Advertisement

ಹಿರಿಯ ಕಲಾವಿದರನ್ನು ಕಡೆಗಣಿಸಬೇಡಿ: ಟೆನ್ನಿಸ್‌ ಕೃಷ್ಣ ಮನವಿ

09:47 AM Nov 13, 2019 | Lakshmi GovindaRaju |

“ನಮಗಿನ್ನೂ ಉತ್ಸಾಹವಿದೆ, ಎನರ್ಜಿಯೂ ಇದೆ. ನಮಗೂ ಕರೆದು ಕೆಲಸ ಕೊಡಿ…’ ಇದು ಹಿರಿಯ ಹಾಸ್ಯ ಕಲಾವಿದ ಟೆನ್ನಸ್‌ ಕೃಷ್ಣ ಅವರ ಕಳಕಳಿಯ ಮನವಿ. ಹೌದು, ಟೆನ್ನಿಸ್‌ಕೃಷ್ಣ ಸಿನಿ ಪ್ರಿಯರ ಅಚ್ಚುಮೆಚ್ಚಿನ ಹಾಸ್ಯ ಕಲಾವಿದ. ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳ ಮೂಲಕ ನಗುವಿನ ಕಚಗುಳಿ ಇಟ್ಟವರು. ನೋಡುಗರನ್ನು ನಗಿಸುವ ಟೆನ್ನಿಸ್‌ ಕೃಷ್ಟ ಅದೇಕೋ ಬೇಸರದಲ್ಲಿದ್ದಾರೆ. ಅವರ ಬೇಸರಕ್ಕೆ ಕಾರಣ, ಈಗೀಗ ಕನ್ನಡ ಚಿತ್ರರಂಗದಲ್ಲಿ ಹಿರಿಯ ಕಲಾವಿದರನ್ನು ಕಡೆಗಣಿಸುತ್ತಿರುವುದು.

Advertisement

ಈ ಕುರಿತು ಸ್ವತಃ ಟೆನ್ನಿಸ್‌ ಕೃಷ್ಣ ಹೇಳ್ಳೋದು ಹೀಗೆ. “ಇತ್ತೀಚೆಗೆ ಯಾರೊಬ್ಬರೂ ಹಿರಿಯ ಕಲಾವಿದರನ್ನು ಸರಿಯಾಗಿ ಗುರುತಿಸುತ್ತಿಲ್ಲ. ಅವರಿಗೂ ಇನ್ನು ನಟಿಸುವ ಉತ್ಸಾಹವಿದೆ. ಚೈತನ್ಯವಿದೆ. ಅವರನ್ನೂ ಗಮನಿಸಿ, ಅವರಿಗೊಂದು ಪಾತ್ರ ಕೊಡಿ. ಅದೆಷ್ಟೋ ಹಿರಿಯ ಕಲಾವಿದರು ಸಿನಿಮಾದಲ್ಲಿ ನಟಿಸಲು ರೆಡಿ ಇದ್ದಾರೆ. ಹಾಗಂತ, ಯಾರೂ ಸುಮ್ಮನೆ ಕೂತಿಲ್ಲ. ಹಿರಿಯ ಕಲಾವಿದರೆಲ್ಲರೂ ಒಂದು ತಂಡ ಕಟ್ಟಿಕೊಂಡು, ತಮ್ಮದೇ ಕಾರ್ಯಕ್ರಮ ಕೊಡುವ ಮೂಲಕ ಬಿಝಿಯಾಗಿದ್ದಾರೆ.

ವಿದೇಶಗಳಿಗೂ ಹೋಗಿ ಕಾರ್ಯಕ್ರಮ ಕೊಡುತ್ತಾರೆ. ಆದರೆ, ಎಲ್ಲೇ ಹೋದರೂ, ಅಭಿಮಾನಿಗಳು ಸಿನಿಮಾದಲ್ಲಿ ಯಾಕೆ ನಟಿಸುತ್ತಿಲ್ಲ ಎಂಬ ಪ್ರಶ್ನೆ ನಮ್ಮ ಹಿರಿಯ ಕಲಾವಿದರ ಮುಂದಿಡುತ್ತಾರೆ. ಸಹಜವಾಗಿಯೇ ಆ ಮಾತು ಬೇಸರ ತರಿಸುತ್ತೆ. ನನ್ನನ್ನೂ ಸೇರಿದಂತೆ ಹಲವು ಹಿರಿಯ ಕಲಾವಿದರು ನಟಿಸಲು ರೆಡಿ. ಆದರೆ, ಕರೆದು ಅವಕಾಶ ಕೊಡುವ ಮನಸ್ಸುಗಳು ಬೇಕಲ್ಲವೇ? ಇವತ್ತು ಬಿರಾದಾರ, ಬ್ಯಾಂಕ್‌ ಜನಾರ್ದನ್‌, ನಾನು ಸೇರಿದಂತೆ ಇನ್ನೂ ಅನೇಕ ಹಿರಿಯ ಕಲಾವಿದರಿದ್ದಾರೆ. ಅವರನ್ನು ಕರೆದು ಒಂದು ಪಾತ್ರ ಕೊಡಿ.

ಹಾಗಂತ, ಹೊಸಬರಿಗೆ ಕೊಡಬಾರದು ಅಂತಲ್ಲ. ಅವರೂ ಬೆಳೆಯಲಿ. ಹಾಗೆಯೇ, ಹಳಬರನ್ನೂ ಕಡೆಗಣಿಸದೆ, ಅವಕಾಶ ಕೊಡಿ. ಪರಭಾಷೆ ಚಿತ್ರರಂಗದಲ್ಲಿ ಹಿರಿಯ ಕಲಾವಿದರು ಇಂದಿಗೂ ಹೊಸಬರ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಮಾತ್ರ ಅಂತಹ ಅವಕಾಶಗಳಿಲ್ಲ. ಇಂದಿಗೂ ಸಹ ಹಿರಿಯ ಕಲಾವಿದರು ಯಾರೇ ಕರೆದರೂ ಡೇಟ್‌ ಕೊಟ್ಟು ಕೆಲಸ ಮಾಡಿಬರುತ್ತಾರೆ. ಹಾಗಾಗಿ, ಹೊಸಬರು ಹಳಬರನ್ನೂ ಗಮನಿಸಿ, ಅವಕಾಶ ಕೊಡಿ’ ಎಂಬುದು ಟೆನ್ನಿಸ್‌ ಕೃಷ್ಣ ಅವರ ಮನವಿ.

Advertisement

Udayavani is now on Telegram. Click here to join our channel and stay updated with the latest news.

Next