Advertisement

ಶಾಲೆಗಳನ್ನು ತೆರೆಯುವ ಧಾವಂತ ಇಲ್ಲ; ಮಕ್ಕಳ ಹಿತವೇ ಮುಖ್ಯ: ಸುರೇಶ್ ಕುಮಾರ್

07:33 PM Oct 01, 2020 | Mithun PG |

ಬೆಂಗಳೂರು: ಕೋವಿಡ್ ಪ್ರಸರಣದ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವ ಧಾವಂತವೂ ಇಲ್ಲ, ನಮಗೆ ಶಾಲೆ ಈಗಲೇ ತೆರೆಯಬೇಕೆಂಬ ಪ್ರತಿಷ್ಠೆಯೂ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.

Advertisement

ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲೆಗಳನ್ನು ಪ್ರಾರಂಭ ಕುರಿತು ಪ್ರಾಥಮಿಕ ಶಾಲೆ, ಪ್ರೌಢಶಾಲೆ ಶಿಕ್ಷಕರ ಸಂಘಟನೆಗಳ ಹಾಗೂ ಪದವಿ ಪೂರ್ವ ಉಪನ್ಯಾಸಕರ ಸಂಘಗಳ ಜಿಲ್ಲಾ ಪ್ರತಿನಿಧಿಗಳೊಂದಿಗೆ ಗುರುವಾರ ವೆಬಿನಾರ್ ಸಂವಾದ ನಡೆಸಿ ಮಾತನಾಡಿದ ಅವರು, ಸರ್ಕಾರಕ್ಕೆ ಈ ನಾಡಿನ ಮಕ್ಕಳ ಹಿತವೇ ಪ್ರಮುಖವಾಗಿದ್ದು, ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗುವ ಯಾವುದೇ ನಿರ್ಧಾರಗಳನ್ನು ಕೈಗೊಳ್ಳಲಾಗುವುದಿಲ್ಲ ಎಂದರು.

‘ನಾನು ಶಿಕ್ಷಣ ಸಚಿವ ಎಂಬುದಕ್ಕಿಂತ ರಾಜ್ಯದ ಎಲ್ಲ ಶಾಲಾ ಮಕ್ಕಳ ಪೋಷಕನೂ ಆಗಿದ್ದೇನೆ ಎಂಬ ಅಂಶವೇ ಪ್ರಮುಖವಾಗಿದ್ದು, ಎಲ್ಲ ಪೋಷಕರಂತೆ ನನಗೂ ಆತಂಕ ಇಲ್ಲದೇ ಇಲ್ಲ, ನನಗೂ ಮಕ್ಕಳ ಹಿತವೇ ಮುಖ್ಯವಾಗಿದೆ’ ಎಂದು ಹೇಳಿದ ಸಚಿವರು, ಈ ನಿಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯ ಆಲಿಸುವ ಸರಣಿ ಆರಂಭಿಸಿದ್ದು, ಇಂದು ಶಿಕ್ಷಕ-ಉಪನ್ಯಾಸಕರ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದೇನೆ. ಅತಿ ಶೀಘ್ರದಲ್ಲಿ ಶಿಕ್ಷಣ ತಜ್ಞರು, ಪೋಷಕ ಸಂಘಟನೆಗಳು, ಶಿಕ್ಷಣ ಪ್ರೇಮಿಗಳು, ಖಾಸಗಿ ಶಾಲಾ ಸಂಸ್ಥೆಗಳು, ಜನಪ್ರತಿನಿಧಿಗಳೂ ಸೇರಿದಂತೆ ಶಾಸಕರು, ಸಂಸದರು ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲ ಪಾಲುದಾರರೊಂದಿಗೆ ಚರ್ಚಿಸಿ ಎಲ್ಲರ ಅಭಿಪ್ರಾಯ ಪಡೆಯಲಾಗುವುದು. ಆ ಮೂಲಕ ಮಕ್ಕಳ ಹಿತಕ್ಕೆ ಪೂರಕವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು. ಇದು ಅಭಿಪ್ರಾಯ ಸಂಗ್ರಹ ಮಾತ್ರವೇ ಆಗಿದೆ ಎಂದರು.

ಇದನ್ನೂ ಓದಿ:  ಶಾಲೆ- ಕಾಲೇಜು ಆರಂಭದ ಬಗ್ಗೆ ಶೀಘ್ರವೇ ಸ್ಪಷ್ಟ ಮಾಹಿತಿ ಎಂದ ಡಿಸಿಎಂ ಅಶ್ವತ್ಥನಾರಾಯಣ

ಮುಂದೆ ಶಾಲೆಗಳನ್ನು ಆರಂಭಿಸಬೇಕಾಗಬಹುದೆಂಬ ದೃಷ್ಟಿಯಿಂದ ಕೆಲವು ಎಸ್ಒಪಿಗಳನ್ನು ಸಿದ್ಧಪಡಿಸಿಕೊಳ್ಳಲಾಗಿತ್ತಷ್ಟೇ, ಆದರೆ ಅದು ಶಾಲಾ ಅರಂಭದ ಸಿದ್ಧತೆ ಎಂದು ಕೆಲವರು ಭಾವಿಸಿದ್ದಾರೆ. ಆದು ಶಾಲಾರಂಭ ಕುರಿತ ಟಿಪ್ಪಣಿಯೇನೂ ಅಲ್ಲ ಎಂದ ಸಚಿವರು, ಶಾಲಾ ಆರಂಭ ಕುರಿತು ಕೇಂದ್ರ ಸರ್ಕಾರವು ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ಹಾಗಂತ ನಾವು ದಿಢೀರ್ ಶಾಲೆ ತೆರೆಯಲು ಮುಂದಾಗಿಲ್ಲ, ಅಂತಹ ಧಾವಂತವೂ ಇಲ್ಲ, ಕಟ್ಟಕಡೆಯದಾಗಿ ನಮಗೆ ಮಕ್ಕಳ ಆರೋಗ್ಯವೇ ಪ್ರಮುಖವಾಗಿರುವುದರಿಂದ ಮಕ್ಕಳ ಹಿತಕ್ಕೆ ಧಕ್ಕೆಯಾಗಬಹುದಾದಂತಹ ಯಾವುದೇ ನಿರ್ಧಾರವನ್ನು ದಿಢೀರ್ ತೆಗೆದುಕೊಳ್ಳುವುದಿಲ್ಲ, ನಮ್ಮ ಪೋಷಕರು ಈ ಕುರಿತು ಯಾವುದೇ ಆತಂಕಕ್ಕೊಳಗಾಗುವುದು ಬೇಡ ಎಂದರು.

Advertisement

ವಿದ್ಯಾಗಮ, ಯೂ-ಟ್ಯೂಬ್, ಆನ್ ಲೈನ್, ಚಂದನ ಚಾನಲ್ ನ ಸೇತುಬಂಧ ತರಗತಿಗಳು ನಮ್ಮ ಮಕ್ಕಳ ಕಲಿಕೆಯ ನಿರಂತರತೆಗೆ ಮಾತ್ರ ಉಪಯೋಗವಾಗುತ್ತಿವೆ. ಆವು ಪೂರ್ಣ ಪರ್ಯಾಯವೂ ಅಲ್ಲ, ಪೂರಕವೂ ಅಲ್ಲ ಎಂಬುದು ನಮಗೆ ಮನವರಿಕೆಯಾಗಿದೆ. ಶಾಲಾ ತರಗತಿ ಕಲಿಕೆಯಷ್ಟು ಯಾವುದೇ ಕಲಿಕಾ ವಿಧಾನ ಪರಿಣಾಮಕಾರಿಯಲ್ಲ. ಆದರೂ ಶಾಲಾರಂಭದ ಆಲೋಚನೆ‌ ಸದ್ಯಕ್ಕೆ ನಮ್ಮ ಮುಂದಿಲ್ಲವೆಂದರು.

ವೆಬಿನಾರ್ ನಲ್ಲಿ ಮಾತನಾಡಿದ ಅನೇಕ ಶಿಕ್ಷಕ-ಉಪನ್ಯಾಸಕ ಸಂಘಟನೆಗಳ ಪ್ರತಿನಿಧಿಗಳಿಂದ ಹಲವಾರು ಸಲಹೆಗಳು ಕೇಳಿಬಂದವು. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೂಜಾಟದಲ್ಲಿ ತೊಡಗುವಿಕೆಯಂತಹ ಸಾಮಾಜಿಕ ಪಿಡುಗುಗಳು ಸೇರಿದಂತೆ ಮಕ್ಕಳು ಶಾಲೆಗಳಿಂದ ವಿಮುಖವಾಗುವಂತಹ ಬಾಲಾಪರಾಧಕ್ಕೆ ಕಾರಣವಾಗಿ ಸಾಮಾಜಿಕವಾಗಿ ಮತ್ತೊಂದು ಸಮಸ್ಯೆಗೆ ಕಾರಣವಾಗುವಂತಹ ಸಂದರ್ಭಗಳು ಎದುರಾಗಬಹುದು. ಹಾಗಾಗಿ ಶಾಲೆಗಳನ್ನು ಅದರಲ್ಲೂ ವಿಶೇಷವಾಗಿ 10 ರಿಂದ 12ನೇ ತರಗತಿಗಳನ್ನಾದರೂ ಆರಂಭಿಸುವುದು ಉತ್ತಮ. ವಿದ್ಯಾಗಮವನ್ನು ಶಾಲೆಗಳ ಆವರಣದಲ್ಲಿ ನಡೆಸುವುದು ಉತ್ತಮ, ನಂತರ ಎಲ್ಲ ಮುಂಜಾಗ್ರತೆಯೊಂದಿಗೆ 7-10ನೇ ತರಗತಿಗಳನ್ನು ಆರಂಭಿಸುವುದು ಒಳಿತು. ಇಲ್ಲವೇ ಕೋವಿಡ್ ಇಲ್ಲದ ಪ್ರದೇಶಗಳಲ್ಲಿ ಶಾಲೆಗಳನ್ನು ತೆರೆಯಬಹುದು ಎಂದು ಹಲವು ಶಿಕ್ಷಕರು ಅಭಿಪ್ರಾಯ ವ್ಯಕ್ತ‌ಪಡಿಸಿದರು.

ಇದನ್ನೂ ಓದಿ: ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸರ್ಪ್ರೈಸ್ ಅಭ್ಯರ್ಥಿ? ಮಲ್ಲಿಕಾರ್ಜುನ ಖರ್ಗೆ ಸುಳಿವು

ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ. ಅನ್ಬುಕುಮಾರ್, ಸಮಗ್ರ ಶಿಕ್ಷಣ-ಕರ್ನಾಟಕ ರಾಜ್ಯ ಯೋಜನಾಧಿಕಾರಿ ದೀಪಾ ಚೋಳನ್, ರಾಜ್ಯ ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ನಿಂಗೇಗೌಡ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಅಧ್ಯಕ್ಷ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ವೆಬಿನಾರ್ ನಲ್ಲಿ 45ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next