Advertisement

ನಮಗೆಲ್ಲ ಸೌಭಾಗ್ಯ ಬೇಕು, ಇತರರಿಗೆ?ಅಪ್ರಕಟಿತ ನೊಬೆಲ್‌ ಪ್ರತಿಭೆ

05:21 PM Apr 23, 2022 | Team Udayavani |
-ಮಟಪಾಡಿ ಕುಮಾರಸ್ವಾಮಿಸೀತಾರಾಮಯ್ಯನವರ ಮೊಗದಲ್ಲಿ ಗೆಲುವು ಕಾಣಿಸುತ್ತಿರಲಿಲ್ಲವಂತೆ. ಅಂದು ವಿ.ಸೀ.ಯವರ ಮಕ್ಕಳಿಗೆ ಮನೆ ಕೆಲಸದವಳ ಕುರಿತು ಅಸಮಾಧಾನ ಉಂಟಾಗಿತ್ತು. "ಇನ್ನು ಮೇಲೆ ಕೆಲಸಕ್ಕೆ ಬರುವುದು ಬೇಡ. ಹೊರಟುಹೋಗು' ಎಂದು ಮಕ್ಕಳು ಹೇಳಿದ್ದರು. ಆಕೆಯೂ "ಆಯ್ತು, ಹೋಗುತ್ತೇನೆ' ಎಂದು ಹೇಳಿ ಹೊರಟಳು. ವಿ.ಸೀ.ಯವರಿಗೆ ತಿಳಿದು ಕೆಲಸದಾಕೆಯನ್ನು ಸಮಾಧಾನ ಮಾಡಿ ಹಿಂದಕ್ಕೆ ಕರೆದರು. "ನಾನು ಇಲ್ಲಿರುವವರೆಗೆ ನೀನು ನಮ್ಮ ಮನೆಯನ್ನು ಬಿಟ್ಟು ಹೋಗತಕ್ಕದ್ದಲ್ಲ. ಯಾರು ಏನೇ ಹೇಳಲಿ, ನೀನು 15 ವರ್ಷಗಳಿಂದ ನಮ್ಮ ಮನೆಯಲ್ಲಿ ಪರಿಚಾರಿಕೆ ಮಾಡಿದ್ದಿಯಾ. ಬೇರೆಯವರಿಗೆ ಬೇಡವಾದರೆ ಅವರು ಬೇರೆ ಏರ್ಪಾಟು ಮಾಡಿಕೊಳ್ಳಲಿ' ಎಂದು...
Now pay only for what you want!
This is Premium Content
Click to unlock
Pay with

ಹೆಸರಾಂತ ಕವಿ, ಸಾಹಿತಿ ಪ್ರೊ| ವಿ. ಸೀತಾರಾಮಯ್ಯನವರು ಅರ್ಥಶಾಸ್ತ್ರದಿಂದ ಸಾಹಿತ್ಯದೆಡೆಗೆ ಜಿಗಿದವರು. 1971ರಲ್ಲಿ ನಡೆದ ಒಂದು ಘಟನೆ ಉಲ್ಲೇಖನೀಯ. ಬೆಂಗಳೂರಿನ “ಉತ್ಥಾನ’ ಮಾಸ ಪತ್ರಿಕೆಯ ಸಂಪಾದಕ ಎಸ್‌.ಆರ್‌.ರಾಮಸ್ವಾಮಿಯವರು ಒಮ್ಮೆ ಸೀತಾರಾಮಯ್ಯನವರ ಮನೆಗೆ ಹೋಗಿದ್ದರು. ಸೀತಾರಾಮಯ್ಯನವರ ಮೊಗದಲ್ಲಿ ಗೆಲುವು ಕಾಣಿಸುತ್ತಿರಲಿಲ್ಲವಂತೆ. ಅಂದು ವಿ.ಸೀ.ಯವರ ಮಕ್ಕಳಿಗೆ ಮನೆ ಕೆಲಸದವಳ ಕುರಿತು ಅಸಮಾಧಾನ ಉಂಟಾಗಿತ್ತು. “ಇನ್ನು ಮೇಲೆ ಕೆಲಸಕ್ಕೆ ಬರುವುದು ಬೇಡ. ಹೊರಟುಹೋಗು’ ಎಂದು ಮಕ್ಕಳು ಹೇಳಿದ್ದರು. ಆಕೆಯೂ “ಆಯ್ತು, ಹೋಗುತ್ತೇನೆ’ ಎಂದು ಹೇಳಿ ಹೊರಟಳು. ವಿ.ಸೀ.ಯವರಿಗೆ ತಿಳಿದು ಕೆಲಸದಾಕೆಯನ್ನು ಸಮಾಧಾನ ಮಾಡಿ ಹಿಂದಕ್ಕೆ ಕರೆದರು. “ನಾನು ಇಲ್ಲಿರುವವರೆಗೆ ನೀನು ನಮ್ಮ ಮನೆಯನ್ನು ಬಿಟ್ಟು ಹೋಗತಕ್ಕದ್ದಲ್ಲ. ಯಾರು ಏನೇ ಹೇಳಲಿ, ನೀನು 15 ವರ್ಷಗಳಿಂದ ನಮ್ಮ ಮನೆಯಲ್ಲಿ ಪರಿಚಾರಿಕೆ ಮಾಡಿದ್ದಿಯಾ. ಬೇರೆಯವರಿಗೆ ಬೇಡವಾದರೆ ಅವರು ಬೇರೆ ಏರ್ಪಾಟು ಮಾಡಿಕೊಳ್ಳಲಿ’ ಎಂದು ಖಡಕ್‌ ಆಗಿ ಹೇಳಿದರು.

Advertisement

ತಳಮಟ್ಟದ ಅರ್ಥಶಾಸ್ತ್ರ: ಅನಂತರ ಮಕ್ಕಳನ್ನು ಕರೆದು ಹೇಳಿದ ಮಾತು ಮಾತ್ರ ಮನುಕುಲದ ಶಾಂತಿ, ನೆಮ್ಮದಿಗೆ ಅತ್ಯಗತ್ಯ. ಆ ಸಾಲು ಹೀಗಿದೆ: “”15 ವರ್ಷಗಳಿಂದ ಕೆಲಸ ಮಾಡಿಕೊಂಡಿರುವ ಈ ಹೆಂಗಸನ್ನು ನಿಂತ ಕಾಲ ಮೇಲೆ “ಹೊರಡು’ ಎಂದು ಹೇಳಲು ನಿಮಗೇನು ಅಧಿಕಾರ? ನಿಮ್ಮ ಕಂಪೆನಿಯಲ್ಲಿ ನಿಮ್ಮನ್ನು ಹಾಗೆಯೇ “ಹೋಗು’ ಅಂದರೆ ನೀವು ಸುಮ್ಮನೆ ಹೋಗುತ್ತೀರೇನು? ಕಂಪೆನಿಯಲ್ಲಿಯಾದರೆ ನಿಮಗೆ ಎಲ್ಲ ಸೌಕರ್ಯಗಳು ಬೇಕು. ನೀವು ಮಾಡುವ ಮಹಾಕೆಲಸಕ್ಕೆ ಬೋನಸ್‌ ಬೇಕು. ಆಸ್ಪತ್ರೆ ಸೌಲಭ್ಯ ಬೇಕು. ಕೆಲಸದಿಂದ ತೆಗೆದು ಹಾಕುವಾಗ ತಿಂಗಳ ನೋಟಿಸ್‌ ಕೊಡಬೇಕು. ರಿಟ್ರೆಂಚ್‌ಮೆಂಟ್‌ ಕಾಂಪನ್ಸೇಶನ್‌ ಬೇಕು. ಯಥೇಚ್ಛವಾಗಿ ರಜೆಗಳು ಬೇಕು. ನಿಮಗೆ ನಿಮ್ಮ ಕಂಪೆನಿಯಲ್ಲಿ ಕೊಡುವ ಸೌಕರ್ಯದಲ್ಲಿ ಹತ್ತರಲ್ಲಿ ಒಂದು ಭಾಗದಷ್ಟಾದರೂ ನೀವು ಈ ಕೆಲಸದ ಹೆಂಗಸಿಗೆ ಕೊಟ್ಟಿದ್ದೀರಾ? ಅವಳು ನಿಮಗಾಗಿ ಎಷ್ಟು ದುಡಿದಿದ್ದಾಳೆ? ರಾತ್ರಿ ಹಗಲೆನ್ನದೆ, ರವಿವಾರವೆನ್ನದೆ, ಹಬ್ಬವೆನ್ನದೆ ಅಂಗಡಿಯಿಂದ ಸಾಮಾನು ತರುವುದು, ಹಾಲು, ಮೊಸರು ತರುವುದು, ಪಾತ್ರೆ ತೊಳೆಯುವುದು, ಮನೆ ಗುಡಿಸುವುದು, ಎಲ್ಲ ಕೆಲಸಗಳನ್ನು ತನ್ನ ಕೆಲಸ ಎನ್ನುವಂತೆ ಮಾಡುತ್ತಾಳೆ. ಅವಳ ಶ್ರಮಕ್ಕಾಗಿ ನೀವು ಕೊಡುವ ಪ್ರತಿಫ‌ಲ ಇಷ್ಟೇನಾ? ಮನುಷ್ಯನಿಗೆ ಕೃತಜ್ಞತೆ ಎನ್ನುವುದು ಬೇಡವೆ?”.  ಅನಂತರ ವಾತಾವರಣ ತಿಳಿಯಾಯಿತು ಎಂದು “ವಿ.ಸೀ. ನೂರರ ನೆನಪು’ ಪುಸ್ತಕದಲ್ಲಿ ದಾಖಲಾಗಿದೆ.

ಸಾಮಾನ್ಯವಾಗಿ ಬಳಕೆಯಲ್ಲಿರುವ ದೊಡ್ಡ ಹುದ್ದೆಯವರು, ಸಿರಿವಂತರು, ತುಂಬಾ ಕಲಿತವರು ಎಂಬ ಪದಪುಂಜಗಳು ರಿಲೇಟಿವ್‌ ಟರ್ಮ್. ಒಬ್ಬ ವ್ಯಕ್ತಿ ಎಷ್ಟೋ ಜನರಿಗೆ ಹೋಲಿಸಿದರೆ ದೊಡ್ಡವನಾಗಿರಬಹುದು, ಸಿರಿವಂತನಾಗಿರಬಹುದು, ಹೆಚ್ಚು ಕಲಿತಿರಬಹುದು. ಎಷ್ಟೋ ಜನರಿಗಿಂತ ಚಿಕ್ಕವನೂ, ಬಡವನೂ, ಕಡಿಮೆ ಓದಿದವನೂ ಆಗಿರುತ್ತಾನೆ. ಯಾರಿಗಿಂತ ಯಾರು ಎಂಬುದೇ ಇಲ್ಲಿ ಮಾನದಂಡ. ಆದರೆ ಚಿಕ್ಕವ, ಬಡವ, ಕಡಿಮೆ ಓದಿದವನಾಗಿರುವುದನ್ನು ಹಚ್ಚಿಕೊಳ್ಳದೆ ದೊಡ್ಡವನಾಗಿರುವುದನ್ನು ಮಾತ್ರ ತಲೆಗೆ ಹಚ್ಚಿಕೊಳ್ಳುತ್ತಾನೆ. ಇದು ಇಲ್ಲಿಗೇ ನಿಲ್ಲದೆ ಇತರರಿಗೆ “ತಲೆ ನೋವು’ ಆಗಿರುತ್ತಾನೆ. ಅದೇ ವ್ಯಕ್ತಿ ಬಡವರಿಗೆ ಮೀಸಲಿಟ್ಟ ಸೌಲಭ್ಯ ಪಡೆಯಲು ಅಡ್ಡ(ಗುಪ್ತ)ಮಾರ್ಗ ಅನುಸರಿಸುವುದಿದೆ.

ಉದ್ಯೋಗದಾತ-ಉದ್ಯೋಗಿ: ಅದೇ ರೀತಿ “ಉದ್ಯೋಗದಾತ’ ಮತ್ತು “ಉದ್ಯೋಗಿ’. ಒಬ್ಬನೇ ವ್ಯಕ್ತಿ ಇನ್ನೊಬ್ಬರ ಅಧೀನ ಉದ್ಯೋಗಿಯಾಗಿರುತ್ತಾನೆ, ಅದೇ ವ್ಯಕ್ತಿ ಬೇರೆ ಕೆಲವರಿಗೆ ಉದ್ಯೋಗದಾತನೂ ಆಗಿರುತ್ತಾನೆ. ಒಬ್ಬನೇ ವ್ಯಕ್ತಿ ದ್ವಿಪಾತ್ರವನ್ನು ವಹಿಸುತ್ತಿದ್ದರೂ ಉದ್ಯೋಗಿಯಾಗಿ ಆತ ತನ್ನ ಉದ್ಯೋಗದಾತನ ಬಳಿ ಇಡುವ ಬೇಡಿಕೆಗೂ ಉದ್ಯೋಗದಾತನಾಗಿ ತನ್ನ ಕೈಕೆಳಗಿನ ಉದ್ಯೋಗಿಗಳು ಸಲ್ಲಿಸುವ ಬೇಡಿಕೆಗೆ ಸ್ಪಂದಿಸುವ ಬಗೆಗೂ ಬಹಳ ತಾರತಮ್ಯವಿರುತ್ತದೆ. ಸಂಸ್ಥೆಯ ಉದ್ಯೋಗದಾತರು ತನಗೆ (ಉದ್ಯೋಗಿಗೆ) ಕೊಟ್ಟ ಸೌಲಭ್ಯ ಕಡಿಮೆ ಎಂದೂ ತಾನು ತನ್ನ ಉದ್ಯೋಗಿಗಳಿಗೆ ಕೊಡುವ ಸೌಲಭ್ಯ ಕಡಿಮೆಯಾದರೂ “ಹೆಚ್ಚು’ ಎಂದು ಭಾವಿಸುತ್ತಾನೆ. ಸರಕಾರಿ ವ್ಯವಸ್ಥೆಯ ಹಿರಿಯ ಅಧಿಕಾರಿಗಳ ವೈಯಕ್ತಿಕ ಕೆಲಸಗಳನ್ನು ಮಾಡಲು ಡಿ ದರ್ಜೆ ನೌಕರರನ್ನು ನಿಯೋಜಿಸುತ್ತಾರೆ. ಇದೇ ಅಧಿಕಾರಿಗಳು ತಮ್ಮ ಹಣದಿಂದ ಸಿಬಂದಿ ನೇಮಿಸಿಕೊಳ್ಳುವುದಾದರೆ ಇಷ್ಟು ವೇತನ ಕೊಡಲು ತಯಾರಿರುವುದಿಲ್ಲ. ಯಾರೋ (ಸಂಸ್ಥೆ) ಖರ್ಚು ಮಾಡುವುದಾದರೆ ಎಷ್ಟು ಬೇಕಾದರೂ ಮಾಡುತ್ತಾರೆ, ಸ್ವತಃ ಖರ್ಚು ಮಾಡುವಾಗ ಹಾಗಿರುವುದಿಲ್ಲ.

ನಮ್ಮ “ಕನ್ನಡಕ’ವನ್ನು ಸ್ವಲ್ಪ ಬದಲಾಯಿಸಿ ನೋಡಿದರೆ ತಾನು ಇತರರಿಗಿಂತ ಎಷ್ಟೋ ದುರ್ಬಲ ಎಂಬುದು ತಿಳಿವಳಿಕೆಗೆ ಬರುತ್ತದೆ. ಆಗಲೇ ಮೆರೆಯುವುದು ಕಡಿಮೆಯಾಗುತ್ತದೆ. ತಾನೇ ಸೃಷ್ಟಿಸಿಕೊಂಡ ಕನ್ನಡಕವನ್ನು ಬದಲಾಯಿಸಲು ತಯಾರಿರುವುದಿಲ್ಲ. ಇದು ದೀರ್ಘ‌ಕಾಲದ ದೃಷ್ಟಿಯಲ್ಲಿ ವ್ಯಥೆ ತಂದುಕೊಡುತ್ತದೆ ಎಂದು ಸಬಲನಾಗಿರುವಾಗ ತಿಳಿವಳಿಕೆ ಮೂಡುವುದಿಲ್ಲ.

Advertisement

ತನ್ನಂತೆ ಪರರ ಬಗೆದೊಡೆ…: “ತನ್ನಂತೆ ಪರರ ಬಗೆದೊಡೆ ಕೈಲಾಸ’ ಎಂದು ಸರ್ವಜ್ಞ ಹೇಳಿರುವುದೂ ಇಂತಹ ತಾರತಮ್ಯ ನಿವಾರಣೆಗಾಗಿ. ಎಲ್ಲರೂ ಬದುಕಬೇಕು ಎಂಬ ವಿಶಾಲ ಪರಿಕಲ್ಪನೆಯಲ್ಲಿ “ವಸುಧೈವ ಕುಟುಂಬಕಮ್‌’ ಧ್ಯೇಯವಾಕ್ಯ ಹುಟ್ಟಿಕೊಂಡಿತು. ತಾನು ಪಡೆಯುವ ಸೌಲಭ್ಯದ ಹತ್ತನೇ ಒಂದು ಭಾಗವನ್ನು ತನ್ನಧೀನ ಉದ್ಯೋಗಿಗಳಿಗೆ ನೀಡಲು ತಯಾರಿಲ್ಲದಿರುವುದನ್ನೇ ವಿ.ಸೀ.ಯವರು ಬೆಟ್ಟು ಮಾಡುವ ಮೂಲಕ ಗ್ರೌಂಡ್‌ ಲೆವೆಲ್‌ ಅರ್ಥಶಾಸ್ತ್ರವನ್ನು ಬೋಧಿಸಿದ್ದಾರೆ. ಇಡೀ ಲೋಕ ನರಳುತ್ತಿರುವುದು ಈ ಆತ್ಮವಂಚನೆಯ ದ್ವಿಪಾತ್ರಾಭಿನಯದಿಂದ. ವಿ.ಸೀಯಂತಹ ಧೀಮಂತರಿಗೆ ಮಾತ್ರ ಸಬಲರಾಗಿರುವಾಗಲೇ ವಿದ್ಯೆಯಿಂದ ವಿನಯವಂತಿಕೆ ಮೂಡಿರುತ್ತದೆ. “ವಿದ್ಯಾದಧಾತಿ ವಿನಯಂ’ ಎಂಬ ಮಾತು ಬಂದುದು ಈ ಕಾರಣಕ್ಕಾಗಿ ಇರಬಹುದು… ವಿ.ಸೀ. ಬೀಜರೂಪಿ ಈ ಚಿಂತನೆಯನ್ನು ದೇಶಮಟ್ಟದಲ್ಲಿ ಜಾರಿಗೆ ತಂದಿದ್ದರೆ ಅದಕ್ಕೆ ವಿ.ಸೀ. ಚಿಂತನೆ ಬ್ರ್ಯಾಂಡ್‌ (ಇಂಕ್ಲೂಸಿವ್‌ನೆಸ್‌) ಕೊಟ್ಟಿದ್ದರೆ ಅವರು ನೊಬೆಲ್‌ ಪಾರಿತೋಷಕಕ್ಕೆ ಅರ್ಹರಾಗುತ್ತಿದ್ದರು. ಈಗ ಅದನ್ನೇ ಶೈಕ್ಷಣಿಕ ಶಿಸ್ತಿಗೆ ಒಳಪಡಿಸಿ ಜಾಗತಿಕ ಮಟ್ಟದಲ್ಲಿ ಹೇಳಿದವರಿಗೆ ನೊಬೆಲ್‌ ಪಾರಿತೋಷಕ ಸಿಕ್ಕಿದೆ. ನಮ್ಮದೇ ಅಪ್ಪಟ ದೇಸೀ ಚಿಂತನೆಯಲ್ಲಿ ಅದೆಷ್ಟೋ ಇಂತಹ ಅಪ್ರಕಟಿತ ನೊಬೆಲ್‌ ಪ್ರತಿಭೆಗಳಿವೆ.

-ಮಟಪಾಡಿ ಕುಮಾರಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.