ಹಸಿದವನಿಗೆ ಜಗತ್ತಿನ ಯಾವ ದೇವರೂ ದೊಡ್ಡವನೆನಿಸುವುದಿಲ್ಲ.ಆದರೆ ಹಸಿವನ್ನು ಇಂಗಿಸುವ ಅನ್ನವೇ ದೇವರು ಎನಿಸುತ್ತದೆ. ಈ ಭೂಮಿಯಲ್ಲಿ ನಾವು ಜೀವಂತವಾಗಿರಬೇಕಾದರೆ ಅನ್ನ ಬೇಕೇ ಬೇಕು.
ವಿಶ್ವಸಂಸ್ಥೆ 1945ರ ಅ. 16ರಂದು ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಿತು. ಇದರ ಸ್ಮರಣಾರ್ಥ 1981ರಿಂದ ಪ್ರತೀ ವರ್ಷ ಈ ದಿನವನ್ನು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. ನಾವು ಪ್ರತಿನಿತ್ಯ ಹಾಳು ಮಾಡುವ ಆಹಾರ, ಇನ್ಯಾರೋ ವ್ಯಕ್ತಿಯ ಹೊಟ್ಟೆ ತುಂಬಿಸಬಹುದು ಎಂಬುದನ್ನು ಎಂದಿಗೂ ಮರೆಯಬಾರದು. ಆಹಾರ ಪೋಲು ಮಾಡುವು ದನ್ನು ನಿಯಂತ್ರಿಸಲು ಮತ್ತು ಆಹಾರದ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವುದೇ ಈ ದಿನದ ಉದ್ದೇಶವಾಗಿದೆ.
ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ವಿಶ್ವದ ಐದನೇ ಅತೀ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ದೇಶ ಎನ್ನುವ ಹೆಗ್ಗಳಿಕೆಯೊಂದಿಗೆ ಬಡತನ, ಹಸಿವು ಹಾಗೂ ಅಪೌಷ್ಟಿಕತೆಯೂ ನಮ್ಮ ದೇಶವನ್ನು ಇನ್ನೂ ಕಾಡುತ್ತಿದೆ. ಜಾಗತಿಕ ಹಸಿವು ಸೂಚ್ಯಂಕ 2021ರಲ್ಲಿ 116 ರಾಷ್ಟ್ರಗಳ ಪೈಕಿಯಲ್ಲಿ ಭಾರತ 94 ರಿಂದ 101ನೇ ಸ್ಥಾನಕ್ಕೆ ಇಳಿದಿದ್ದು, ದೇಶದ ಅನೇಕ ಭಾಗಗಳಲ್ಲಿ ಹಸಿವಿನ ತೀವ್ರತೆಯನ್ನು ತಿಳಿಸುತ್ತದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ (ಜಿಹೆಚ್‌ಐ) ವೆಬ್‌ಸೈಟ್ ಈ ಮಾಹಿತಿಯನ್ನು ಹೊರಹಾಕಿದ್ದು, ನಾವೆಲ್ಲರೂ ಆಹಾರದ ಮಹತ್ವ ಅರಿಯಬೇಕಾದ ಅಗತ್ಯತೆಯ ಎಚ್ಚರಿಕೆ ಘಂಟೆ ಇದಾಗಿದೆ.
ಮಿತ ಆಹಾರ ಸೇವನೆ ಎಂಬುದು ಆರೋಗ್ಯದ ದೃಷ್ಟಿಯಿಂದ ಬಹಳ ಅಗತ್ಯ. ಅಷ್ಟು ಮಾತ್ರವಲ್ಲದೆ ಆಹಾರವನ್ನು ವ್ಯರ್ಥ ಮಾಡುವುದು ಕೂಡ ತಪ್ಪು. ಆಹಾರ ಪೋಲು ಮಾಡುವಂಥ ಮನಃಸ್ಥಿತಿ ಬದಲಾಗಬೇಕಿದೆ. ಪ್ರತಿಯೊಬ್ಬ ವ್ಯಕ್ತಿಗೂ ಹಸಿವಿನ ಮೌಲ್ಯ ಮನವರಿಕೆ ಆಗುವ ತನಕ ಈ ರೀತಿಯ ಚೆಲ್ಲುವ ಮನಃಸ್ಥಿತಿ ಇದ್ದೇ ಇರುತ್ತದೆ. ಅಗತ್ಯವಿರುವಷ್ಟು ಮಾತ್ರ ಆಹಾರ ಬಳಕೆ ಮಾಡಿ, ಹಸಿವು ಮುಕ್ತ ಸಮಾಜ ನಿರ್ಮಿಸುವಲ್ಲಿ ನಮ್ಮದೇ ಆದ ಕೊಡುಗೆ ನೀಡಬೇಕಿದೆ.
ವಿಶ್ವಸಂಸ್ಥೆಯ 2019 ರ ವರದಿಯೊಂದರ ಪ್ರಕಾರ ಭಾರತದಲ್ಲಿ 2-6 ವರ್ಷ ವಯೋಮಾನದ ಮಕ್ಕಳಲ್ಲಿ ಶೇ. 9.6ರಷ್ಟು ಮಕ್ಕಳು ಮಾತ್ರ ಸೂಕ್ತ ಪ್ರಮಾಣದಲ್ಲಿ ಮತ್ತು ಸಮರ್ಪಕ ಅಹಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು 5 ವರ್ಷದೊಳಗಿನ ಮಕ್ಕಳಲ್ಲಿ ಎತ್ತರಕ್ಕೆ ಸರಿಯಾದಷ್ಟು ತೂಕವಿಲ್ಲದ ಮಕ್ಕಳು ಅಂದರೆ ಅತ್ಯಂತ ತೀವ್ರ ಅಪೌಷ್ಟಿಕತೆಗೆ ಗುರಿಯಾಗಿರುವ ಮಕ್ಕಳ ಸಂಖ್ಯೆ ಭಾರತದಲ್ಲಿ ಶೇ.28 ರಷ್ಟು. ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಡೆಸಿದ 2016-18 ರ ಸಾಲಿನ ರಾಷ್ಟ್ರೀಯ ಸಮಗ್ರ ಪೌಷ್ಟಿಕಾಂಶ ಸರ್ವೇ ಸಹ ಐದು ವರ್ಷದೊಳಗಿನ ಮಕ್ಕಳಲ್ಲಿ ಶೇ.34.7 ರಷ್ಟು ಮಕ್ಕಳು ವಯಸ್ಸಿಗೆ ತಕ್ಕಷ್ಟು ಎತ್ತರವಿಲ್ಲವೆಂದು, ಶೇ.17.3ರಷ್ಟು ಮಕ್ಕಳು ಎತ್ತರಕ್ಕೆ ತಕ್ಕಷ್ಟು ತೂಕವಿಲ್ಲವೆಂದು ಮತ್ತು ಶೇ.33.4ರಷ್ಟು ಮಕ್ಕಳು ವಯಸ್ಸಿಗೆ ತಕ್ಕಷ್ಟು ತೂಕವನ್ನು ಹೊಂದಿಲ್ಲವೆಂದೂ ವರದಿ ಮಾಡಿದೆ. ಈ ಅಂಕಿ ಅಂಶಗಳೆಲ್ಲವೂ ಆಹಾರದ ಪ್ರಾಮುಖ್ಯವನ್ನು ಎತ್ತಿ ಹಿಡಿಯುತ್ತವೆ.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಇತ್ತೀಚಿನ ಅಧ್ಯಯನದ ಪ್ರಕಾರ ದೇಶದ ಮಹಾನಗರಗಳಲ್ಲಿ ನಡೆಯುವ ಮದುವೆಗಳಲ್ಲಿ ವಾರ್ಷಿಕವಾಗಿ 943 ಟನ್ ಆಹಾರ ವ್ಯರ್ಥ ವಾಗುತ್ತಿದೆ. ಇದರಲ್ಲಿ 26 ಮಿಲಿಯನ್ ಜನರಿಗೆ ಪ್ರತೀದಿನ ಯೋಗ್ಯ ಊಟ ನೀಡ ಬಹುದು ಎಂದು ಅಧ್ಯಯನವು ತಿಳಿಸುತ್ತದೆ.
ಪ್ರತಿಯೊಬ್ಬರೂ ಪ್ರತೀ ಅಗುಳನ್ನು ತಿನ್ನುವಾಗ ಈ ಭೂಮಿಯ ಮೇಲೆ ಅದೆಷ್ಟೋ ಮನುಷ್ಯರು ಹಸಿವಿನಿಂದ ಸಾಯುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಬೇಕು. “ಆಹಾರದ ರುಚಿಯನ್ನು ಹೆಚ್ಚಿಸುವುದು ಹಸಿವು; ಅದೇ ರೀತಿ ಪಾನೀಯದ ರುಚಿಯನ್ನು ಹೆಚ್ಚಿಸುವುದು ತೃಷೆ’ ಎಂಬ ಸಾಕ್ರಟೀಸ್ ನುಡಿಯಂತೆ ಹಸಿದಾಗ ಮಾತ್ರ ಆಹಾರ ರುಚಿಕರ ಎನಿಸುತ್ತದೆ. ಆಹಾರ ಎಸೆಯದೆ ತಿನ್ನುವ ಮನಸ್ಸಾಗುತ್ತದೆ. ಈ ದೇಶದ ಕೃಷಿಕನ ಬೆವರ ಹನಿಗಳನ್ನು ಗೌರವಿಸಲು ಕೂಡ ಸ್ವತ್ಛವಾಗಿ ಊಟ ಮಾಡಿ, ಆಹಾರವನ್ನು ಸಮರ್ಪಕವಾಗಿ ಬಳಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
– ಭಾರತಿ ಎ., ಕೊಪ್ಪ