಷನ್‌ಗಳ ನಿರ್ಮಾಣವಾಗಿದ್ದು, ಇದಕ್ಕೆ ಸಾರಿಗೆ ಇಲಾಖೆ ಅನುದಾನ ನೀಡಿದೆ. ಎಲೆಕ್ಟ್ರಿಕ್‌ ವಾಹನಗಳ ಖರೀದಿ ದುಬಾರಿ ಎನಿಸಿದರೂ ಇಂಧನ ವೆಚ್ಚ ಇಲ್ಲದಿರುವುದರಿಂದ ಉಳಿತಾಯ ಆಗಲಿದೆ. ಇದು ಗ್ರಾಹಕರಿಗೆ ಲಾಭದಾಯಕ ಎನಿಸಿದೆ. ಜತೆಗೆ ಪರಿಸರದ ಬಗ್ಗೆ ಜಾಗೃತಿ ಉಂಟಾಗಿದೆ. ಸರಕಾರಗಳಿಂದ ಫೇಮ್‌-2 ಅಡಿ ವಾಹನ ತಯಾರಕರಿಗೂ ಹಲವು ರಿಯಾಯಿತಿಗಳನ್ನು ನೀಡಲಾಗಿದೆ. ಇದೆಲ್ಲದರಿಂದ ನೋಂದಣಿಯಲ್ಲಿ ಏರಿಕೆ ಕಂಡು ಬರುತ್ತಿದೆ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ (ಪರಿಸರ ಮತ್ತು ಇ-ಆಡಳಿತ) ಜೆ. ಜ್ಞಾನೇಂದ್ರ ಕುಮಾರ್‌ ಸ್ಪಷ್ಟಪಡಿಸಿದರು.

 50 ಸಾ. ರೂ.ಗಿಂತ ಕಡಿಮೆ ಮೊತ್ತದ ಮೋಟಾರು ಸೈಕಲ್‌ಗೆ ಆ ವಾಹನ ಮೌಲ್ಯದ ಶೇ.10 ತೆರಿಗೆ
 50 ಸಾ. 1 ಲ. ರೂ. ಒಳಗಿನ ಮೋಟಾರು ಸೈಕಲ್‌ಗೆ ಅದರ ಮೌಲ್ಯದ ಶೇ.12 ತೆರಿಗೆ
 1 ಲಕ್ಷ ರೂ. ಮೀರಿದ ಮೋಟಾರು ಸೈಕಲ್‌ಗೆ ಅದರ ಮೌಲ್ಯದ ಶೇ.18 ತೆರಿಗೆ
 ಕಾರು, ಜೀಪು, ಆಮ್ನಿ ಸಹಿತ 4 ಚಕ್ರಗಳ ವಾಹನಗಳು 5 ಲಕ್ಷದ ಒಳಗಿದ್ದರೆ, ಅದರ ಮೌಲ್ಯದ ಶೇ.13 ತೆರಿಗೆ
 5- 10 ಲಕ್ಷ ರೂ. ಒಳಗಿನ ನಾಲ್ಕು ಚಕ್ರದ ವಾಹನಗಳಿಗೆ ಅದರ ಮೌಲ್ಯದ ಶೇ.14 ತೆರಿಗೆ
 10-20 ಲಕ್ಷ ರೂ. ಒಳಗಿರುವ ನಾಲ್ಕು ಚಕ್ರಗಳ ವಾಹನಗಳಿಗೆ ಅದರ ಮೌಲ್ಯದ ಶೇ.17 ತೆರಿಗೆ

  • ವಿಜಯ ಕುಮಾರ ಚಂದರಗಿ
Advertisement

Udayavani is now on Telegram. Click here to join our channel and stay updated with the latest news.

Next