ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಟ ಮುಗಿದ ಬಳಿಕ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಆಡಲಿದೆ. ಸರಣಿಗಾಗಿ ಬಿಸಿಸಿಐ ರವಿವಾರ ತಂಡ ಪ್ರಕಟ ಮಾಡಿದ್ದು, ಪ್ರಮುಖರಿಗೆ ರೆಸ್ಟ್ ನೀಡಲಾಗಿದೆ. ತಂಡವನ್ನು ಕೆ.ಎಲ್.ರಾಹುಲ್ ಮುನ್ನಡೆಸಲಿದ್ದು, ರಿಷಭ್ ಪಂತ್ ರನ್ನು ಉಪನಾಯಕರಾಗಿ ಆಯ್ಕೆ ಮಾಡಲಾಗಿದೆ.
ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಮಾಜಿ ಕೋಚ್ ರವಿ ಶಾಸ್ತ್ರಿ, “ರೋಹಿತ್ ಶರ್ಮಾಗೆ ವಿರಾಮದ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಅವರು ಒಂದು ವರ್ಷ, ಒಂದೂವರೆ ವರ್ಷಗಳ ಕಾಲ ಪ್ರತಿ ಮಾದರಿಯಲ್ಲಿ ಆಡಿದ್ದರು. ಆದರೆ ರೋಹಿತ್ ಶರ್ಮಾ ಅವರು ಗಾಯಗಳಿಂದಾಗಿ ವಿಶ್ರಾಂತಿ ಪಡೆದಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗಲಿಲ್ಲ, ಅವರು ಆಸ್ಟ್ರೇಲಿಯಾ ಪ್ರವಾಸದಲ್ಲೂ ಅರ್ಧ ಕಳೆದುಕೊಂಡಿದ್ದರು. ಹೀಗಾಗಿ ಅವರಿಗೆ ವಿಶ್ರಾಂತಿ ಬೇಕಿರಲಿಲ್ಲ” ಎಂದು ಹೇಳಿದರು.
ಇದನ್ನೂ ಓದಿ:ಇನ್ನು ಕ್ವಾಲಿಫೈಯರ್, ಎಲಿಮಿನೇಟರ್ ಕಾತರ
ಟಿ20 ಸರಣಿಯಿಂದ ಹೊರಗುಳಿದ ರೋಹಿತ್, ಕೊಹ್ಲಿ, ಶಮಿ, ಬುಮ್ರಾ ಅವರೆಲ್ಲ ಟೆಸ್ಟ್ ತಂಡಕ್ಕೆ ವಾಪಸಾಗಿದ್ದಾರೆ. ಜತೆಗೆ ಆರ್.ಅಶ್ವಿನ್, ರವೀಂದ್ರ ಜಡೇಜ ಕೂಡ ಸೇರಿಕೊಂಡಿದ್ದಾರೆ. 2021 ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ 4 ಟೆಸ್ಟ್ ಆಡಿತ್ತು. ಅಲ್ಲಿ 2-1ರಿಂದ ಮುನ್ನಡೆ ಸಾಧಿಸಿತ್ತು. 5ನೇ ಟೆಸ್ಟ್ ಪಂದ್ಯ ಕೊರೊನಾ ಕಾರಣಕ್ಕೆ ರದ್ದಾಗಿತ್ತು. ಅಂದು ಆಡದೇ ಉಳಿದಿದ್ದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜು.1ರಿಂದ 5ರ ತನಕ ಎಜ್‌ಬಾಸ್ಟನ್‌ನಲ್ಲಿ ನಡೆಯಲಿದೆ.
ಭಾರತ ತಂಡ
ಟೆಸ್ಟ್ ತಂಡ: ರೋಹಿತ್ ಶರ್ಮ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಐಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಭ್ ಪಂತ್, ಕೆ.ಎಸ್.ಭರತ್, ರವೀಂದ್ರ ಜಡೇಜ, ಆರ್.ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ.
ಟಿ20 ತಂಡ: ಕೆ.ಎಲ್.ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಐಯ್ಯರ್, ರಿಷಭ್ ಪಂತ್ (ಉಪನಾಯಕ), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಐಯ್ಯರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.