Advertisement

ಹೆದರಬೇಡಿ, ಸರ್ಕಾರ ನಿಮ್ಮ ಪರ ಇದೆ

11:57 PM Aug 12, 2019 | Lakshmi GovindaRaj |

ಮಂಗಳೂರು/ ಮೈಸೂರು: ನೆರೆ ಸಂತ್ರಸ್ತರು ಭಯಪಡುವ ಅಗತ್ಯವಿಲ್ಲ. ಸರ್ಕಾರ ಅವರ ಪರ ಇದ್ದು, ಯಾರೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸೋಮವಾರ ದಕ್ಷಿಣ ಕನ್ನಡ ಹಾಗೂ ಮೈಸೂರು ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಮೈಸೂರು ಮತ್ತು ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

Advertisement

ನಿರಾಶ್ರಿತರ ಜಮೀನುಗಳು ಏನಾಗಿವೆ ಎಂಬುದರ ಬಗ್ಗೆ ಸರ್ವೇ ಮಾಡಿಸುತ್ತಿದ್ದೇನೆ. ಎಲ್ಲೆಲ್ಲಿ ಹಾನಿಯಾಗಿದೆ ಅವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿಗೆ ಎಲ್ಲಾ ಕೆಲಸವನ್ನು ಮಾಡುತ್ತೇವೆ. ಮಳೆ, ಪ್ರವಾಹದಿಂದ ಬೆಳೆ ಹಾನಿಗೀಡಾಗಿರುವ ಬಗ್ಗೆ ಅಧಿಕಾರಿಗಳು ಸರ್ವೇ ನಡೆಸಿ ವರದಿ ನೀಡಿದ ಬಳಿಕ ಪರಿಹಾರ ಕೊಡಲಾಗುವುದು. ರಾಜ್ಯ, ಕೇಂದ್ರ ಸರಕಾರ ಸಂತ್ರಸ್ತರು, ರೈತರ ನೆರವಿಗೆ ನಿಲ್ಲಲಿದೆ. ಯಾವುದೇ ಸಂತ್ರಸ್ತರು ಭಯ, ಆತಂಕ ಪಡುವ ಅಗತ್ಯವಿಲ್ಲ. ಎರಡೂ ಸರಕಾರಗಳು ಜನರೊಂದಿಗೆ ಇರುತ್ತವೆ ಎಂದು ಅಭಯ ನೀಡಿದರು.

ಪ್ರವಾಹದಿಂದ ಸಂಕಷ್ಟಕ್ಕೀಡಾಗಿರುವವರು ಕಂಗಾಲಾಗುವುದು ಬೇಡ. ಆಗಿರುವ ಹಾನಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ. ಯಾರೂ ಆತಂಕ ಪಡುವುದು ಬೇಡ ಎಂದರು. ರಾಷ್ಟ್ರೀಯ ವಿಕೋಪವೆಂದು ಘೋಷಣೆ ಮಾಡಬೇಕೆಂಬ ವಿಪಕ್ಷಗಳ ಒತ್ತಾಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಏನಾಗುತ್ತದೋ ನೋಡೋಣ ಎಂದಷ್ಟೇ ಹೇಳಿದರು.

ಅಧಿಕಾರಿಗಳ ಸಭೆ ನಡೆಸಿದ ಸಿಎಂ: ಧರ್ಮಸ್ಥಳದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ, ನೆರೆ ಸಂತ್ರಸ್ತರಿಗೆ ಹೊಸದಾಗಿ ಮನೆ ನಿರ್ಮಾಣಕ್ಕೆ ಅಧಿಕಾರಿಗಳು ಕಾನೂನಿನ ಸಬೂಬು ನೀಡಬಾರದು. ಜಾಗ ಹಾಗೂ ಖಾತೆ ಸಮಸ್ಯೆ ಸೇರಿ ಸೂಕ್ತ ದಾಖಲೆ ಪತ್ರಗಳ ಕೊರತೆ ಇದ್ದರೆ ಅದನ್ನು ಸರಿಪಡಿಸುವ ಹೊಣೆ ಅಧಿಕಾರಿಗಳದ್ದು. ನೆರೆ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಬಯಸಿದಾಗ ಹೊಸ ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ನೆರವು ನೀಡಬೇಕು ಎಂದು ಖಡಕ್‌ ಸೂಚನೆ ನೀಡಿದರು.

ಅಡಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ಗೆ ಬೇಡಿಕೆ: ಸಭೆಯಲ್ಲಿ ಮಾತನಾಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು, ಸುಳ್ಯ, ಪುತ್ತೂರು, ಬಂಟ್ವಾಳಗಳಲ್ಲಿ ವ್ಯಾಪಕ ಮಳೆಯಿಂದ ಅಡಕೆ ತೋಟ ಹಾನಿಗೀಡಾಗಿದೆ. ಅಡಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ಒತ್ತಾಯಿಸಿದರು.

Advertisement

ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆದ ಯಡಿಯೂರಪ್ಪ
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದಲ್ಲಿ ಸುಖ-ಶಾಂತಿ, ನೆಮ್ಮದಿಗಾಗಿ ಪ್ರಾರ್ಥನೆ ಸಲ್ಲಿಸಿದರು.ಇದೇ ವೇಳೆ ಕ್ಷೇತ್ರದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ಹೆಗ್ಗಡೆಯವರ ಸಹೋದರ ಡಿ.ಹರ್ಷೇಂದ್ರ ಕುಮಾರ್‌ ಅವರು ಹೆಗ್ಗಡೆ ನಿವಾಸದಲ್ಲಿ ಮುಖ್ಯ ಮಂತ್ರಿಯವರನ್ನು ಸ್ವಾಗತಿಸಿದರು.

ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆ ಮಾಡಿದ ಬಳಿಕ ಕ್ಷೇತ್ರಕ್ಕೆ ಆಗಮಿಸಿದ ಮುಖ್ಯಮಂತ್ರಿ ಅವರು, ಸಾಂಪ್ರದಾಯಿಕ ಉಡುಪು ಧರಿಸಿ ದೇಗುಲ ಪ್ರವೇಶಿಸಿದರು. ವಾದ್ಯಘೋಷಗಳೊಂದಿಗೆ ಸಿಎಂ ಅವರನ್ನು ದೇವಳದ ಸಂಪ್ರದಾಯದ ಪ್ರಕಾರ ಬರಮಾಡಿಕೊಳ್ಳಲಾಯಿತು. ದೇವರ ದರ್ಶನದ ಬಳಿಕ ಸನ್ನಿಧಿ ಅತಿಥಿಗೃಹದಲ್ಲಿ ಭೋಜನ ಸ್ವೀಕರಿಸಿದರು. ಬಳಿಕ, ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕುರಿತು ಜಿಲ್ಲಾಮಟ್ಟದ ಅಧಿ ಕಾರಿಗಳೊಂದಿಗೆ ಸಮಾಲೋಚನ ಸಭೆ ನಡೆಸಿ, ತಕ್ಷಣ ಪರಿಹಾರದ ಕುರಿತು ಕಾರ್ಯ ಪ್ರವೃತ್ತರಾಗುವಂತೆ ನಿರ್ದೇಶಿಸಿದರು.

ಶಿವಮೊಗ್ಗದಲ್ಲಿ ಪರಿಶೀಲನೆ ಇಂದು
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಗಳವಾರ ಶಿವಮೊಗ್ಗದಲ್ಲಿ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಮಂಗಳವಾರ ಮುಂಜಾನೆ ಶಿವಮೊಗ್ಗಕ್ಕೆ ರೈಲಿನಲ್ಲಿ ತಲುಪಲಿರುವ ಯಡಿಯೂರಪ್ಪ, ಬಳಿಕ ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದಲ್ಲಿ ಹಾನಿಗೊಳಗಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಶಿವಮೊಗ್ಗ ನಗರದಲ್ಲಿ ಹಾನಿಗೊಳಗಾದ ಪ್ರದೇಶಗಳನ್ನು ಪರಿಶೀಲಿಸಲಿದ್ದಾರೆ.

ಬೆಳಗ್ಗೆ 9.45ಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು, ಸಂಸದರು, ಶಾಸಕರೊಂದಿಗೆ ಸಭೆ ನಡೆಸಲಿರುವ ಮುಖ್ಯಮಂತ್ರಿ, ಬಳಿಕ ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ನಂತರ, ಅಂಜನಾಪುರ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಬೆಳಗ್ಗೆ 11.45ಕ್ಕೆ ಶಿಕಾರಿಪುರ ತಾಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಮಧ್ಯಾಹ್ನ ಸೊರಬ ಹಾಗೂ ಸಾಗರ ತಾಲೂಕುಗಳಲ್ಲಿ ಪರಿಶೀಲನೆ ನಡೆಸಿ, ಬಳಿಕ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

ಹಾನಿ ಕಂಡು ಬೆಚ್ಚಿದ ಬಿಎಸ್‌ವೈ
ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಕುಕ್ಕಾವು ಪ್ರದೇಶಕ್ಕೆ ಭೇಟಿ ನೀಡಿದ ಯಡಿಯೂರಪ್ಪ, ಅಲ್ಲಿನ ಭೀಕರತೆಯನ್ನು ಕಂಡು ಬೆಚ್ಚಿ ಬಿದ್ದರು. ಇಂದೊಂದೇ ಪ್ರದೇಶದಲ್ಲಿನ ಭೀಕರತೆ ಇಷ್ಟಿದ್ದರೆ ತಾಲೂಕಿನ ಇನ್ನುಳಿದ ಗ್ರಾಮಗಳ ಪರಿಸ್ಥಿತಿ ಹೇಗಿರಬಹುದೆಂದು ಚಿಂತಿಸಿದ ಅವರು, ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಐವನ್‌ ಡಿ’ಸೋಜಾ ಅವರು ಸಂತ್ರಸ್ತರಿಗೆ ತಕ್ಷಣ ಪರಿಹಾರ ಘೋಷಿಸಬೇಕು ಎಂದು ಮನವಿ ನೀಡಿದರು. ಆರ್‌ಎಸ್‌ಎಸ್‌ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next