ಬೆಂಗಳೂರು: ಸಿಎಂ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ ಅನುಷ್ಠಾನದ ಬಗ್ಗೆ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ. ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಬಜೆಟ್ ಎಂದಿದ್ದಾರೆ. ಆದರೆ ಎಲ್ಲಿಯೂ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಉದ್ಯೋಗ ಸೃಷ್ಟಿ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಡಬಲ್ ಎಂಜಿನ್ ಸರ್ಕಾರದಲ್ಲಿ ಡಬಲ್ ದೋಖಾ ಆಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಕೊಡುತ್ತೇವೆಂದರು. ಆದರೆ ಅತಿ ಹೆಚ್ಚಿನ ಉದ್ಯೋಗ ಕೊರತೆಯಿದೆ. ಇವರು ಯುವಕರ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
20/21 ರಲ್ಲಿ ಉದ್ಯೋಗ ಮೇಳ ನಡೆಸಿಲ್ಲ. 21/22 ರಲ್ಲಿ 54 ಉದ್ಯೋಗ ಮೇಳ ನಡೆಸಿದ್ದಾರೆ. ಆಯ್ಕೆಯಾಗಿರುವುದು ಕೇವಲ 12,823 ಮಾತ್ರ. ಒಟ್ಟು 19 ಸಾವಿರ ಸೆಲೆಕ್ಟ್ ಆಗಿದ್ದಾರೆ. ಆದರೆ ಅದರಲ್ಲೂ ನೌಕರಿ ನೀಡಿರುವುದು 800 ಮಂದಿಗೆ ಮಾತ್ರ. ಇದು ನಮ್ಮ ಕೌಶಲ್ಯಾಭಿವೃದ್ಧಿ ಇಲಾಖೆಯ ಸಾಧನೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ 180 ಗಾರ್ಮೆಂಟ್ಸ್ ಮುಚ್ಚಿವೆ. ಶೇ65 ರಷ್ಟು ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ. ನಾಲ್ಕು ಲಕ್ಷ ಜನ ಕೋವಿಡ್ ನಿಂದ ಕೆಲಸ ಕಳೆದು ಕೊಂಡಿದ್ದಾರೆ. ಟೆಕ್ಸ್ ಟೈಲ್ಸ್, ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಪ್ರವಾಸೋದ್ಯಮದಲ್ಲೇ ಹೊಟೇಲ್ ಸಿಬ್ಬಂದಿ, ಚಾಲಕರು ಸೇರಿ 30 ಲಕ್ಷ ಮಂದಿ ಕೆಲಸ ಕಳೆದುಕೊಂಡರು. ಸದನದಲ್ಲಿ ವಾಟ್ಸಾಪ್ ನೋಡಿ ಮಾತನಾಡಬೇಡಿ. ವಾರ್ಷಿಕ ವರದಿ ನೋಡಿ ಮಾತನಾಡಿ. ಮೋದಿ ಮಾಡುತ್ತಾರೆಂದು ನೋಡಬೇಡಿ. ರಾಜ್ಯದಲ್ಲಿ ಮೊದಲು ನೀವು ಮಾಡಿ. ಉದ್ಯೋಗ ಕೊಡುವ ಕೆಲಸ ಮಾಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ:ಪತ್ರಕರ್ತರ ವೈದ್ಯಕೀಯ ವೆಚ್ಚಕ್ಕೆ ಅನುದಾನ ಮೀಸಲಿಡಲು ಮನವಿ
ರಾಜ್ಯ ಸರ್ಕಾರ ಉದ್ಯಮಶೀಲತಾ ಯೋಜನೆಯಡಿ ಓರ್ವ ವೈದ್ಯ, ನರ್ಸ್, 16 ಮನೆ ಕೆಲಸದವರನ್ನು ಅಬುದಾಬಿಗೆ ಮನೆ ಕೆಲಸಕ್ಕೆ ಕಳಿಸಿದ್ದಾರೆ. ಇವರನ್ನ ಕಳಿಸಲು 6.5 ಕೋಟಿ ಖರ್ಚು ಮಾಡಿದ್ದಾರೆ. ಇದು ನಮ್ಮ ರಾಜ್ಯ ಸರ್ಕಾರದ ಸಾಧನೆ ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತರಬೇತಿ ಮತ್ತು ಉದ್ಯೋಗ ಇಲಾಖೆ ಇದೆ. ಈ ಇಲಾಖೆಯಲ್ಲೇ ಉದ್ಯೋಗ ಕೊರತೆಯಿದೆ. ಇಲಾಖೆಯಲ್ಲಿ 6187 ಉದ್ಯೋಗ ಭರ್ತಿಯಾಗಬೇಕು. ಆದರೆ ಭರ್ತಿಯಾಗಿರುವುದು 2544 ಹುದ್ದೆ ಮಾತ್ರ. ಇನ್ನು 3643 ಹುದ್ದೆಗಳು ಖಾಲಿ ಇವೆ. ಉದ್ಯೋಗಾವಕಾಶ ಕಲ್ಪಿಸುವ ಇಲಾಖೆಯಲ್ಲೇ ಖಾಲಿ ಇವೆ. ಕೌಶಲ್ಯಾಭಿವೃದ್ಧಿ ಇಲಾಖೆಯಲ್ಲಿ ಉದ್ಯೋಗ ಭರ್ತಿಯಿಲ್ಲ. ಇನ್ನು ಯುವಜನತೆಗೆ ಉದ್ಯೋಗ ಎಲ್ಲಿಂದ ಬರುತ್ತದೆ ಎಂದು ಅಂಕಿಅಂಶಗಳ ಸಮೇತ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.