Advertisement

ಬಡ್ಡಿ ಕಡಿಮೆಯಾದರೂ ಚಿಂತಿಸಬೇಡಿ, ದಾರಿಗಳಿವೆ!

01:49 PM Jun 01, 2020 | mahesh |

ಕೋವಿಡ್ ಪರಿಣಾಮ ಆರ್‌ಬಿಐ, ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಘೋಷಿಸಿವೆ. ಜನರಿಗೆ ಅನುಕೂಲವಾಗಲಿ ಎಂಬ ಹಿನ್ನೆಲೆಯಲ್ಲಿ ಘೋಷಿಸಿದ ಕ್ರಮಗಳು, ಕೆಲವೊಮ್ಮೆ ಪರೋಕ್ಷವಾಗಿ ಅನನುಕೂಲವನ್ನೂ ಉಂಟು ಮಾಡಿವೆ. ಆರ್‌ಬಿಐ ರೆಪೋದರ ಇಳಿಸಿರುವುದರಿಂದ, ಬ್ಯಾಂಕ್ಗಳು ಉಳಿತಾಯ ಠೇವಣಿಗಳ ಮೇಲೆ ಬಡ್ಡಿದರ ಇಳಿಸಿವೆ. ಇದರಿಂದ ಇಕ್ಕಟ್ಟಿಗೆ ಸಿಕ್ಕಿರುವ ಗ್ರಾಹಕರು ಮಾಡಬೇಕಾಗಿರುವುದೇನು?

Advertisement

ನಿಗದಿತ ಠೇವಣಿಗಳ ಮೇಲೆ ಬ್ಯಾಂಕ್‌ಗಳಿಂದ ಬಡ್ಡಿ ಕಡಿತ, ಚಿಂತೆಯಲ್ಲಿ ಗ್ರಾಹಕರು, ಪರಿಹಾರಗಳೇನು?

ಬಡ್ಡಿ ಇಳಿಸಿದ ಬ್ಯಾಂಕ್‌ಗಳು
ದೇಶದಲ್ಲಿ ಸ್ವಲ್ಪ ಹಣ ಹರಿದಾಡಲಿ ಎಂಬ ದೃಷ್ಟಿಯಿಂದ ಆರ್‌ಬಿಐ ಪದೇ ಪದೇ ರೆಪೋ ಇಳಿಸಿದೆ. ರೆಪೋ ಇಳಿಸಿದಾಗ ಬ್ಯಾಂಕ್‌ಗಳು ಆರ್‌ಬಿಐನಿಂದ ಹಣ ಪಡೆಯುತ್ತವೆ. ಅದನ್ನು ಜನರಿಗೆ ನೀಡುತ್ತವೆ. ಮತ್ತೂಂದು ಕಡೆಯಿಂದ ಬ್ಯಾಂಕ್‌ಗಳು ತನ್ನಲ್ಲಿ ಜನ ಹಣ ಇಡುವುದನ್ನು ನಿಯಂತ್ರಿಸುತ್ತವೆ (ಬಡ್ಡಿ ಕಡಿಮೆ ಮಾಡುವ ಮೂಲಕ). ಇದರಿಂದ ಹಣ ಜನರ ಬಳಿಯೇ ಓಡಾಡುತ್ತದೆ ಎನ್ನುವುದು ಉದ್ದೇಶ. ಸದ್ಯ ಬಹುತೇಕ ಬ್ಯಾಂಕ್‌ಗಳು ಹಾಗೆಯೇ ಮಾಡಿವೆ.

ಸಮಸ್ಯೆಯೇನು?
ಬ್ಯಾಂಕ್‌ಗಳು ನಿಗದಿತ ಅವಧಿಯ ಠೇವಣಿಗಳ ಮೇಲೆ ಬಡ್ಡಿಯನ್ನು ಕಡಿತ ಮಾಡಿವೆ. ದೇಶದ ಬೃಹತ್‌ ಬ್ಯಾಂಕ್‌ಗಳಾದ ಎಸ್‌ಬಿಐ, ಐಸಿಐಸಿಐ ಸೇರಿ
ಹಲವು ಬ್ಯಾಂಕ್‌ಗಳು ಬಡ್ಡಿ ಕಡಿತ ಮಾಡಿದ್ದರಿಂದ ಅದನ್ನೇ ನಂಬಿಕೊಂಡಿದ್ದ ಹಲವರು ಇಕ್ಕಟ್ಟಿಗೆ ಸಿಲುಕಲಿದ್ದಾರೆ. ಹಿರಿಯ ನಾಗರಿಕರಿಗೆ ಇದು ಹೆಚ್ಚು ತಾಪತ್ರಯ ಉಂಟು ಮಾಡುತ್ತದೆ.

ರೆಪೋದರ ಅಂದರೇನು?
ರೀಪರ್ಚೇಸ್‌ ರೇಟ್‌ (ಮರುಖರೀದಿ ದರ) ಅನ್ನು ಚುಟುಕಾಗಿ ರೆಪೋ ಎನ್ನಲಾಗುತ್ತದೆ. ದೇಶದ ಆರ್ಥಿಕತೆಯನ್ನು ನಿಯಂತ್ರಿಸಲು ಆರ್‌ಬಿಐ ಇದನ್ನು ಬಳಸುತ್ತದೆ. ಬ್ಯಾಂಕ್‌ಗಳು ಆರ್‌ಬಿಐನಿಂದ ಕಿರು ಅವಧಿಯ ಸಾಲವನ್ನು ಪಡೆಯುತ್ತವೆ. ಅದಕ್ಕೆ ಆರ್‌ಬಿಐ ವಿಧಿಸುವ ಬಡ್ಡಿಯೇ ರೆಪೋ ದರ. ಒಂದು ವೇಳೆ ಆರ್‌ಬಿಐನಲ್ಲಿ ಬ್ಯಾಂಕ್‌ಗಳು ಹಣ ಇಟ್ಟರೆ, ಅದಕ್ಕೆ ನೀಡಲ್ಪಡುವ ಬಡ್ಡಿಗೆ ರಿವರ್ಸ್‌ ರೆಪೋ ದರ ಎನ್ನಲಾಗುತ್ತದೆ! ದೇಶದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಂಡು ಈ ದರವನ್ನು ನಿರ್ಧರಿಸಲಾಗುತ್ತದೆ. ಒಂದು ವೇಳೆ ಆರ್‌ಬಿಐ ರೆಪೋದರ ಜಾಸ್ತಿ ಮಾಡಿದರೆ, ಆಗ ಬ್ಯಾಂಕ್‌ಗಳು ತೆಗೆದುಕೊಳ್ಳುವ ಹಣಕ್ಕೆ ವಿಪರೀತ ಬಡ್ಡಿ ಬೀಳುತ್ತದೆ. ಆದ್ದರಿಂದ ಬ್ಯಾಂಕ್‌ಗಳು ಆ ತಂಟೆಗೆ ಹೋಗುವುದಿಲ್ಲ. ಬದಲಿಗೆ ಜನರ ಠೇವಣಿಗಳಿಗೆ ತುಸು ಜಾಸ್ತಿ ಬಡ್ಡಿ ಪ್ರಕಟಿಸಿ, ಅಲ್ಲಿಂದ ಹಣ ಪಡೆಯುತ್ತವೆ. ಆರ್‌ಬಿಐ ರೆಪೋದರ ಇಳಿಸಿದರೆ, ಬ್ಯಾಂಕ್‌ಗಳು ಜನರ ಠೇವಣಿಗಳಿಗೂ ಬಡ್ಡಿ ಇಳಿಸುತ್ತವೆ. ಅರ್ಥಾತ್‌ ಜನರು ತನ್ನ ಬಳಿ ಹಣ ಇಡುವುದಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಬದಲಿಗೆ ಆರ್‌ಬಿಐನಿಂದ ಪಡೆಯಲು ಇಚ್ಚಿಸುತ್ತವೆ. ಇದು ಕೇವಲ ಸರಳ ಲೆಕ್ಕಾಚಾರ. ಇದರ ಆಸುಪಾಸಿನಲ್ಲಿ ಬೇಕಾದಷ್ಟು ಇತರೆ ಸಂಗತಿಗಳೂ ಇವೆ.

Advertisement

ಠೇವಣಿದಾರರಿಗಿರುವ ದಾರಿಗಳೇನು?
ದಾರಿ 1
ಸಣ್ಣ ಖಾಸಗಿ, ಫೈನಾನ್ಸ್‌ ಬ್ಯಾಂಕ್‌ಗಳಲ್ಲಿ ಹೂಡಿಕೆ

ಸಣ್ಣ ಖಾಸಗಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿ ನಿಗದಿತ ಠೇವಣಿ ಇಡಬಹುದು. ಇಲ್ಲಿ ದೊಡ್ಡದೊಡ್ಡ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿಗಿಂತ 200-300 ಮೂಲಾಂಕಗಳಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ. ಆದರೆ ಈ ಬ್ಯಾಂಕ್‌ಗಳ ಸುಭದ್ರತೆ ಬಗ್ಗೆ ಖಾತ್ರಿಯಿರುವುದಿಲ್ಲ. ಆದರೆ ಇಲ್ಲಿ 5 ಲಕ್ಷ ರೂ.ವರೆಗೆ ಇಡುವ ಹಣಕ್ಕೆ ವಿಮೆ ಸಿಗುತ್ತದೆ. ಆದ್ದರಿಂದ ಇದಕ್ಕಿಂತ ಹೆಚ್ಚಿನ ಮೊತ್ತ ಇಡುವುದು ಅಪಾಯಕಾರಿ.

ದಾರಿ 2
ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಠೇವಣಿ ಒಳಿತು ಆರ್ಥಿಕ ತಜ್ಞ ಪ್ರಕಾರ, ಹಣವನ್ನು ವಿಭಾಗಿಸಿ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಠೇವಣಿ ಇಡಬೇಕು. 5 ಲಕ್ಷ ರೂ.ವರೆಗೆ ನಮ್ಮ ಹಣಕ್ಕೆ ವಿಮೆ ಇರುವುದರಿಂದ ಅಲ್ಲಿ ಹಣ ಸುರಕ್ಷಿತವಾಗಿರುತ್ತದೆ. ಜೊತೆಗೆ ಬಡ್ಡಿಯೂ ಹೆಚ್ಚು ಸಿಗುತ್ತದೆ. ಉದಾಹರಣೆಗೆ ಒಂದೇ ಬ್ಯಾಂಕ್‌ನಲ್ಲಿ 10 ಲಕ್ಷ ರೂ.ಗೆ ಇಟ್ಟು ಶೇ.3ರಷ್ಟು ಬಡ್ಡಿ ಪಡೆಯುವುದಕ್ಕಿಂತ, ಅದನ್ನು 5 ಲಕ್ಷ ರೂ.ನಂತೆ ವಿಭಾಗಿಸಿ ಬೇರೆ ಬೇರೆ ಬ್ಯಾಂಕ್‌ನಲ್ಲಿ ಇಟ್ಟರೆ ಬಡ್ಡಿ ಸಹಜವಾಗಿಯೇ ಹೆಚ್ಚುತ್ತದೆ.

ದಾರಿ 3
ಕಿರು ಅವಧಿಯ ಠೇವಣಿ ಸೂಕ್ತ ಹಣದುಬ್ಬರದ ಮೇಲೆ ನಮ್ಮ ನಿಯಂತ್ರಣ ವಿರುವುದಿಲ್ಲ. ಆದ್ದರಿಂದ ದೀರ್ಘಾ ವಧಿಯ ಠೇವಣಿ ಇಡುವುದು ಅಷ್ಟು ಸೂಕ್ತವಲ್ಲ. ಆದ್ದರಿಂದ 2-3 ವರ್ಷಗಳ ಅವಧಿಯ ಠೇವಣಿಗಳನ್ನು ಇಡಬೇಕು. ಪರಿಸ್ಥಿತಿ ನೋಡಿಕೊಂಡು ಮತ್ತೆ ಮುಂದಿನ ನಿರ್ಧಾರ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next