ಮಂಗಳವಾರ 118 ದಿನಗಳ ಕನಿಷ್ಠವೆಂಬಂತೆ ದೇಶದಲ್ಲಿ ಸುಮಾರು 31 ಸಾವಿರ ಪ್ರಕರಣಗಳು ದೃಡಪಟ್ಟಿವೆ. ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಈಶಾನ್ಯದ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಉಳಿದ ಕಡೆಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ರಾಜ್ಯದಲ್ಲೂ ಕೊರೊನಾ ಬಹುತೇಕ ನಿಯಂತ್ರಣದಲ್ಲಿದೆ. ಸದ್ಯಕ್ಕೆ ಕೊರೊನಾ ನಿಯಂತ್ರಣದಲ್ಲಿದೆಯೇ ಹೊರತು, ಸಂಪೂರ್ಣ ಹೋಗಿಲ್ಲ. ಹೀಗಾಗಿ ಎಚ್ಚರ ತಪ್ಪಿದರೆ ಮತ್ತೆ ಅಪಾಯ ಖಂಡಿತ ಎಂಬುದು ರಾಜ್ಯ ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಅವರ ಮಾತು.
Advertisement
ಜತೆಗೆ ದಿನಕ್ಕೆ ಪ್ರಕರಣಗಳ ಸಂಖ್ಯೆ ಮೂರು ಸಾವಿರಕ್ಕಿಂತ ಹೆಚ್ಚಾದರೆ ಅದನ್ನು ಮೂರನೇ ಅಲೆಗೆ ಆಹ್ವಾನ ನೀಡಿದಂತೆ ಎಂದು ಸುಧಾಕರ್ ಹೇಳಿದ್ದಾರೆ. ಸದ್ಯ ದಿನಕ್ಕೆ ಒಂದೂವರೆಯಿಂದ ಎರಡು ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಇದು ಹೆಚ್ಚಾಗದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ, ಕೊರೊನಾ ನಿಯಂತ್ರಣ ಜನರ ಕೈಯಲ್ಲೇ ಇದೆ. ಜನ ಹೇಗೆ ವರ್ತಿಸುತ್ತಾರೆಯೋ ಹಾಗೆ, ಕೊರೊನಾ ಏರಿಕೆ, ಇಳಿಕೆಯಾಗಲಿದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ಮೂರನೇ ಅಲೆಗೆ ನಾವೇ ಆಹ್ವಾನ ಕೊಡುತ್ತಿರುವಂತೆ ಇದೆ. ಸಾಧ್ಯವಾದಷ್ಟೂ ಜನರೇ ಮುಂಜಾಗ್ರತೆ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳುತ್ತಿದೆ. ಅಷ್ಟೇ ಅಲ್ಲ, ಜನರು ನಮ್ಮ ಎಚ್ಚರಿಕೆಯನ್ನು ಒಂದು ರೀತಿ ಹವಾಮಾನ ಇಲಾಖೆಯ ಮುನ್ಸೂಚನೆ ರೀತಿಯಲ್ಲಿ ಪರಿಗಣಿಸುತ್ತಿದ್ದಾರೆ. ಕೊರೊನಾ ವಿಚಾರದಲ್ಲಿ ಈ ಪರಿ ನಿರ್ಲಕ್ಷ್ಯ ಬೇಡವೇ ಬೇಡ ಎಂದೂ ಹೇಳಿದೆ. ಏನೇ ಆಗಲಿ, ಕೊರೊನಾ ನಿಯಂತ್ರಣ ನಮ್ಮ ಕೈಯಲ್ಲೇ ಇದೆ ಎಂಬುದು ಎಲ್ಲರೂ ಒಪ್ಪುವ ವಿಚಾರ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ನಾವು ಮನೆಯಲ್ಲೇ ಕುಳಿತಿದ್ದೆವು, ಈಗ ಅನ್ ಲಾಕ್ ಆಗಿದೆ. ಈಗ ಏಕೆ ಮನೆಯಲ್ಲಿ ಕುಳಿತುಕೊಳ್ಳಬೇಕು? ನಾವು ಆಚೆ ಹೋಗಿ ಸುತ್ತಾಡಿಕೊಂಡು ಬರುತ್ತೇವೆ ಎಂಬ ಕಾರಣದಿಂದ ಹೊರಗೆ ಹೋಗುವುದು ತಪ್ಪು. ಇದೊಂದು ರೀತಿ ಅನಗತ್ಯ ಪ್ರವಾಸ. ಇದರಿಂದ ನಾವೇ ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆ ಆಗುತ್ತದೆ. ಹೀಗಾಗಿ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರುವುದನ್ನು ಮುಂದುವರಿಸಬೇಕು.