ಮೈಸೂರು: ವಿಶ್ವ ಆರೋಗ್ಯ ಸಂಸ್ಥೆ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆ ಮುಖ್ಯ ಎಂದಿದೆ. ಹೀಗಾಗಿ ಶಾಲೆ ತೆರೆಯೋದು ಸರಿಯಲ್ಲ. ರಾಜ್ಯ ಸರ್ಕಾರ ಈ ವಿಚಾರದಲ್ಲಿ ಅವಸರದ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ಮಗುವಿಗೆ ಸೋಂಕು ಬಂದರೆ ಇಡೀ ಶಾಲೆ, ಮನೆ, ಏರಿಯಾ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ಶಾಲೆ ತೆರೆಯುವುದು ಸೂಕ್ತ. ವರ್ಷಕ್ಕೆ 200 ದಿನ ಶಾಲೆ ನಡೆದರೂ ಪರವಾಗಿಲ್ಲ. ಇದರಿಂದ ಏನೂ ಆಗುವುದಿಲ್ಲ, ಇದರ ಬಗ್ಗೆ ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ತಜ್ಞರ ಸಲಹೆ ಪಡೆಯಿರಿ: ಕೊರೊನಾ ಸಂದರ್ಭದಲ್ಲಿ ಶಾಲೆ ತೆರೆಯುವುದು ಸೂಕ್ತವೇ ಎಂಬುದನ್ನು ಶಿಕ್ಷಣ ತಜ್ಞರೊಡನೆ ಚರ್ಚಿಸಿ, 1ರಿಂದ 6ನೇ ತರಗತಿವರೆಗಿನ ಮಕ್ಕಳಿಗೆ ಕಡ್ಡಾಯವಾಗಿ ತರಗತಿಗಳು ನಡೆಯಲೇಬೇಕು ಎಂಬ ನಿಯಮವೇನಿಲ್ಲ. ಹಾಗಾಗಿ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ಶಾಲೆ ಪ್ರಾರಂಭ ಬೇಡ,
ಬೇಕಿದ್ದರೆ ಕಾಲೇಜು ಪ್ರಾರಂಭಿಸಿ, ಪ್ರಾಥಮಿಕ ಶಾಲೆಗಳನ್ನು ಜುಲೈ ಅಥವಾ ಆಗಸ್ಟ್‌ಗೆ ಪ್ರಾರಂಭಿಸಿ ಎಂದರು. ರಜೆಗಳನ್ನು ರದ್ದು ಮಾಡಿ: ಆಗಸ್ಟ್‌ನಿಂದ ಶಾಲೆಗಳುಪ್ರಾರಂಭವಾದರೆ ಸಿಲಬಸ್ ಮುಗಿಸುವುದು ಕಷ್ಟ ಎಂಬುದು ಹಲವರ ಅಭಿಪ್ರಾಯ. ಇದಕ್ಕಾಗಿ ಸರ್ಕಾರ ಕೆಲ ಬದಲಾವಣೆ ತರಬೇಕು. ಈಗಿರುವ ಹಲವು ಜಯಂತಿ ರಜೆ, ಹಬ್ಬಗಳ ರಜೆ, ದಸರಾ, ಕ್ರಿಸ್‌ಮಸ್ ರಜೆಗಳನ್ನು ರದ್ದು ಮಾಡಿ,
ವಾರದಲ್ಲಿ ಭಾನುವಾರ ಒಂದು ರಜೆ ಮಾಡಿ ಎಲ್ಲಾ ದಿನವೂ ತರಗತಿ ನಡೆದರೆ ಸಿಲಬಸ್ ಮುಗಿಯಲಿದೆ. ಇದಕ್ಕಾಗಿ ಸಿಲಬಸ್ ತೆಗೆಯುವ ವಿಚಾರವೂ ಬರುವುದಿಲ್ಲ ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಬಿಜೆಪಿ ಮುಖಂಡರಾದ ಶಿವಣ್ಣ, ಮಹೇಂದ್ರ, ವಿಜಯಕುಮಾರ್ ಇದ್ದರು.