Advertisement

ಆತಂಕ ಬೇಡ-ಮುನ್ನೆಚ್ಚರಿಕೆ ವಹಿಸಿ: ಡಿಸಿ

01:39 AM Jul 18, 2019 | sudhir |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ-ಬಿಸಿಲು ಕಣ್ಣಾಮುಚ್ಚಾಲೆಯ ಪರಿಣಾಮ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಇದರ ಹತೋಟಿಗೆ ಜಿಲ್ಲಾಡಳಿತ ವ್ಯಾಪಕ ಕಾರ್ಯತಂತ್ರಗಳನ್ನು ರೂಪಿಸಿದ್ದು, ಸಾರ್ವಜನಿಕರು ಕೂಡ ಸೊಳ್ಳೆ ಉತ್ಪತ್ತಿಯ ತಾಣಗಳನ್ನು ನಾಶಪಡಿಸುವ ಮೂಲಕ ಎಚ್ಚರಿಕೆ ವಹಿಸಬೇಕು. ಡೆಂಗ್ಯೂ ಗುಣಮುಖವಾಗುವ ಜ್ವರವಾದ್ದರಿಂದ ಯಾರೂ ಗಾಬರಿಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ತಿಳಿಸಿದರು.

Advertisement

ಜಿಲ್ಲೆಯ ವಿವಿಧ ಖಾಸಗಿ-ಸರಕಾರಿ ಆಸ್ಪತ್ರೆಗಳ ಪ್ರಮುಖರ ಜತೆಗೆ ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿಶೇಷ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.

352 ಡೆಂಗ್ಯೂ ಪ್ರಕರಣ

ಜಿಲ್ಲೆಯಾದ್ಯಂತ ಈ ವರೆಗೆ 352 ಡೆಂಗ್ಯೂ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 200ರಷ್ಟು ಪ್ರಕರಣ ವರದಿಯ ಹಂತದಲ್ಲಿದ್ದು, 139 ಚಿಕಿತ್ಸಾ ಹಂತದಲ್ಲಿವೆ. ಉಳಿದ ಪ್ರಕರಣಗಳು ಗುಣಮುಖವಾಗಿದೆ. ಕಳೆದ ತಿಂಗಳು (ಜೂನ್‌) 75 ಪ್ರಕರಣಗಳು ಡೆಂಗ್ಯೂ ಪಾಸಿಟಿವ್‌ ಪತ್ತೆಯಾಗಿದ್ದು, ಜುಲೈಯಲ್ಲಿ ಪ್ರಮಾಣ ಏರಿಕೆಯಾಗಿದೆ. ಆದರೆ ಗಾಬರಿಪಡುವ ಅಗತ್ಯವಿಲ್ಲ. ಕಳೆದ ವರ್ಷ ಜೂನ್‌ನಲ್ಲಿ 230 ಪಾಸಿಟಿವ್‌ ಪ್ರಕರಣಗಳಿದ್ದವು ಎಂದರು.

ಜಾಗೃತಿಗೆ 200 ತಂಡ

Advertisement

ಪಾಲಿಕೆ ವ್ಯಾಪ್ತಿಯ ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿ ಅರಿವು ಮೂಡಿಸಲು 200 ತಂಡಗಳನ್ನು ರಚಿಸಲು ನಿರ್ಧರಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಹಾಗೂ ಪಾಲಿಕೆ ಸಿಬಂದಿ ಮನೆ ಮನೆಗೆ ಭೇಟಿ ನೀಡಿ ಜ್ವರ ಪೀಡಿತರಿದ್ದರೆ ತಪಾಸಣೆ ನಡೆಸಲಿದ್ದಾರೆ. ಸೊಳ್ಳೆ ನಿರ್ಮೂಲನಕ್ಕೆ ಪ್ರತೀ ಮನೆಯ ಒಳ-ಹೊರಗೆ ಫಾಗಿಂಗ್‌ ನಡೆಸಲು ನಿರ್ಧರಿಸಲಾಗಿದೆ. ಎಂದು ಜಿಲ್ಲಾಧಿಕಾರಿ ಕೋರಿದರು.

ಡೆಂಗ್ಯೂ ಹರಡುವ ಸೊಳ್ಳೆಗಳು ಶುದ್ಧ ನೀರಿನ ಲ್ಲಿಯೇ ಇರುತ್ತವೆ. ಆದ್ದರಿಂದ ಮಳೆ ನೀರನ್ನು ಅಂಗಳ,ತಾರಸಿ, ಬಕೆಟ್‌ಗಳಲ್ಲಿ ತುಂಬಿಸಿಡುವ ಕ್ರಮವನ್ನು ಕೈಬಿಡಬೇಕು. ಮನೆಯ ಒಳಗೆ ನೀರು ಸಂಗ್ರಹಿಸುವಾ ಗಲೂ ವಿಶೇಷ ಎಚ್ಚರ ಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮೈಮುಚ್ಚುವ ಉಡುಪು ಧರಿಸಿದರೆ ಉತ್ತಮ ಎಂದು ಜಿಲ್ಲಾಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next