Advertisement

Mangaluru:ನಮ್ಮವರಿಗೆ ಅನುಕಂಪ ಬೇಡ; ಅವಕಾಶ ಕೊಡಿ: ಮಂಜಮ್ಮ

06:24 PM Oct 20, 2023 | Team Udayavani |

ವೆಲೆನ್ಸಿಯಾ: ತೃತೀಯ ಲಿಂಗಿಗಳು ಸಿಗ್ನಲ್‌ಗ‌ಳಲ್ಲಿ ನಿಲ್ಲಬಾರದು, ಭಿಕ್ಷೆ ಬೇಡಬಾರದು ಎಂದಿದ್ದರೆ ಅವರಿಗೊಂದು ಅವಕಾಶ ಕೊಡಿ. ಪ್ರೀತಿ, ಅನುಕಂಪದ ಮಾತುಗಳುಬೇಡ ಶಿಕ್ಷಣ ಪಡೆದವರು, ಶಿಕ್ಷಣದಿಂದ ವಂಚಿತರಾದವರು, ಹಿರಿಯ ನಾಗರಿಕರು ಹೀಗೆ ಎಲ್ಲ ವರ್ಗದವರು ನಮ್ಮಲ್ಲಿದ್ದಾರೆ.

Advertisement

ಅಂತಹರಿಗೆ ಸೂಕ್ತ ಉದ್ಯೋಗ ನೀಡಿ, ಕೆಲಸ ಮಾಡಲು ಸಾಧ್ಯವಾಗದ ಹಿರಿಯರಿಗೆ ಪುನರ್ವಸತಿ ವ್ಯವಸ್ಥೆ ಮಾಡಿ ಮಾಸಾಶನ ಒದಗಿಸಿ ಎಂದು ಪದ್ಮಶ್ರೀ ಪುರಸ್ಕೃತ ಡಾ| ಮಾತಾ ಬಿ. ಮಂಜಮ್ಮ ಜೋಗತಿ ಮನವಿ ಮಾಡಿದರು.

ವೆಲೆನ್ಸಿಯಾದ ರೋಶನಿ ನಿಲಯ ಸ್ಕೂಲ್‌ ಆಫ್‌ ಸೋಶಿಯಲ್‌ ವರ್ಕ್‌ ಕಾಲೇಜಿನಲ್ಲಿ ಗುರವಾರ ಡಾ| ರೇಷ್ಮಾ ಉಳ್ಳಾಲ ಅವರ ಸಂಶೋಧನ ಕೃತಿ “ಬಿಂಬದೊಳಗೊಂದು ಬಿಂಬ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಹೆಣ್ಣು ಗಂಡಾಗುವುದು, ಗಂಡಾಗುವುದು ಪ್ರಕೃತಿ ನಿಯಮ. ಅದನ್ನು ತಡೆಯಲು ಸಾಧ್ಯವಿಲ್ಲ. ಮನೆಯಲ್ಲಿ ಅಂತಹವರು ಇದ್ದರೆ ಹೊರ ಹಾಕದೆ, ವಿದ್ಯಾಭ್ಯಾಸ ನೀಡಿದರೆ ಅವರ ಕಾಲ ಮೇಲೆ ಅವರು ನಿಲ್ಲುತ್ತಾರೆ. ಇದಕ್ಕೆ ಹಲವು ಮಂದಿ ಉದಾಹರಣೆಯಾಗಿ ನಮ್ಮ ಮುಂದೆ ಇದ್ದಾರೆ.

ಜೈಲಿನಲ್ಲಿದ್ದು ಬಂದವರನ್ನೇ ಮಗ-ಮಗಳು ಎಂದು ಹೆತ್ತವರು ಒಪ್ಪಿಕೊಳ್ಳುವಾಗ ನಮ್ಮವರನ್ನು ಮನೆಯಿಂದ ಹೊರಗೆ ಹಾಕುವುದು ನ್ಯಾಯವೇ ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳು ಮೊಬೈಲ್‌ ಬಿಟ್ಟು ಪುಸ್ತಕ ಓದಿದರೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುವುದು. ಸಂಶೋಧನ ಕೃತಿ ಸಮುದಾಯದ ಪ್ರತಿಬಿಂಬವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ| ಮುಲ್ಲೈ ಮುಗಿಲನ್‌ ಮಾತನಾಡಿ, ದೇಶದ ಉನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪಡೆಯುವ ವರೆಗೆ ತೃತೀಯ ಲಿಂಗಿ ಸಮುದಾಯದವರು ಸಾಧಿಸಬಹುದು ಎನ್ನುವುದಕ್ಕೆ ಮಂಜಮ್ಮ ಜೋಗತಿಯವರು ಉದಾಹರಣೆ.

Advertisement

ಇದರಿಂದ ಜೀವನದ ಮೇಲೆ ನಂಬಿಕೆ ಹುಟ್ಟುತ್ತದೆ. ಸಮಾಜಕ್ಕೆ ಸತ್ಯವನ್ನು ಹೇಳುವ ಕೆಲಸ ಈಗಾಗಲೇ ವಿವಿಧ ಕಲೆಗಳ ಮೂಲಕ ನಡೆಯುತ್ತಿದ್ದು, ಪುಸ್ತಕವೂ ಮತ್ತೂಂದು ಮಾಧ್ಯಮವಾಗಿ ಲಭ್ಯವಾಗಿದೆ. ಸರಕಾರವೂ ಹಲವು ರೀತಿಯಲ್ಲಿ ಸಮುದಾಯಕ್ಕೆ ಬೆಂಬ ಲವಾಗಿದ್ದು, ಇದರ ಶ್ರೇಯಸ್ಸು ಕೂಡಾ ಸಮಾಜಿಕ ಕಾರ್ಯಕರ್ತರು ಎನ್‌ ಜಿಒಗಳಿಗೆ ಸಲ್ಲುತ್ತದೆ ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್‌.ಲಿಂಗದೇವರು, ಕಾಲೇಜಿನ ಉಪಪ್ರಾಂಶುಪಾಲೆ ಡಾ| ಜೆನಿಸ್‌ ಮೇರಿ ಉಪಸ್ಥಿತರಿದ್ದರು. ಕೃತಿಕಾರೆ ಡಾ| ರೇಷ್ಮಾ ಉಳ್ಳಾಲ ಸ್ವಾಗತಿಸಿ, ಸುಯೆಝ್ ಇಂಡಿಯಾದ ಎಚ್‌ಆರ್‌ ಎಡ್ಮಿನ್‌ ರಾಕೇಶ್‌ ಶೆಟ್ಟಿ
ವಂದಿಸಿದರು. ಪ್ರಾಧ್ಯಾಪಕ ಡಾ| ಕಿಶೋರ್‌ ಕುಮಾರ್‌ ಶೇಣಿ ನಿರೂಪಿಸಿದರು.

ಸರಕಾರಕ್ಕೂ ದಾಖಲೆ ರೂಪದ ಕೃತಿ
ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ ನಮ್ಮಲ್ಲಿರುವ ಯೋಚನೆಗಳು, ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ “ನಾನು ಅವನಲ್ಲ ಅವಳು’ ಸಿನಿಮಾ, ಸಹಿತ ವಿವಿಧ ಪೂರಕ ವಸ್ತುಗಳು ಕಾರಣವಾಯಿತು.

ಭಾರತೀಯ ದೃಷ್ಟಿಕೋನದಲ್ಲಿ ಸಂಶೋಧನೆ ನಡೆಸಿ, ಕೃತಿ ರೂಪಕ್ಕೆ ತರುವಲ್ಲಿ ಲೇಖಕಿ ಯಶಸ್ವಿಯಾಗಿದ್ದು, ಅವರ ಬದುಕನ್ನು ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ಸಮಾಜಿಕ ನೆಲೆಗಟ್ಟಿನಲ್ಲಿ ನೋಡುವ ಕೆಲಸ ಪುಸ್ತಕ ಸಾಧ್ಯವಾಗಿದೆ. ಸರಕಾರದ
ಸವಲತ್ತುಗಳನ್ನು ಪಡೆಯಲು ಸಂಶೋಧನಾ ಕೃತಿ ಒಂದು ರೀತಿಯಲ್ಲಿ ದಾಖಲೆ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಬಿ.ಎಸ್‌.ಲಿಂಗದೇವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next