ಲೋಕಾಪುರ: ಪಟ್ಟಣದ ಲೋಕೇಶ್ವರ ದೇವಸ್ಥಾನದಲ್ಲಿ ಬಾಗಲಕೋಟೆ-ಕುಡಚಿ ರೈಲ್ವೆ ಯೋಜನೆಯ ಕುರಿತು ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಪೂರ್ವಭಾವಿ ಸಭೆ ನಡೆಯಿತು.
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದಿನ್ ಖಾಜಿ ಮಾತನಾಡಿ. ಡಿ.15ರೊಳಗಾಗಿ ಖಜ್ಜಿಡೋಣಿಯಿಂದ ಕಾಮಗಾರಿ ಪುನರ್ ಆರಂಭಿಸಿ ಕುಡಚಿವರೆಗೆ ಟೆಂಡರ್ ಕರೆಯಬೇಕು. ಜನರಿಗೆ ತಪ್ಪು ಮಾಹಿತಿಕೊಟ್ಟು ಹೋರಾಟಕ್ಕೆ ಹಿನ್ನಡೆ ಮಾಡುವ ಕುತಂತ್ರಿಗಳಿಗೆ ಬಿಸಿ ತಟ್ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎರಡು ವರ್ಷಗಳ ಹಿಂದೆ ಖಜ್ಜಿಡೋಣಿಯಿಂದ ಲೋಕಾಪುರವರೆಗೆ 9 ಕಿಮೀಗೆ 152 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದು ಗುತ್ತಿಗೆದಾರರನ್ನು ನೇಮಿಸಿದ್ದು ನೀವೇ. ಆದರೆ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಲೋಕಾಪುರದಿಂದ ಯಾದವಾಡ ವರೆಗೆ ಟೆಂಡರ್ ಕರೆದಿದ್ದೇವೆ ಎಂದು ಜನರನ್ನು ತಪ್ಪು ದಾರಿಗೆ ಎಳೆಯಬೇಡಿ. ಮೊದಲು ಖಜ್ಜಿಡೋಣಿಯಿಂದ ಕಾಮಗಾರಿ ಪ್ರಾರಂಭ ಮಾಡಿ ಕುಡಚಿ ವರೆಗೆ ಪೂರ್ಣ ಟೆಂಡರ್ ಕರೆಯಬೇಕು. ಇಲ್ಲದಿದ್ದಲ್ಲಿ ಅಧಿವೇಶನಕ್ಕೆ ಹೋಗುವ ಎಲ್ಲ ಜನಪ್ರತಿನಿಧಿಗಳಿಗೆ ಲೋಕಾಪುರ ಪಟ್ಟಣದಲ್ಲಿ ಎಲ್ಲ ರಸ್ತೆಗಳನ್ನು ಬಂದ್ ಮಾಡಿ ತಡೆಹಿಡಿಯಲಾಗುವುದು ಎಂದರು.
ಬಾಗಲಕೋಟೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಸರಕಾರದ ಮೇಲೆ ಒತ್ತಡ ಹೇರಿ ಕುಡಚಿ-ಬಾಗಲಕೋಟೆ ರೈಲ್ವೆ ಮಾರ್ಗದಲ್ಲಿ ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸಿ ರೈತರ ಮನವೊಲಿಸಿ ಭೂಮಿಗೆ ಯೋಗ್ಯ ಬೆಲೆಯನ್ನು ನೀಡಿ ಕಾಮಗಾರಿ ಬೇಗನೆ ಪ್ರಾರಂಭ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಜನರು ಯೋಗ್ಯ ಪಾಠ ಕಲಿಸುತ್ತಾರೆ. ಡಿ.17ರಂದು ಜಿಲ್ಲಾ ಧಿಕಾರಿ ಕಚೇರಿ ಎದುರು ಅರೆ ಬೆತ್ತಲೆ ಪ್ರತಿಭಟನೆ ಮತ್ತು 18ರಂದು ಖಜ್ಜಿಡೋಣಿ ವರೆಗೆ ಆರಂಭವಾಗಿರುವ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗುವುದು. 19ರಂದು ಎಲ್ಲ ವಾಹನಗಳನ್ನು ತಡೆ ಹಿಡಿಯಲಾಗುವುದು ಎಂದರು.
ಸ್ಥಳೀಯರಾದ ಭೀಮಪ್ಪ ಹುಣಶಿಕಟ್ಟಿ ಮಾತನಾಡಿ, ಪ್ರತಿಭಟನೆ ಜೊತೆಗೆ ಕಾನೂನಾತ್ಮಕ ಹೋರಾಟವನ್ನು ಕೈಗೊಳ್ಳುವುದು ಸೂಕ್ತ ಎಂದು ಹೇಳಿದರು. ಸ್ಥಳೀಯರಾದ ನೀಲೇಶ ಬನ್ನೂರ, ಗುಲಾಬಸಾಬ ಅತ್ತಾರ, ಬಸವರಾಜ ಜಂಗಿ, ಬಲರಾಮ, ಸಾಲುಂಕಿ, ಮಂಜುಳಾ ಭುಸರಿ, ಜಯಶ್ರೀ ಗುಲಬಾಳ, ಲಕ್ಷ್ಮೀ ಹೊಸಮನಿ, ನಿವೃತ್ತ ರೈಲ್ವೆ ಅಧಿಕಾರಿ ಗುರುರಾಜ ಪೊತ್ನಿಸ್, ಫಯಾಜ್ ಮನಿಯಾರ್, ಮೈನುದ್ದೀನ ಖಾಜಿ, ರಮೇಶ ತಿ ರಾಘಾ ಮುಂತಾದವರು ಇದ್ದರು.