Advertisement

ದೊರೆಸ್ವಾಮಿ ಸ್ವಾವಲಂಬಿ ಹಾಗೂ ತ್ಯಾಗದ ಜೀವನ ನಡೆಸಿದವರು: ಸಿದ್ದರಾಮಯ್ಯ

08:34 PM Aug 08, 2021 | Team Udayavani |

ಬೆಂಗಳೂರು: “ನಾವೆಲ್ಲ ಅಧಿಕಾರದಲ್ಲಿ ಇದ್ದವರು, ಮುಂದೆಯೂ ಮತ್ತೆ ಅಧಿಕಾರ ಬೇಕು ಎನ್ನುವವರು. ಆದರೆ, ದೊರೆಸ್ವಾಮಿ ಸ್ವಾವಲಂಬಿ ಹಾಗೂ ತ್ಯಾಗದ ಜೀವನ ನಡೆಸಿದವರು’ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಗಾಂಧಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ದಿವಂಗತ ಎಚ್‌.ಎಸ್‌. ದೊರೆಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೊರೆಸ್ವಾಮಿ ಚುನಾವಣೆಗೆ ನಿಂತು ರಾಜಕಾರಣ ಮಾಡಬಹುದಿತ್ತು. ಅಧಿಕಾರದ ಗದ್ದುಗೆಯನ್ನೂ ಏರಬಹುದಿತ್ತು. ಆದರೆ, ಯಾವತ್ತೂ ಅದರಿಂದ ಅಂತರ ಕಾಯ್ದುಕೊಂಡು ಬಂದರು. ಎಂದಿಗೂ ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಹೋರಾಟ ಮಾಡಿದವರಲ್ಲ. ಜನರಿಗೆ ಅನ್ಯಾಯವಾದಾಗಲೆಲ್ಲಾ ದನಿ ಎತ್ತುತ್ತಿದ್ದರು. ಸಾಮಾನ್ಯವಾಗಿ ಗಾಂಧಿವಾದದ ಬಗ್ಗೆ ಮಾತನಾಡುವುದು ಸುಲಭ. ಆದರೆ, ಅನುಸರಣೆ ಕಷ್ಟ. ಇವೆರಡನ್ನೂ ನಿರ್ವಹಿಸಿದವರು ದೊರೆಸ್ವಾಮಿ ಎಂದು ಹೇಳಿದರು.

“ನಾವು ಅಧಿಕಾರದಲ್ಲಿದ್ದಾಗ ಅನೇಕ ಬಾರಿ ಬಂದು ಅವರು ಭೇಟಿ ಮಾಡಿದ್ದರು. ಸ್ವಾರ್ಥಕ್ಕಾಗಿ ಎಂದೂ ಬಂದವರಲ್ಲ. ಜನರ ಸಮಸ್ಯೆಗಳು ಇದ್ದಾಗ ಮಾತ್ರ ಬಂದು ಮಾತನಾಡುತ್ತಿದ್ದರು. ತಪ್ಪು ಮಾಡಿದಾಗ ಕಿವಿಹಿಂಡಿದ್ದೂ ಉಂಟು’ ಎಂದು ಮೆಲುಕು ಹಾಕಿದರು.

ಇದನ್ನೂ ಓದಿ:ಪ್ರಧಾನಿಗೆ ಪ್ರತಿಪಕ್ಷಗಳ ವಿಡಿಯೋ ಸಂದೇಶ

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೊರೆಸ್ವಾಮಿ, ಸ್ವಾತಂತ್ರ್ಯ ನಂತರ  ಅಧಿಕಾರಕ್ಕೆ ಬಂದ ನಮ್ಮವರದ್ದೇ ಸರ್ಕಾರಗಳು ತಪ್ಪು ಮಾಡಿದಾಗ‌, ಭ್ರಷ್ಟಾಚಾರ ನಡೆಸಿದಾಗ ಹೋರಾಟ ಮಾಡಿದರು. ಅಷ್ಟೇ ಅಲ್ಲ ಅವರು ಸಾಕಷ್ಟು ನಕ್ಸಲ್‌ ಹೋರಾಟಗಾರರ ಮನಸ್ಸು ಬದಲಾಯಿಸಿದವರು. ದೊರೆಸ್ವಾಮಿ ಮತ್ತು ಗೌರಿ ಲಂಕೇಶ್‌ ಮುಂತಾದವರು ಸಾಕಷ್ಟು ಜನರನ್ನು ಕರೆತಂದು ಉತ್ತಮ ಜೀವನ ರೂಪಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು.

Advertisement

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈಎಸ್‌ವಿ ದತ್ತ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್‌, ಲೇಖಕಿ ಡಾ.ವಸುಂಧರಾ ಭೂಪತಿ, ಎಂ.ಪಿ. ನಾಡಗೌಡ, ದೊರೆಸ್ವಾಮಿ ಅವರ ಮಗ ರಾಜು ದೊರೆಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next