Advertisement

ಕಾಂಗ್ರೆಸ್‌ನ ಕಥೆ ಮುಗೀತು ಅಂದ್ಕೋಬೇಡಿ, ಮತ್ತೆ ಪಕ್ಷ ಎದ್ದು ನಿಂತೀತು!

09:45 AM Oct 14, 2017 | Karthik A |

ಹೊಸದಿಲ್ಲಿ: ಕಾಂಗ್ರೆಸ್‌ ಕಥೆ ಮುಗೀತು ಅಂತ ಅಂದ್ಕೋಬೇಡಿ… 132 ವರ್ಷಗಳ ಇತಿಹಾಸ ಹೊಂದಿದ ಪಕ್ಷ ಮತ್ತೆ ಎದ್ದು ನಿಂತೀತು. ನಾನು ಈ ಮಾತನ್ನು ಹೇಳಿದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ನಾಯಕರಿಗೆ ಪಥ್ಯವಾಗಲಿಕ್ಕಿಲ್ಲ! ಹೀಗಂತ ಹೇಳಿದ್ದು ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಮೊದಲ ಬಾರಿಗೆ ಇಂಡಿಯಾ ಟುಡೇಗೆ ಅವರು ಸಂದರ್ಶನ ನೀಡಿದ್ದು, ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷದ ಬಗ್ಗೆ ಮಾತನಾಡಿದ ಅವರು ಪಕ್ಷ ಅಷ್ಟು ಸುಲಭದಲ್ಲಿ ಅಂತ್ಯವಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಭಾರತ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಸ್ಥಾನಕ್ಕೆ ಒಪ್ಪಿಕೊಂಡ ಪರಿಣಾಮವೇ 2004ರ ಚುನಾವಣೆಯಲ್ಲಿ ಪಕ್ಷಕ್ಕೆ 147 ಸೀಟುಗಳು ಬಂದಿದ್ದವು ಎಂದು ಹೇಳಿದ್ದಾರೆ. ಇದರೊಂದಿಗೆ ಕಾಂಗ್ರೆಸ್‌ ಹಿಂದಿನ ಲೋಕಸಭೆ ಚುನಾವಣೆಯಲ್ಲಿ 200 ಸೀಟು ಗೆದ್ದರೆ, 280 ಸೀಟು ಗೆದ್ದಂತೆ ಎಂಬ ಭಾವನೆ ಹೊಂದಿತ್ತು. ಗೆಲುವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಇದ್ದುದರಿಂದ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ಇದರೊಂದಿಗೆ ತನಗೆ ಪ್ರಧಾನಿ ಸ್ಥಾನ ಲಭ್ಯವಾಗದ್ದರ ಬಗ್ಗೆಯೂ ಮಾತನಾಡಿದ ಅವರು ನಾನು ಬಹುತೇಕ ರಾಜ್ಯಸಭೆಯಲ್ಲೇ ಇದ್ದೆ. ಬಳಿಕ 2004ರಲ್ಲಿ ನಾನು ಲೋಕಸಭೆಗೆ ಆಯ್ಕೆಯಾಗಿದ್ದರೂ ನನಗೆ ಹಿಂದಿ ಬರುತ್ತಿರಲಿಲ್ಲ. ಸರಿಯಾಗಿ ಹಿಂದಿ ಬರದಿದ್ದರೆ, ಪ್ರಧಾನಿ ಹುದ್ದೆಗೆ ತಕ್ಕುದಾದವರಲ್ಲ. ಪ್ರಧಾನಿಯಾಗಿ ಮನಮೋಹನ್‌ ಸಿಂಗ್‌ ಅವರ ಆಯ್ಕೆ ಅತ್ಯಂತ ಯೋಗ್ಯ ಆಯ್ಕೆಯಾಗಿತ್ತು ಎಂದು ಹೇಳಿದ್ದಾರೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧ ಅತ್ಯಂತ ಆಪ್ತವಾಗಿದ್ದಿತು ಎಂದೂ ಹೇಳಿದ್ದಾರೆ.

ಜಿಎಸ್‌ಟಿ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿದ ಅವರು ಒಂದು ಉತ್ತಮ ಕಾನೂನು. ಆದರೆ ಸರಕಾರ ನೀತಿಗಳನ್ನು ರೂಪಿಸುವಾಗ ಆಗಾಗ್ಗೆ ಬದಲಿಸುತ್ತಿರಬಾರದು. ಇದರಿಂದ ಜನರಿಗೆ ಭೀತಿಯುಂಟಾಗಬಾರದು ಎಂದು ಹೇಳಿದ್ದಾರೆ. ಚೀನಾ-ಪಾಕ್‌ ಜೊತೆ ಸಂಬಂಧದ ಬಗ್ಗೆಯೂ ಹೇಳಿದ ಅವರು ಯುದ್ಧ ಯಾವುದಕ್ಕೂ ಪರಿಹಾರವಲ್ಲ. ಮಾತುಕತೆಯೇ ಅಂತಿಮ ಪರಿಹಾರ. ಅದಕ್ಕೆ ಮೀರಿ ಯಾವುದೂ ಇಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next