ದೋಟಿಹಾಳ: ಸಮೀಪದ ಟೆಂಗುಂಟಿ ಗ್ರಾಮದ ಹತ್ತಿರ ಅವೈಜ್ಞಾನಿಕ ಚೆಕ್ ಡ್ಯಾಮ್ ನಿರ್ಮಾಣ ಮಾಡಿದ್ದು, ಇತ್ತೀಚಿಗೆ ಸುರಿದ ಮಳೆಯಿಂದ ಮಳೆಯ ನೀರು ಚೆಕ್ ಡ್ಯಾಮ್ ಪಕ್ಕ ಹರಿದು ಹೋದ ಪರಿಣಾಮ ರಸ್ತೆಯ ಪಕ್ಕದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಸದ್ಯ ಸಮೀಪದ ಮುದೇನೂರ ಗ್ರಾಮದಿಂದ ಟೆಂಗುಂಟಿ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು
ಎಚ್ಚರವಹಿಸಬೇಕಿದೆ.
ತಾಲೂಕಿನ ಟೆಂಗುಂಟಿ ಗ್ರಾಮದ ಹತ್ತಿರ ಇರುವ ಹಳ್ಳಕ್ಕೆ ಕಳೆದ 2-3 ವರ್ಷಗಳ ಹಿಂದೆ ಲಕ್ಷಾಂತರ ರೂ. ಖರ್ಚು ಮಾಡಿ ಚೆಕ್ ಡ್ಯಾಮ್ ನಿರ್ಮಾಣ ಮಾಡಿದ್ದಾರೆ. ಆದರೆ ಚೆಕ್ ಡ್ಯಾಮ್‌ನಲ್ಲಿ ಸದ್ಯ ಕಸ, ಮಣ್ಣು ತುಂಬಿಕೊಂಡು ಸಮರ್ಪಕವಾಗಿ ನೀರು ಹರಿಯದಂತಾಗಿದೆ. ಹೀಗಾಗಿ ಹಳ್ಳದ ನೀರು ಚೆಕ್ ಡ್ಯಾಮ್ ಪಕ್ಕದಲ್ಲಿ ಹಾದು ಹೋಗುತ್ತಿದೆ. ಹೀಗಾಗಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಮಣ್ಣು ಬಾರಿ ಪ್ರಮಾಣದಲ್ಲಿ ಕೊಚ್ಚಿ ಹೋಗಿ ಬೃಹತ್ ಗಾತ್ರದ ಗುಂಡಿ ಬಿದ್ದಿದೆ. ಇದರಿಂದಾಗಿ ವಾಹನ ಸವಾರರು ಜೀವಭಯದಲ್ಲಿ ಸಂಚರಿಸುವಂತಾಗಿದೆ.
ಈ ಕೂಡಲೇ ಸಣ್ಣ ನೀರಾವರಿ ಇಲಾಖೆ ಅಧಿ ಕಾರಿಗಳು ಚೆಕ್ ಡ್ಯಾಮ್‌ನಲ್ಲಿ ಹೂಳನ್ನು ಎತ್ತಿಸಬೇಕು ಹಾಗೂ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಕಾಮಗಾರಿ ಆರಂಭ ಮಾಡಬೇಕು ಎಂದು ಟೆಂಗುಂಟಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಚೆಕ್ ಡ್ಯಾಮ್‌ನ ಇನ್ನೊಂದು ಬದಿಯ ಹೊಲದ ಫಲವತ್ತಾದ ಮಣ್ಣು ನೀರಿನ ರಭಸಕ್ಕೆ ಹಳ್ಳ ಸೇರುತ್ತಿದೆ. ರಸ್ತೆಯ ಬಲ ಭಾಗಕ್ಕೆ ಅಂದಾಜು ಸುಮಾರು 30 ಮೀಟರ್ ಉದ್ದದವರಿಗೆ 5-6 ಅಡಿ ಆಳ ಗುಂಡಿ ಬಿದ್ದಿದೆ. ದಿನದಿಂದ ದಿನಕ್ಕೆ ರಸ್ತೆ ಮಣ್ಣು ಕುಸಿಯುತ್ತಿದೆ. ಈಗಾಗಲೇ ಅರ್ಧದಷ್ಟು ಕೆಳಭಾಗದಲ್ಲಿ ರಸ್ತೆ ಆವರಿಸಿಕೊಂಡಿದೆ.
ಮೇಲ್ಭಾಗದಲ್ಲಿ ರಸ್ತೆ ಬಿರುಕು ಬಿಟ್ಟಿದೆ. ಸಲ್ಪ ಮಳೆಯಾದರೆ ಸಾಕು. ರಸ್ತೆ ಸಂಪೂರ್ಣ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ.
Related Articles
ಚೆಕ್ ಡ್ಯಾಮ್‌ನಿಂದಾಗಿ ಟೆಂಗುಂಟಿ ಹತ್ತಿರ ರಸ್ತೆ ಕುಸಿದಿದೆ. ಈ ಬಗ್ಗೆ ನೀರಾವರಿ ಇಲಾಖೆಯವರ ಗಮನಕ್ಕೆ ತರಲಾಗಿದೆ. ಮತ್ತು ನಮ್ಮ ಇಲಾಖೆಯ ಸಿಬ್ಬಂದಿಯನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದ್ದೇನೆ. ನಾನು ಅನ್ಯ ಕೆಲಸದ ನಿಮಿತ್ತ ಬೇರೆ ಕಡೆ ಬಂದಿದ್ದೇನೆ. ಬಂದ ಕೂಡಲೇ ನಾನು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
*ಪ್ರಭು ಹುನಗುಂದ, ಎಇಇ
ಲೋಕೋಪಯೋಗಿ ಇಲಾಖೆ ಕುಷ್ಟಗಿ