ಬೆಂಗಳೂರು : ಬಜೆಟ್ ಬಗ್ಗೆ ಕೆಲವರಿಗೆ ತಪ್ಪು ಗ್ರಹಿಕೆ ಇದ್ದು ಕಾಮಾಲೆ ಕಣ್ಣಿನಿಂದ ನೋಡುವುದನ್ನು ಬಿಟ್ಟು ಸಮಗ್ರ ದೃಷ್ಟಿಕೋನದಿಂದ ನೋಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಬಜೆಟ್ ಮಂಡನೆ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ಮಂಡಿಸಿರುವ ಬಜೆಟ್ ಹಾಸನ, ಮಂಡ್ಯಕ್ಕೆ ಮಾತ್ರ ಸೀಮಿತವಾಗಿದೆ ಎನ್ನುವುದನ್ನು ಅಲ್ಲಗಳೆದಿದ್ದು, ಸಂಕಷ್ಟದಲ್ಲಿರುವ ರೈತರ 34 ಸಾವಿರ ಕೋಟಿ ಸಾಲ ಮನ್ನಾ ಮಾಡಲು ಸಾಕಷ್ಟು ಶ್ರಮ ವಹಿಸಿದ್ದು, ಸಾಲ ಮನ್ನಾ ಮಾಡಿಯೂ ಮಿಗತೆ ಬಜೆಟ್ ಮಂಡಿಸಿದ್ದು, ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.
ಬಜೆಟ್ ಬಗ್ಗೆ ಬಿಜೆಪಿ ನಾಯಕರು ಮಾಡಿರುವ ಪ್ರತಿಕ್ರಿಯೆಗೆ ಖಾರವಾಗಿ ವಾಗ್ಧಾಳಿ ನಡೆಸಿರುವ ಅವರು, ರೈತರನ್ನು ಋಣ ಮುಕ್ತರನ್ನಾಗಿ ಮಾಡಲು, 2018 ರ ಫೆಬ್ರವರಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್‌ನ ಎಲ್ಲ ಅಂಶಗಳನ್ನೂ ಮುಂದುವರೆಸಲು ತೀರ್ಮಾನಿಸಿದ್ದು, ಧರ್ಮ ಒಡೆಯುವ ವಿಷಬೀಜ ಬಿತ್ತುವ ಬಿಜೆಪಿಯ ಪೊಳ್ಳು ಮಾತುಗಳಿಗೆ ಕರಾವಳಿ ಭಾಗದ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.
ಬೆಂಗಳೂರಿಗೂ ಸಾಕಷ್ಟು ಕೊಡುಗೆಗಳನ್ನು ನೀಡಲಾಗಿದ್ದು, ನಾಲ್ಕೂ ದಿಕ್ಕುಗಳನ್ನು ಸಂಪರ್ಕಿಸುವ ಎಲಿವೇಟೆಡ್ ಕಾರಿಡಾರ್, ಪೆರಿಫೆರಲ್ ರಿಂಗ್ ರಸ್ತೆ, ಮೆಟ್ರೋ ಯೋಜನೆ ವಿಸ್ತರಣೆ ಸೇರಿದಂತೆ ನಗರದ ಜನತೆ ಟ್ರಾಫಿಕ್ ಸಮಸ್ಯೆಯಿಂದ ಬಳಲುವುದನ್ನು ತಪ್ಪಿಸಲು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎಲ್ಲವನ್ನೂ ಹಾಸನ, ಮಂಡ್ಯಕ್ಕೆ ಮಾತ್ರ ನೀಡಲಾಗಿದೆ ಎಂದು ಆರೋಪಿಸುತ್ತಿ ದ್ದಾರೆ. ಸಾಲ ಮನ್ನಾ ಯೋಜನೆಯಲ್ಲಿ ಯಾವ ಜಿಲ್ಲೆಯ ರೈತರಿಗೆ ಎಷ್ಟು ಅನುಕೂಲವಾಗುತ್ತದೆ ಎಂದು ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಉತ್ತರಿಸುತ್ತೇನೆ. ಕೌಶಲ್ಯಾಭಿವೃದ್ಧಿ
ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದ್ದು, ಉತ್ತರ ಕರ್ನಾಟಕ ಭಾಗದ ಬೆಳಗಾವಿ, ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ದೊರೆಯುವಂತೆ ಮಾಡಿದ್ದೇವೆ.
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದ್ದರೂ ದಕ್ಷಿಣದ ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಬೆಲೆ ಕಡಿಮೆ ಇದೆ ಎಂದು ಸಮ ರ್ಥನೆ ಮಾಡಿಕೊಂಡ ಮುಖ್ಯ ಮಂತ್ರಿ ಕುಮಾರ ಸ್ವಾಮಿಯವರು ಕೇಂದ್ರದ ಎನ್‌ಡಿಎ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ತೈಲದ ಮೇಲಿನ ತೆರಿಗೆಯನ್ನು
ಶೇ.238ರಷ್ಟು ಹೆಚ್ಚಿಸಿದೆ ಎಂದು ಟೀಕಿಸಿದರು.
ಹಿಂದಿನ ಎಲ್ಲ ಯೋಜನೆಗಳನ್ನು ಮುಂದುವರೆಸಿ, ಇಷ್ಟೊಂದು ಸವಾಲು ಮೈಮೇಲೆ ಹಾಕಿಕೊಂಡು ಪೂರ್ಣ ಬಜೆಟ್ ಮಂಡಿಸಿದ್ದೇನೆ. ಇದರ ಬಗ್ಗೆ ಚರ್ಚಿಸಲು ಜನರ ಬಳಿಗೆ ಹೋಗೋಣ ನಡೀರಿ.
ಎಚ್. ಡಿ. ಕುಮಾರಸ್ವಾಮಿ, ಸಿಎಂ