Advertisement

ತಪ್ಪು ಮಾಹಿತಿಗೆ ಡಬಲ್‌ ದಂಡ!

11:56 AM Apr 05, 2018 | |

ಬೆಂಗಳೂರು: ಹೊಸ ಆರ್ಥಿಕ ವರ್ಷ ಆರಂಭವಾದ ಬೆನ್ನಲ್ಲೇ ಸಂಪನ್ಮೂಲ ಕ್ರೂಢೀಕರಣಕ್ಕೆ ಆದ್ಯತೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಪಾಲಿಕೆಗೆ ತೆರಿಗೆ ವಂಚಿಸುವವರ ಪತ್ತೆ ಮಾಡಿ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.

Advertisement

ಪಾಲಿಕೆಗೆ ಆಸ್ತಿಯ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿರುವವರ ಪತ್ತೆಗೆ ಕ್ರಮಕೈಗೊಂಡಿದ್ದು, ಈಗಾಗಲೇ ಎಂಟು ವಲಯಗಳಲ್ಲಿ ನೂರಾರು ಕಟ್ಟಡಗಳನ್ನು ಪರಿಶೀಲಿಸಿ ವಂಚಕರನ್ನು ಗುರುತಿಸಲಾಗಿದೆ. ಜತೆಗೆ, ತಪ್ಪು ಮಾಹಿತಿ ನೀಡಿದ ಆಸ್ತಿ ಮಾಲೀಕರಿಗೆ ವ್ಯತ್ಯಾಸದ ತೆರಿಗೆಯನ್ನು ದುಪ್ಪಟ್ಟು ದಂಡ ಹಾಗೂ ಬಡ್ಡಿ ಸಮೇತ ಪಾವತಿಸುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ. ಹಾಗೇ ತಪ್ಪು ಮಾಹಿತಿ ನೀಡಿದವರ ಪತ್ತೆ ಕಾರ್ಯ ಕೂಡ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿರುವ ಆಸ್ತಿಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ 2008ರಲ್ಲಿ ಬಿಬಿಎಂಪಿ ಸ್ವಯಂ ಘೋಷಿತ ಆಸ್ತಿ ಘೋಷಣೆ (ಎಸ್‌ಎಎಸ್‌) ಪದ್ಧತಿ ಜಾರಿಗೊಳಿಸಿತ್ತು. ಅದರಂತೆ ಆಸ್ತಿಯ ಮಾಲೀಕರೇ ತಮ್ಮ ಆಸ್ತಿಯ ಮಾಹಿತಿ ಘೋಷಣೆ ಮಾಡಿಕೊಂಡಿದ್ದು, ಈ ವೇಳೆ ಬಹುತೇಕರು ಪಾಲಿಕೆಗೆ ತಪ್ಪು ಮಾಹಿತಿ ನೀಡಿ ತೆರಿಗೆ ವಂಚಿಸಿರುವುದು ಬಯಲಾಗಿದೆ. ಕಳೆದ ವರ್ಷ ಬಿಬಿಎಂಪಿ ಜಿಐಎಸ್‌ ವ್ಯವಸ್ಥೆ ಮೂಲಕ 19 ಲಕ್ಷ ಆಸ್ತಿಗಳನ್ನು ಗುರುತಿಸಿದೆ. ಈ ಮಾಹಿತಿ ಆಧರಿಸಿ ಪರಿಶೀಲಿಸಿದಾಗ ಆಸ್ತಿಗಳಿಗೆ ಸಂಬಂಧಿಸಿದಂತೆ ಎಸ್‌ಎಎಸ್‌ ಪದ್ಧತಿಯಡಿ ಆಸ್ತಿ ಮಾಲೀಕರು ನೀಡಿದ ವಿಸ್ತೀರ್ಣ, ಬಳಕೆ, ಮಹಡಿಗಳ ಮಾಹಿತಿ ತಪ್ಪಾಗಿರುವುದು ಕಂಡುಬಂದಿ¨

350 ಕೋಟಿ ಪಾವತಿಗೆ ನೋಟಿಸ್‌: ಎಸ್‌ಎಎಸ್‌ ಪದ್ಧತಿಯಡಿ ಪಾಲಿಕೆಗೆ ತಪ್ಪು ಮಾಹಿತಿ ನೀಡಿ ವಂಚಿಸಿರುವ ಬೃಹತ್‌ ಆಸ್ತಿಗಳನ್ನು ಪತ್ತೆ ಮಾಡಿರುವ ಅಧಿಕಾರಿಗಳು, 2008ರಿಂದ ಪಾಲಿಕೆಗೆ ಪಾವತಿಸಬೇಕಾದ ವ್ಯತ್ಯಾಸದ ಮೊತ್ತ, ದಂಡ ಹಾಗೂ ಬಡ್ಡಿ ಸೇರಿ 350 ಕೋಟಿ ರೂ. ತೆರಿಗೆ ಪಾವತಿಸುವಂತೆ ಎಂಟು ವಲಯಗಳಲ್ಲಿನ 110 ಆಸ್ತಿಗಳಿಗೆ ಪಾಲಿಕೆ ನೋಟಿಸ್‌ ಜಾರಿಗೊಳಿಸಿದ್ದಾರೆ. 

ಮಾಲ್‌ ಕಟ್ಟಡಗಳಿಂದ ತಪ್ಪು ಮಾಹಿತಿ ಪಾಲಿಕೆ ವ್ಯಾಪ್ತಿಯಲ್ಲಿರುವ ಬೃಹತ್‌ ಆಸ್ತಿಗಳನ್ನು ಟೋಟಲ್‌ ಸ್ಟೇಷನ್‌ ಸರ್ವೇ (ಟಿಎಸ್‌ಎಸ್‌) ಗೆ ಒಳಪಡಿಸಲು ನಿರ್ಧರಿಸಿದ್ದ ಪಾಲಿಕೆ, ಮೊದಲ ಹಂತದಲ್ಲಿ ನಗರದ 40 ಮಾಲ್‌, 70 ಟೆಕ್‌ಪಾರ್ಕ್‌ ಮತ್ತು 5 ಸಾವಿರಕ್ಕೂ ಅಧಿಕ ಬೃಹತ್‌ ವಾಣಿಜ್ಯ ಮಳಿಗೆ ಮತ್ತು ಅಪಾರ್ಟ್‌ಮೆಂಟ್‌ ಕಟ್ಟಡಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಈಗಾಗಲೇ 50 ಬೃಹತ್‌ ಕಟ್ಟಡಗಳನ್ನು ಸರ್ವೇಗೆ ಒಳಪಡಿಸಿದ್ದು, ಆ ಪೈಕಿ ಬಹುತೇಕ ಕಟ್ಟಡಗಳು ಪಾಲಿಕೆಗೆ ತಪ್ಪು ಮಾಹಿತಿ ನೀಡಿರುವುದು ಬಯಲಾಗಿದೆ ಎಂದು ಪಾಲಿಕೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ತಪ್ಪು ತಿದ್ದಿಕೊಳ್ಳಲು ಕಡೇ ಅವಕಾಶ ಆನ್‌ಲೈನ್‌ ಆಸ್ತಿ ತೆರಿಗೆ ಪಾವತಿ ಜಾರಿಗೊಳಿಸಿದ ನಂತರ ಇದೇ ಮೊದಲ ಬಾರಿಗೆ ಆಸ್ತಿ ಮಾಲೀಕರಿಗೆ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪಾಲಿಕೆ ಕೊನೆಯ ಅವಕಾಶ ನೀಡಿದೆ. ಆಸ್ತಿ ಮಾಲೀಕರು ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸುವ ವೇಳೆ ಫಾರಂ 5ರಲ್ಲಿ ತಾವು 2008ರಲ್ಲಿ ನೀಡಿದ ಮಾಹಿತಿ ಪರಿಷ್ಕರಿಸಬಹುದಾಗಿದೆ. ಉದಾಹರಣೆಗೆ 2008ರಲ್ಲಿ ಆಸ್ತಿ ಮಾಲೀಕರು ಒಂದು ಮಹಡಿ ಹೊಂದಿದ್ದು, ನಂತರದಲ್ಲಿ 2 ಅಥವಾ 3 ಮಹಡಿ ನಿರ್ಮಿಸಿದ್ದರೆ ಅಂತಹ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಪಾಲಿಕೆಗೆ ತೆರಿಗೆ ಪಾವತಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಡ್ಡಿಯೊಂದಿಗೆ ಸಂಗ್ರಹ ಆಸ್ತಿ ಮಾಲೀಕರು ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿ ಕಟ್ಟಡದ ಅಳತೆ, ಒಟ್ಟು ಮಹಡಿಗಳ
ಸಂಖ್ಯೆ ಹಾಗೂ ಕಟ್ಟಡ ಬಳಕೆಯ ಉದ್ದೇಶ ಬದಲಿಸಲು ಅವಕಾಶವಿದೆ. ಈ ಹಿಂದೆ ತಪ್ಪು ಮಾಹಿತಿ ನೀಡಿರುವ ಅಥವಾ ಮಾಹಿತಿ ನೀಡಿದ ನಂತರ ಕಟ್ಟಡದಲ್ಲಿ ಬದಲಾವಣೆ ಮಾಡಿರುವ ಈ ಬಾರಿಯೂ ಅದನ್ನು ಸರಿಪಡಿಸಿ ಕೊಳ್ಳದ ಆಸ್ತಿದಾರರಿಗೆ ವ್ಯತ್ಯಾಸದ ತೆರಿಗೆಯನ್ನು ದುಪ್ಪಟ್ಟು ದಂಡ ಹಾಗೂ ಬಡ್ಡಿಯೊಂದಿಗೆ ಸಂಗ್ರಹಿಸಲು ಪಾಲಿಕೆ ನಿರ್ಧರಿಸಿದೆ.
 
ಎಸ್‌ಎಎಸ್‌ ಪದ್ಧತಿಯಲ್ಲಿ ಆಸ್ತಿಗಳ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, 110 ಆಸ್ತಿಗಳಿಗೆ ಡಿಮ್ಯಾಂಡ್‌ ನೋಟಿಸ್‌ ನೀಡಲಾಗಿದೆ. ಆನ್‌ಲೈನ್‌ನಲ್ಲಿ ಆಸ್ತಿ ಮಾಲೀಕರು ಹಿಂದೆ ನೀಡಿ ತಪ್ಪು ಮಾಹಿತಿ ಸರಿಪಡಿಸಿಕೊಳ್ಳಬಹುದಾಗಿದೆ. ಆ ನಂತರವೂ ತಪ್ಪು ಸರಿಪಡಿಸಿಕೊಳ್ಳದಿದ್ದರೆ ದುಪ್ಪಟ್ಟು ದಂಡ, ಬಡ್ಡಿಯೊಂದಿಗೆ ವ್ಯಾತ್ಯಾಸದ ಬಾಕಿ ತೆರಿಗೆ ಪಾವತಿಸಬೇಕಾಗುತ್ತದೆ.
ವೆಂಕಟಾಚಲಪತಿ, ಕಂದಾಯ ವಿಭಾಗದ ಜಂಟಿ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next