Advertisement

ಈಜಲು ಬರುವುದಿಲ್ಲವೆ? ನೀರಿನೊಳಗೆ ನಡೆಯಬಹುದು!

10:00 AM Jan 06, 2020 | mahesh |

ನೀರೆಂದರೆ ಎಲ್ಲರಿಗೂ ಅಚ್ಚುಮೆಚ್ಚು.ಇನ್ನು ಸಮುದ್ರವೆಂದರೆ ಎಲ್ಲರೂ ಹುಚ್ಚೆದ್ದು ಕುಣಿಯುತ್ತಾರೆ. ಸಮುದ್ರ ತೀರದಲ್ಲಿ ಮುಸ್ಸಂಜೆಯ ವೇಳೆಗೆ ನಡೆಯುವುದು, ಬೋಟಿಂಗ್‌ ಮಾಡುವುದು, ಸಮುದ್ರದ ನೀರಿನಲ್ಲಿ ಆಟವಾಡುವುದು ಇಂದಿನ ಸಾಮಾನ್ಯವಾದ ಚಟುವಟಿಕೆಗಳಾಗಿವೆ. ಸಮುದ್ರಗಳ ಪೈಕಿ ಗೋವಾ, ಕೇರಳ ಮತ್ತು ಅಂಡಮಾನ್‌ಗೆ ವಿಶೇಷ ಸ್ಥಾನಮಾನವಿದೆ. ಅಂಡಮಾನ್‌ ದ್ವೀಪಗಳ ಸಮುದ್ರದಲ್ಲಿ ನಡೆಯುತ್ತ ನಿಗೂಢವಾದ ಸಮುದ್ರಜೀವನವನ್ನು ಆನಂದಿಸುವುದು ಅತ್ಯಂತ ರೋಮಾಂಚಕಾರಿಯಾಗಿದೆ.

Advertisement

ಎಲ್ಲೆಲ್ಲಿ ಸಮುದ್ರದಾಳದ ವಾಕಿಂಗ್‌ ಮಾಡಬಹುದು?
ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಕಡಲತೀರದ ನಡಿಗೆ ಅಥವಾ ಹೆಲ್ಮೆಟ್‌ ಡೈವಿಂಗ್‌ಎಂದು ಕರೆಯಲಾಗುವ ಈ ಕ್ರೀಡೆಯನ್ನು ಪೋರ್ಟ್‌ಬ್ಲೇರ್‌ ಮತ್ತು ಹ್ಯಾವಲಾಕ್‌ ದ್ವೀಪದಲ್ಲಿನ ಎಲಿಫೆಂಟ್‌ ಬೀಚ್‌ ಬಳಿಯ ನಾರ್ತ್‌ಬೇ ಸಮುದ್ರಕಿನಾರೆಯಲ್ಲಿ ನಡೆಸಲಾಗುತ್ತದೆ. ಇಲ್ಲಿನ ಸಮುದ್ರದಲ್ಲಿ ಸಾಹಸಿ ಪ್ರವಾಸಿಗರು ಇಲ್ಲಿನ ಸಮುದ್ರದ ಬೃಹತ್‌ ಉಬ್ಬರದ ಮಧ್ಯದಲ್ಲಿ ಹಾಗೂ ಶಾಂತವಾದ ಸಮುದ್ರದ ಆಳದಲ್ಲಿ ಸುಮಾರು ಏಳು ಮೀ. ಗಳಷ್ಟು ಆಳ ಸಮುದ್ರದ ತಳದಲ್ಲಿ ನಡೆಯುತ್ತ ಸಮುದ್ರದಾಳದ ಸೌಂದರ್ಯವನ್ನು ವೀಕ್ಷಿಸಬಹುದು.

ಸಮುದ್ರ ವಾಕಿಂಗ್‌ರೋಮಾಚವನೀ°ಯುವ ಹಾಗೂ ಭಿನ್ನವಾದ ಅನುಭವವನ್ನು ನೀಡುವ ಕ್ರೀಡೆಯಾಗಿದ್ದು, ಈಜು ಬಾರದವರೂ ನಡಿಗೆಯನ್ನು ಸಮುದ್ರದಾಳದಲ್ಲಿ ಕೈಗೊಳ್ಳ ಬಹುದು. ಸಮುದ್ರದೊಳಗಿನ ನಿಗೂಢ ಪ್ರಾಣಿ ಸಂಕುಲ, ಹವಳಗಳ ದಂಡೆಗಳ ವೀಕ್ಷಣೆ, ಆಳ ಸಮುದ್ರದಲ್ಲಿ ಮೀನು ಮತ್ತಿತರ ಜಲಚರಗಳ ಜೀವನ ಶೈಲಿಯ ವೀಕ್ಷಣೆ ಸದಾ ಸ್ಮರಣೀಯ ಸಾಹಸಗಳಲ್ಲೊಂದಾಗಿದೆ. ನುರಿತ ಮುಳುಗುಗಾರರು, ತರಬೇತುದಾರರು ಮತ್ತು ನುರಿತ ಮಾರ್ಗದರ್ಶಕರ ಸಹಾಯದಿಂದ ಗರಿಷ್ಠ ಸುರಕ್ಷಾ ಸಾಧನಗಳ ಅಳವಡಿಕೆಯೊಂದಿಗೆ ಕೈಗೊಳ್ಳಲಾಗುತ್ತದೆ.

ವಾಕಿಂಗ್‌ ಹೆಲ್ಮೆಟ್‌
ಸಮುದ್ರ ವಾಕಿಂಗ್‌ ಹೆಲ್ಮೆಟ್‌ ಎಂದು ಕರೆಯಲಾಗುವ ಪಾರದರ್ಶಕ ಮುಖವಾಡವನ್ನು ಧರಿಸಿ ಸಮುದ್ರದಾಳದಲ್ಲಿ ನಡಿಗೆ ಮಾಡಬಹುದು. ಈ ಹೆಲ್ಮೆಟ್‌ಗೆ ನೀರಿನ ಅಡಿಯಲ್ಲಿ ಸಾಮಾನ್ಯವಾದ ಉಸಿರಾಟವನ್ನು ಮಾಡಲು ಸಾಧ್ಯವಾಗುವಂಥ ವಿಶೇಷ ಆಕ್ಸಿಜನ್‌ ಮಾಸ್ಕ್ ಉಪಕರಣಗಳೊಂದಿಗೆ ಜೋಡಿಸಲಾಗುತ್ತದೆ. ಈ ಹೆಲ್ಮೆಟ್‌ಗೆ ಪೈಪ್‌ ಮೂಲಕ ನೀರಿನ ಮೇಲಿರುವ ಬೋಟ್‌ನಲ್ಲಿರುವಆಕ್ಸಿಜನ್‌ ಸಿಲಿಂಡರ್‌ನಿಂದ ಆಮ್ಲಜನಕವನ್ನು ಸಮುದ್ರದಾಳದಲ್ಲಿ ನಡಿಗೆ ಮಾಡುವವರಿಗೆ ಪೂರೈಸಲಾಗುತ್ತದೆ. ಯಾವುದೇ ತೊಂದರೆ ಅಥವಾ ತುರ್ತು ಪರಿಸ್ಥಿತಿ ಉಂಟಾದಲ್ಲಿ ಸಾಹಸಿಗರಿಗೆ ಸಹಾಯ ಮಾಡಲು ತರಬೇತಿ ಪಡೆದ ಜೀವರಕ್ಷಕರ ತಂಡ ನಡಿಗೆ ಮುಕ್ತಾಯದವರೆಗೂ ಜತೆಗಿರುತ್ತದೆ. ಈ ನೀರಿನಾಳದ ನಡಿಗೆಯು ಹುಣ್ಣಿಮೆಯ ರಾತ್ರಿಯಲ್ಲಿ ಹರಿಸಿದಂಥ ಅನುಭವವನ್ನು ನೀಡುತ್ತದೆ. ನೀರಿನಾಳದ ಯಾನದಲ್ಲಿ ಬಂಡೆಗಳ ನಡುವೆ, ಹವಳಗಳ ಮಧ್ಯೆ, ಜಲಚರಗಳ ಸಮೂಹದ ಮಧ್ಯೆ ಸಾಗುವ ಅವಕಾಶವನ್ನು ನೀಡಲಾಗುತ್ತದೆ.

15 ರಿಂದ 20 ನಿಮಿಷಗಳ ವಾಕ್‌
ಸಮುದ್ರದ ಆಳಕ್ಕೆ ಸ್ಕೂಬಾ ಡೈವಿಂಗ್‌ ಮಾಡುವಂತೆಯೇ ನೀರಿನ ಮೇಲ್ಭಾಗದಲ್ಲಿರುವ ದೋಣಿಗೆ ನಿರಂತರವಾದ ಸಂಪರ್ಕವನ್ನು ಸಮುದ್ರ ನಡಿಗೆ ಕೈಗೊಳ್ಳುವವರು ಹೊಂದಿರುತ್ತಾರೆ. ದೋಣಿಯ ನಿರ್ದಿಷ್ಟ ಪರಿಧಿಯ ವ್ಯಾಪ್ತಿಯಲ್ಲಿ ನಡಿಗೆ ಮತ್ತು ಈಜನ್ನು ವಿಶೇಷ ಉಡುಗೆಯ ಸಹಾಯದಿಂದ ಮಾಡಲಾಗುತ್ತದೆ. ಹೆಲ್ಮೆಟ್‌ನ ಪಾರದರ್ಶಕ ಮುಖವಾಡವು ವಾಕರ್ಸ್‌ಗೆ ಕಡಲಿನಾಳದ ತಮ್ಮ ಸುತ್ತಮುತ್ತಲಿನ ನೋಟವನ್ನು ನೀಡುತ್ತದೆ.

Advertisement

ಸಂತೋಷ್‌ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next