Advertisement

ಮೈನವಿರೇಳಿಸಿದ ಜೋಡೆತ್ತಿನ ಗಾಡಿ ಸ್ಪರ್ಧೆ

02:18 PM Mar 25, 2019 | pallavi |

ಹರಿಹರ: ಗ್ರಾಮ ದೇವತೆ ಉತ್ಸವದ ನಿಮಿತ್ತ ನಗರ ಹೊರವಲಯದ ಆಂಜನೇಯ ದೇವಸ್ಥಾನದ ಬಳಿಯ ಜಮೀನಿನಲ್ಲಿ ನಡೆದ ರಾಜ್ಯಮಟ್ಟದ ಜೋಡೆತ್ತಿನ ಬಂಡಿ ಸ್ಪರ್ಧೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿದ್ದ ಚಕ್ಕಡಿ ಗಾಡಿಗಳು ನೆರೆದವರ ಮೈನವಿರೇಳಿಸಿದವು.

Advertisement

ಗಾಡಿಯ ನೊಗ ಹೊತ್ತು ಅಖಾಡಕ್ಕೆ ಸಜ್ಜಾಗಿ ನಿಲ್ಲುತ್ತಿದ್ದ ಜೋಡಿ ಎತ್ತುಗಳು, ತೀರ್ಪುಗಾರರು ಸೀಟಿ ಊದುತ್ತಿದ್ದಂತೆ ಚಂಗನೆ ನೆಗೆದು ಓಡುತ್ತಿದ್ದವು. ಸ್ಪರ್ಧೆಗೆ ನಿಗ ಪದಿಡಿಸಲಾಗಿದ್ದ ಒಂದು ನಿಮಿಷದ ಅವಧಿಯಲ್ಲಿ ಗರಿಷ್ಠ ದೂರ ಕ್ರಮಿಸಲು ಪರಸ್ಪರ ಪೈಪೋಟಿ ನಡೆಸಿದವು. ಎತ್ತುಗಳ ಓಟದ ವೇಗ ಹೆಚ್ಚಿಸಲು ಗಾಡಿ ಚಾಲಕರು ಬಾರುಕೋಲಿನಿಂದ ಫಳೀರನೆ ಬಾರಿಸಿ ಸದ್ದು ಮಾಡುತ್ತಿದ್ದರು.

ಅಕ್ಕಪಕ್ಕ ನೆರೆದಿದ್ದ ಜನಸ್ತೋಮ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ರೈತರಿಗೆ ಹುಮ್ಮಸ್ಸು ನೀಡುತ್ತಿತ್ತು. ಗಾಡಿಗಳು ಶರವೇಗದಲ್ಲಿ ಮುನ್ನುಗ್ಗುತ್ತಿದ್ದರೆ ಅವುಗಳೊಂದಿಗೆ ಅವರ ಕಡೆಯ ಜನರು ಓಡುತ್ತಾ ಹುರಿದುಂಬಿಸುತ್ತಿದ್ದರು. ಸ್ಪರ್ಧೆಯಲ್ಲಿ ಎಳೆ ಹೋರಿಗಳು ಮಿಂಚಿನಂತೆ ಓಡಿ ಶಹಬ್ಟಾಸ್‌ಗಿರಿ ಗಿಟ್ಟಿಸಿದವು. ಯಂತ್ರ ಚಾಲಿತ ವಾಹನಗಳಿಗಿಂತ ತಾವೇನು ಕಡಿಮೆ ಇಲ್ಲ ಎಂಬುದನ್ನು ಜೋಡೆತ್ತಿನ ಗಾಡಿಗಳು ಸಾಬೀತು ಮಾಡಿದವು.

ಕೊನೆಗೆ ವಿಜೇತ ಎತ್ತುಗಳನ್ನು ಹಾಗೂ ರೈತರನ್ನು ಮುತ್ತಿಕೊಂಡು ಜನರು ಜಯಘೋಷ ಹಾಕಿದರು. ಓಡುವ ಗಾಡಿ ಪಕ್ಕದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವ, ವಿಡಿಯೋ ಮಾಡಿಕೊಳ್ಳುವವರನ್ನು ನಿಯಂತ್ರಿಸಲು ಆಯೋಜಕರು ಶ್ರಮಪಡಬೇಕಾಯಿತು.

ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಬೆಳಗಾವಿ, ಹಾವೇರಿ, ಹುಬ್ಬಳ್ಳಿ, ಶಿವಮೊಗ್ಗ, ಬಳ್ಳಾರಿ, ರಾಣೆಬೆನ್ನೂರು, ಹೊನ್ನಾಳಿ, ದಾವಣಗೆರೆ, ಹರಪನಹಳ್ಳಿ ಮುಂತಾದ ಕಡೆಗಳಿಂದ ಬಂದಿದ್ದ 39 ಜೋಡಿಎತ್ತುಗಳು ಭಾಗವಹಿಸಿದ್ದವು. ಸ್ಪರ್ಧೆ ನಂತರ ಮಹಜೇನಹಳ್ಳಿ ದೇವಸ್ಥಾನದಲ್ಲಿ ವಿಜೇತ ಬಂಡಿ ಮಾಲೀಕರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

Advertisement

ಮಹಾರಾಷ್ಟಕ್ಕೆ 3 ಬಹುಮಾನ: ಸ್ಪರ್ಧೆಯಲ್ಲಿ ಮಹರಾಷ್ಟ್ರ ರಾಜ್ಯ ಕೊಲ್ಲಾಪುರದ ಜೋಡೆತ್ತಿನ ಬಂಡಿ ಪ್ರಥಮ ಸ್ಥಾನ ಪಡೆದು 50 ಸಾವಿರ ರೂ., ಸಾಂಗ್ಲಿಯ ಬಂಡಿ ದ್ವಿತೀಯ ಸ್ಥಾನ ಪಡೆದು 40 ಸಾವಿರ, ಕೊಲ್ಲಾಪುರದ ಮತ್ತೂಂದು ಜೋಡೆತ್ತಿನ ಬಂಡಿ ತೃತೀಯ ಸ್ಥಾನ ಪಡೆದು 30 ಸಾವಿರ ರೂ. ಗಳಿಸಿದವು.

ನಾಲ್ಕನೇಬಹುಮಾನ ಗಳಿಸಿದ ಹುಬ್ಬಳ್ಳಿಯ ಜೋಡೆತ್ತಿನ ಬಂಡಿ 25 ಸಾವಿರ ರೂ., 5ನೇ ಸ್ಥಾನ ಗಳಿಸಿದ ಹೂವಿನಹಡಗಲಿ ಬಂಡಿ 20 ಸಾವಿರ ರೂ., 6ನೇ ಬಹುಮಾನಗಳಿಸಿದ ಶಿಗ್ಗಾವಿಯ ಜೋಡೆತ್ತಿನ ಬಂಡಿ 15 ಸಾವಿರ ರೂ. ಬಹುಮಾನ ಗಳಿಸಿದವು. ಸ್ಪರ್ಧೆಗೆ ಆಗಮಿಸಿದವರಿಗೆ ಊಟ ಹಾಗೂ ಎತ್ತುಗಳಿಗೆ ಮೇವು-ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಗೌಡ್ರ ಗಿರೀಶ್‌, ಉಜ್ಜಪ್ಪರ ಉಜ್ಜಪ್ಪ, ಹೊಸಮನಿ ನರೇಶ್‌, ಖರ್ಚಿಕಾಯಿ ತಿಪ್ಪೇಶ್‌, ಶೇರಾಪುರ ರಾಜಪ್ಪ, ಶೇರಾಪುರ ಶಂಕ್ರಪ್ಪ, ಅಜ್ಜಪ್ಪ, ನಗರಸಭೆ ಮಾಜಿ ಸದಸ್ಯ ವಸಂತಕುಮಾರ್‌, ಮಿಠಾಯಿ ಸಿದ್ದೇಶ್‌, ಬೆಳಕೇರಿ ಚಂದ್ರಪ್ಪ, ಮುದೇಗೌಡ್ರು ಪ್ರಭು, ಮುದೇಗೌಡ್ರು ಹನುಮಂತಪ್ಪ, ಮನೋಜ್‌, ಬೀರೇಶ್‌, ಮುದ್ದಪುರ ಆಶೋಕಪ್ಪ, ಮೂಗಪ್ಪ ನಾಗರಾಜ್‌, ಸದಾಶಿವಪ್ಪ ಕಾರ್ತಿಕ್‌, ಬೆಳಕೇರಿ ನಾಗರಾಜ್‌, ತಿಪ್ಪೇಶ್‌, ಬಾಬು ಮುದ್ದಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next