ಮುಂಬಯಿ : ವಿಚಾರವಾದಿ ನರೇಂದ್ರ ದಾಬೋಲ್ಕರ್ ಮತ್ತು ಎಡ ಪಂಥೀಯ ನಾಯಕ ಗೋವಿಂದ ಪಾನ್ಸರೆ ಅವರ ಕೊಲೆ ತನಿಖೆಯಲ್ಲಿ ಪತ್ರಕರ್ತೆ ಗೌರೀ ಲಂಕೇಶ್ ಕೊಲೆ ಕೇಸಿನ ತನಿಖೆಯ ಅಂಶಗಳನ್ನು ನೆಚ್ಚಿಕೊಳ್ಳದೆ ಸ್ವತಂತ್ರವಾಗಿ ತನಿಖೆ ನಡೆಸಿ ಎಂದು ಬಾಂಬೆ ಹೈಕೋರ್ಟ್ ಇಂದು ಸಿಬಿಐ ಮತ್ತು ಮಹಾರಾಷ್ಟ್ರ ಸಿಐಡಿಗೆ ಅಪ್ಪಣೆ ಮಾಡಿದೆ.
‘ಪಾನ್ಸರೆ ಮತ್ತು ದಾಭೋಲ್ಕರ್ ಕೇಸುಗಳಲ್ಲಿ ಪರಾರಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ’ ಎಂದು ಜಸ್ಟಿಸ್ ಎಸ್ ಸಿ ಧರ್ಮಾಧಿಕಾರಿ ಮತ್ತು ಎಂ ಎಸ್ ಕಾರ್ಣಿಕ್ ಅವರನ್ನು ಒಳಗೊಂಡ ಪೀಠವು, ಸಿಬಿಐ ಮತ್ತು ಸಿಐಡಿಗೆ ಚಾಟಿ ಬೀಸಿದೆ.
ರಾಜ್ಯ ಸಿಐಡಿ ರೂಪಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ), ದಾಭೋಲ್ಕರ್ ಮತ್ತು ಪಾನ್ಸರೆ ಕೊಲೆ ಕೇಸಿನ ತನಿಖೆಯಲ್ಲಿ ಆಗಿರುವ ಪ್ರಗತಿಯ ತಾಜಾ ವರದಿಯನ್ನು ಕೋರ್ಟಿಗೆ ಸಲ್ಲಿಸಿದ ಸಂದರ್ಭದಲ್ಲಿ ನ್ಯಾಯಾಲಯ ಈ ಮಾತುಗಳನ್ನು ಸ್ಪಷ್ಟಪಡಿಸಿತು.
ಪತ್ರಕರ್ತೆ ಗೌರೀ ಲಂಕೇಶ್ ಕೊಲೆ ಪ್ರಕರಣದಲ್ಲಿ ಕರ್ನಾಟಕದ ತನಿಖಾಧಿಕಾರಿಗಳು ಬಂಧಿಸಿರುವವರನ್ನು ತಾನು ದಾಭೋಲ್ಕರ್‌ಮತ್ತು ಪಾನ್ಸರೆ ಕೊಲೆ ಕೇಸಿಗೆ ಸಂಬಂಧಪಟ್ಟು ಪ್ರಶ್ನಿಸುತ್ತಿದ್ದೇನೆ ಎಂದು ಎಸ್‌ಐಟಿ ಕೋರ್ಟಿಗೆ ತಿಳಿಸಿದಾಗ, ‘ನಿಮ್ಮ ತನಿಖೆಯನ್ನು ನೀವು ಸ್ವತಂತ್ರವಾಗಿ ಮಾಡಿ; ಅನ್ಯರನ್ನು ನೆಚ್ಚಿಕೊಳ್ಳಬೇಡಿ’ ಎಂದು ನ್ಯಾಯಾಲಯ ಖಡಕ್ ಮಾತನ್ನು ಹೇಳಿತು.
“ಕರ್ನಾಟಕದಲ್ಲಿನ ಇನ್ನೊಂದು ಕೇಸಿನ ಆರೋಪಿಗಳನ್ನು ನೀವು ಪ್ರಶ್ನಿಸುತ್ತಿದ್ದೀರಿ; ಆದರೆ ಎಸ್‌ಐಟಿ ಪ್ರಗತಿ ವರದಿಯಲ್ಲಿ ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಅದು ತೆಗೆದುಕೊಂಡಿರುವ ಯಾವುದೇ ಕ್ರಮಗಳ ನಿಖರ ವಿವರಗಳಿಲ್ಲ ‘ ಎಂದು ಪೀಠ ಹೇಳಿತು.
ಆಗ ಸಿಬಿಐ ವಕೀಲರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಮಾತನಾಡಿ, “ನಮ್ಮ ಅಧಿಕಾರಿಗಳು ಪರಾರಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ’ ಎಂದು ಹೇಳಿದರು.