ಬೆಂಗಳೂರು: ನಗರದ ಕಗ್ಗದಾಸಪುರ ಕೆರೆ, ವಿಭೂತಿಪುರ ಕೆರೆ ಹಾಗೂ ದೊಡ್ಡನೆಕುಂದಿ ಕೆರೆಗಳ ಒತ್ತುವರಿಯಾಗಿರುವ ಪ್ರದೇಶಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಯುನೈಟೆಂಡ್ ಬೆಂಗಳೂರು ತಂಡದ ಸದ್ಯರು ಶನಿವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದರು.
ವಿಭೂತಿಪುರ ಕೆರೆಗೆ ಕಸ ಸುರಿಯಲಾಗುತ್ತದೆ ಮತ್ತು ಅಲ್ಲಿಯೇ ಸಮೀಪವಿರುವ ನೀಲಗಿರಿ ತೋಪಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಆರಂಭದಲ್ಲಿ ಕಗ್ಗದಾಸಪುರ ಕೆರೆಯ ಪ್ರದೇಶಕ್ಕೆ ಭೇಟಿ ನೀಡಿ, ಕೆರೆ ಸ್ವತ್ಛತೆಯಲ್ಲಿ ತೊಡಗಿಸಿದ್ದ ತಂಡದೊಂದಿಗೆ ಚರ್ಚೆ ನಡೆಸಲಾಯಿತು.
ಈ ಕೆರೆಯ ಸ್ವತ್ಛತೆಗೆ ಸಂಬಂಧಿಸಿದಂತೆ ಮತ್ತು ಕೊಳಚೆ ನೀರು ಕೆರೆಗೆ ಬಿಡದಂತೆ ಸಾರ್ವಜನಿಕರನ್ನು ಒಗ್ಗೂಡಿಸಿ ಅಭಿಯಾನ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. 15 ದಿನದೊಳಗೆ ಜನರನ್ನು ಸೇರಿಸಿ ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕಾರ್ಯತಂತ್ರ ರೂಪಿಸಬೇಕು ಎಂದು ಎಚ್.ಎಸ್.ದೊರೆಸ್ವಾಮಿಯವರು ಯುನೈಟೆಡ್ ಬೆಂಗಳೂ ಸದಸ್ಯರಿಗೆ ಸಲಹೆ ನೀಡಿದರು.
ಕಗ್ಗದಾಸಪುರ ಕೆರೆ ಸಿ.ವಿ.ರಾಮನ್ ನಗರ ವಾರ್ಡ್ ವ್ಯಾಪ್ತಿಗೆ ಸೇರಿದ್ದು, 47 ಎಕರೆ ಪ್ರದೇಶಲ್ಲಿ ಕೆರೆ ಇದ್ದು, ಕೋಳಿವಾಡ ವರದಿಯ ಪ್ರಕಾರ 3.34 ಎಕೆರೆ ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನು ಸ್ಥಳೀಯರು ನೀಡಿದರು. ವಿಭೂತಿಪುರ ಕೆರೆಗೆ ಭೇಟೆ ನೀಡಿದ್ದ ಸಂದರ್ಭದಲ್ಲಿ ಪಾಲಿಕೆ ಸದಸ್ಯ ನಾಗರಾಜ ಹಾಗೂ ಸಬ್‌ಇನ್ಸ್‌ಪೆಕ್ಟರ್ ಶ್ರೀನಿವಾಸರೆಡ್ಡಿ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಮನವಿ ಆಲಿಸಿದರು.
45.18 ಎಕೆರೆ ಪ್ರದೇಶದಲ್ಲಿ ಈ ಕೆರೆಯಲ್ಲಿ 3.13 ಎಕೆರೆ ಒತ್ತುವರಿಯಾಗಿರುವುದನ್ನು ಸಂಘಟಕರು ಸ್ಥಳೀಯರಿಗೆ ತಿಳಿಸಿದರು. ಒತ್ತುವರಿಯಾಗಿರುವ ಪ್ರದೇಶವನ್ನು ಆದಷ್ಟು ಬೇಗ ತೆರವುಗೊಳಿಸಿಬೇಕು ಮತ್ತು ಬಡವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ದೊರೆಸ್ವಾಮಿ ಒತ್ತಾಯಿಸಿದರು. ನಂತರ ತಂಡವು ದೊಡ್ಡನೆಕುಂದಿ ಕೆರೆ ಪ್ರದೇಶಕ್ಕೆ ಭೇಟಿ ನೀಡಿ, ಸಣ್ಣ ಮಟ್ಟದ ಸಭೆ ನಡೆಸಿತು.
135.30 ಎಕರೆ ಜಾಗದಲ್ಲಿರುವ ಈ ಕೆರೆಯ 16.5 ಎಕರೆ ಜಾಗ ಒತ್ತುವರಿಯಾಗಿದೆ ಮತ್ತು ಕೆರೆಯ ಅಭಿವೃದ್ಧಿಗೆ 8.50 ಕೋಟಿ ವಿನಿಯೋಗ ಮಾಡಲಾಗಿದೆ ಎಂಬದನ್ನು ಅಧಿಕಾರಿಗಳು ಮಾಹಿತಿ ನೀಡಿದರು. ಇಷ್ಟು ದೊಡ್ಡ ಮೊತ್ತ ಅಭಿವೃದ್ಧಿಗೆ ವಿನಿಯೋಗಿಸಿದ್ದರೂ, ಕೆರೆಯಲ್ಲಿ ನೀರೇ ಕಾಣುತ್ತಿಲ್ಲ ಎಂದು ದೊರೆಸ್ವಾಮಿಯವರು ಅಸಮಾಧಾನ ವ್ಯಕ್ತಪಡಿಸಿದರು.