Advertisement

ವಾಹನ ಸವಾರರೇ ಎಚ್ಚರ!

06:00 AM Oct 22, 2017 | Team Udayavani |

ಬೆಂಗಳೂರು: ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೆ ಈಗಾಗಲೇ ಹೆಲ್ಮೆಟ್‌ ಕಡ್ಡಾಯ ಮಾಡಿ ಆಯ್ತು. ಇನ್ಮುಂದೆ 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಹಿಂದೆ ಕುಳಿತು ಸವಾರಿ ಮಾಡುವುದೂ ಕೂಡ ನಿಷಿದ್ಧ!

Advertisement

ಹೌದು, ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ನೂತನ ಆದೇಶದಂತೆ ರಾಜ್ಯಾದ್ಯಂತ 100 ಸಿಸಿಗಿಂತಲೂ ಕಡಿಮೆ ಸಾಮರ್ಥ್ಯ ಇರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರನ್ನು ಕರೆದೊಯ್ಯುವಂತಿಲ್ಲ. ಆದರೆ, ಈ ಆದೇಶ ಈಗಾಗಲೇ ಇರುವ 100 ಸಿಸಿಗಿಂತ ಕಡಿಮೆ ಸಾಮರ್ಥ್ಯ ಇರುವ ದ್ವಿಚಕ್ರ ವಾಹನಗಳಿಗೆ ಅನ್ವಯ ಆಗುವುದಿಲ್ಲ. ಹೊಸದಾಗಿ ರಸ್ತೆಗಿಳಿಯುವ ವಾಹನಗಳಿಗೆ ಮಾತ್ರ ನಿಷೇಧ ಇರುತ್ತದೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತ ಹೇಮಂತ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಟಿವಿಎಸ್‌- 50, ಸ್ಕೂಟಿ, ಲೂನಾ ಸೇರಿದಂತೆ ಹಲವು ಪ್ರಕಾರದ ದ್ವಿಚಕ್ರ ವಾಹನಗಳಲ್ಲಿ ಇನ್ಮುಂದೆ ಡಬಲ್‌ ಸೀಟು (ಎರಡು ಆಸನ)ಗಳಿಗೆ ಅವಕಾಶ ಇರುವುದಿಲ್ಲ. ಒಂದು ಸೀಟುಗಳಿಗೆ ಮಾತ್ರ ಅನುಮತಿ ಇರುತ್ತದೆ.

ಸಾರಿಗೆ ನಿಯಮ 143 (3)ರ ಪ್ರಕಾರ ದ್ವಿಚಕ್ರ ವಾಹನದ ಎಂಜಿನ್‌ ಸಾಮರ್ಥ್ಯ 100 ಸಿಸಿಗಿಂತ ಕಡಿಮೆ ಇದ್ದರೆ, ಅಂತಹ ವಾಹನಗಳಲ್ಲಿ ಹಿಂಬದಿ ಸವಾರಿ ಮಾಡುವಂತಿಲ್ಲ. ಈ ನಿಯಮ ಮೊದಲೇ ಇತ್ತು. ಇದನ್ನು ಜಾರಿಗೊಳಿಸಿರಲಿಲ್ಲ. ಈಗ ಸರ್ಕಾರ ಇದರ ಜಾರಿಗೆ ಆದೇಶ ಹೊರಡಿಸಿದೆ.

ನಿಷೇಧಕ್ಕೆ ಹೆಚ್ಚು ಅಪಘಾತ ಕಾರಣ
ರಸ್ತೆ ಅಪಘಾತ ಪ್ರಕರಣಗಳಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿ, 100 ಸಿಸಿ ಸಾಮರ್ಥಯದ ದ್ವಿಚಕ್ರ ವಾಹನಗಳ ಮೇಲೆ ನಿಷೇಧ ಹೇರಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ. ಎರಡು-ಮೂರು ದಿನಗಳಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಗಳಿಗೆ ಕಳುಹಿಸಲಾಗುವುದು ಎಂದು ಹೇಮಂತ್‌ ಕುಮಾರ್‌ ತಿಳಿಸಿದರು.

ಆರ್‌ಟಿಒ ಮೂಲಕ ದ್ವಿಚಕ್ರ ವಾಹನಗಳ ತಯಾರಿಕೆ ಕಂಪನಿಗಳಿಗೆ ಸೂಚನೆ ನೀಡಲಾಗುವುದು. ಈಗಾಗಲೇ ಮೋಟಾರು ವಾಹನ ಕಾಯ್ದೆಯ ಉಪಬಂಧದಲ್ಲಿ 100 ಸಿಸಿ ವಾಹನಗಳಲ್ಲಿ ಹಿಂಬದಿಯ ಸವಾರರಿಗೆ ಸವಾರಿ ಮಾಡಲು ಅವಕಾಶವಿಲ್ಲ ಎನ್ನುವ ನಿಯಮವಿದ್ದರೂ ಭಾರತೀಯ ರಸ್ತೆ ಕಾಂಗ್ರೆಸ್‌ ಸಾರಿಗೆ ಇಲಾಖೆ ಮಾಡಿದ್ದ ಮನವಿ ಪರಿಗಣಿಸಿ 100 ಸಿಸಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿಯ ಸವಾರರಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

ಸದ್ಯಕ್ಕೆ ಈ ನಿಯಮ ಮುಂಬೈನಲ್ಲಿ ಜಾರಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕಾರಿಗಳಿಗೂ ಸ್ಪಷ್ಟತೆ ಇಲ್ಲ. ರಾಜಧಾನಿ ದೆಹಲಿ, ನೆರೆಯ ಆಂಧ್ರಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next