Advertisement
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಯಶವಂತಪುರ, ಶಾಂತಿನಗರ, ಶಿವಾಜಿನಗರ, ಕಾರ್ಪೋರೇಷನ್, ಮಾರ್ಕೇಟ್ ಪ್ರಮುಖ ನಿಲ್ದಾಣಗಳು ಸೇರಿ ನಗರದ 251 ಕಡೆ ಡಿಜಿಟಲ್ ಫಲಕಗಳನ್ನು ಅಳವಡಿಸಲು ಬಿಎಂಟಿಸಿ ಯೋಜನೆ ರೂಪಿಸಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಮುಂದಿನ ಎರಡೂವರೆ ತಿಂಗಳಲ್ಲಿ ಡಿಜಿಟಲ್ ಫಲಕಗಳು ಪ್ರಮುಖ ಬಸ್ ನಿಲ್ದಾಣಗಳಲ್ಲಿ ರಾರಾಜಿಸಲಿವೆ.
Related Articles
Advertisement
ಅಲ್ಲದೆ, ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಮಾಹಿತಿ ಕೇಂದ್ರಗಳ (ಪಿಐಎಸ್) ಸ್ಥಾಪಿಸಿದ ಬಿಎಂಟಿಸಿ, ಅದೇ ಮಾದರಿಯಲ್ಲಿ 251 ಕಡೆ ನಿರಂತರ ಬಸ್‌ಗಳ ಮಾಹಿತಿ ನೀಡುವ ಡಿಜಿಟಲ್ ಮಾಹಿತಿ ಫಲಕಗಳ ಅಳವಡಿಸಲು ಸಿದ್ಧತೆ ನಡೆಸಿದೆ ಎಂದು ತಿಳಿಸಿದ್ದಾರೆ.
ಪಿಪಿಪಿ ಮಾದರಿ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿ ಹಲವು ಕಡೆ ಸಾರ್ವಜನಿಕ ಮಾಹಿತಿ ಕೇಂದ್ರಗಳನ್ನು ಬಿಎಂಟಿಸಿ ಸ್ಥಾಪಿಸಿತ್ತು. ಆದರೆ, ಸಮರ್ಪಕವಾಗಿ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಡಿಜಿಟಲ್ ಮಾಹಿತಿ ಫಲಕಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಶೇ.50ರಷ್ಟು ಜಾಹೀರಾತಿಗೆ ಅವಕಾಶ: ಡಿಜಿಟಲ್ ಫಲಕಗಳು ಬೆಳಗ್ಗೆ 5 ರಿಂದ ರಾತ್ರಿ 11ವರೆಗೆ ಕಾರ್ಯನಿರ್ವಹಿಸಲಿವೆ. ಫಲಕಗಳ ಅಳವಡಿಕೆ ಗುತ್ತಿಗೆ ಪಡೆಯುವ ಸಂಸ್ಥೆಯವರು ಒಟ್ಟಾರೆ ಸಮಯದ ಶೇ.50ರಷ್ಟು ಸಮಯ ಜಾಹೀರಾತು ಪ್ರಕಟಿಸಲು ಅವಕಾಶ ನೀಡಲಾಗಿದೆ.
ಕೆಲ ಜಾಹೀರಾತು ನಿಷೇಧ: ಖಾಸಗಿ ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ಜಾಹೀರಾತು, ಧೂಮಪಾನ, ಮದ್ಯಪಾನ, ಮಾದಕದ್ರವ್ಯ ಸೇರಿದಂತೆ ಪ್ರಚೋದನಾಕಾರಿ ಹಾಗೂ ಅಶ್ಲೀಲ ಸಂದೇಶ ಸಾರುವ ಜಾಹೀರಾತುಗಳಿಗೆ ಬಿಎಂಟಿಸಿ ನಿಷೇಧ ಹೇರಿದೆ. ನಿಯಮ ಮೀರಿದರೆ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಪಿಎಸ್ ಮೂಲಕ ಬಸ್‌ಗಳ ಮಾಹಿತಿ: ನಿಗಮದಲ್ಲಿನ ಸುಮಾರು 6 ಸಾವಿರ ಬಸ್‌ಗಳ ಪೈಕಿ 2,200ಕ್ಕೂ ಹೆಚ್ಚು ಬಸ್‌ಗಳಲ್ಲಿ ಈಗಾಗಲೇ ಜಿಪಿಎಸ್ ಅಳವಡಿಸಲಾಗಿದೆ. ಅದರ ಆಧಾರದಲ್ಲಿ ಬಸ್‌ಗಳು ಎಲ್ಲಿ ಹೋಗುತ್ತಿವೆ. ಎಲ್ಲಿ ನಿಂತಿವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪಡೆಯುತ್ತಿದ್ದು ಅದೇ ಮಾಹಿತಿ ಆಧರಿಸಿ ಡಿಜಿಟಲ್ ಫಲಕಗಳ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಿಂದೆಯೇ ಬಿಎಂಟಿಸಿ ಅಧಿಕಾರಿಗಳು ಈ ರೀತಿಯ ಪ್ರಯೋಗಕ್ಕೆ ಮುಂದಾಗಿದ್ದರಾದರೂ ಅದು ಸಮರ್ಪಕವಾಗಿ ಜಾರಿಯಾಗಿರಲಿಲ್ಲ.
ಪ್ರಯಾಣಿಕರ ಅನುಕೂಲಕ್ಕಾಗಿ ಕೆಲವೊಂದು ಬಸ್‌ನಿಲ್ದಾಣಗಳಲ್ಲಿ ಸ್ಥಾಪಿಸಿದ ಸಾರ್ವಜನಿಕ ಮಾಹಿತಿ ಕೇಂದ್ರಗಳು ಕೆಲ ಕಾರಣಗಳಿಂದ ಸಮರ್ಪಕವಾಗಿ ಜಾರಿಯಾಗಲಿಲ್ಲ. ಇದೀಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 251 ಕಡೆ ನಿರಂತರ ಬಸ್ ಸಂಚಾರ ಮಾಹಿತಿ ನೀಡುವ ಡಿಜಿಟಲ್ ಫಲಕಗಳ ಅಳವಡಿಕೆಗೆ ಮುಂದಾಗಿದ್ದೇವೆ. ಇದರಿಂದಾಗಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ. -ವಿ.ಪೊನ್ನುರಾಜು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಡಿಜಿಟಲ್ ಫಲಕ ಅಳವಡಿಸುವ ಪ್ರಮುಖ ನಿಲ್ದಾಣಗಳ ವಿವರ
ನಿಲ್ದಾಣ ಫಲಕಗಳ ಸಂಖ್ಯೆ
-ಕೆಂಪೇಗೌಡ 71
-ಶಾಂತಿನಗರ 20
-ಯಶವಂತಪುರ 15
-ಶಿವಾಜಿನಗರ 20
-ಕೆಂಗೇರಿ 10
-ಬನಶಂಕರಿ 5
-ವಿಜಯನಗರ 5
-ವೈಟ್‌ಫೀಲ್ಡ್ 5
-ಜಯನಗರ 4ನೇ ಬ್ಲಾಕ್ 5
-ದೊಮ್ಮಲೂರು 5
-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 7
-ಬನ್ನೇರುಘಟ್ಟ ಟಿಟಿಎಂಸಿ 3 * ವೆಂ.ಸುನೀಲ್ ಕುಮಾರ್