ಹೊಸದಿಲ್ಲಿ: “ಇತಿಹಾಸದ ಅರಿವಿಲ್ಲದವರು ಅದರ ಬಗ್ಗೆ ಮಾತನಾಡಲೂ ಬಾರದು’ ಹೀಗೆಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಚಾಟಿ ಬೀಸಿದ್ದಾರೆ.
ಡಿಸೆಂಬರ್ 5 ರಂದು 1955ರ ಪೌರತ್ವ ಕಾಯ್ದೆಯ ಸೆಕ್ಷನ್ 6ಎ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಈ ವೇಳೆ ಜನಸಂಖ್ಯಾ ಸಮೀಕರಣದ ವಿಚಾರವಾಗಿ ಸಿಬಲ್ ಅಸ್ಸಾಂನ ಉದಾಹರಣೆ ನೀಡಿದ್ದರು. ಅಸ್ಸಾಂ ಮೊದಲಿಗೆ ಮ್ಯಾನ್ಮಾರ್‌ನ ಭಾಗವಾಗಿತ್ತು. ಬಳಿಕ ಒಪ್ಪಂದದ ಮೇರೆಗೆ ಬ್ರಿಟಿಷರ ಆಡಳಿತಾವಧಿಯಲ್ಲಿ ಆ ಪ್ರದೇಶವನ್ನು ಅವರ ಆಳ್ವಿಕೆ ಬಿಟ್ಟುಕೊಡಲಾಯಿತು ಎಂದಿದ್ದರು.
ಈ ಹೇಳಿಕೆ ಬಗ್ಗೆ ಸಿಎಂ ಹಿಮಂತ ಬಿಸ್ವಾ ಶರ್ಮಾ ಕೆಂಡಾಮಂಡಲವಾಗಿದ್ದು, ಅಸ್ಸಾಂ ಎಂದಿಗೂ ಮ್ಯಾನ್ಮಾರ್‌ನ ಭಾಗವಾಗಿರಲಿಲ್ಲ. ಅದರ ಇತಿಹಾಸ ತಿಳಿಯದವರು ಅದರ ಬಗ್ಗೆ ಮಾತನಾಡಲೂ ಬಾರದು. ಮ್ಯಾನ್ಮರ್ ಜತೆಗೆ ಕೆಲವು ಕಾಲದ ಘರ್ಷಣೆಯೊಂದನ್ನು ಬಿಟ್ಟು ಅಸ್ಸಾಂಗೆ ಮತ್ಯಾವುದೇ ಸಂಬಂಧವಿದ್ದ ದಾಖಲೆಯನ್ನು ನಾನು ನೋಡಿಯೇ ಇಲ್ಲವೆಂದು ವಾಗ್ಧಾಳಿ ನಡೆಸಿದ್ದಾರೆ.