ಹೊಸದಿಲ್ಲಿ : “ನಿಮ್ಮ ತಂದೆ ಕ್ಯಾಪ್ಟನ್ ಮನ್‌ದೀಪ್ ಸಿಂಗ್ ಅವರ ಹುತಾತ್ಮಗಿರಿಯನ್ನು ಜೋಕ್ ಮಾಡಬೇಡಿ’ ಎಂದು ಪಠಾಣ್‌ಕೋಟ್ ವಾಯು ನೆಲೆ ಮೇಲಿನ ಪಾಕ್ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಲ್ಯಾನ್ಸ್ ನಾಯಕ್ ಮೂಲರಾಜ್ ಅವರ ಮಗಳು ಪೂಜಾ ಅವರು, ಗುರ್‌ವೆುಹರ್ ಕೌರ್ ಳನ್ನು ಕೇಳಿಕೊಂಡಿದ್ದಾರೆ.
ಎಬಿವಿಪಿ ವಿರುದ್ಧದ ಸಾಮಾಜಿಕ ಜಾಲ ತಾಣದ ಅಭಿಯಾನದ ವೇಳೆ “ನನ್ನ ಅಪ್ಪನನ್ನು ಕೊಂದದ್ದು ಪಾಕಿಸ್ಥಾನ ಅಲ್ಲ; ಯುದ್ದ’ ಎಂದು ಹೇಳಿದ್ದ ದಿಲ್ಲಿ ವಿವಿ ವಿದ್ಯಾರ್ಥಿನಿ ಗುರ್‌ವೆುಹರ್ ಕೌರ್ ಗೆ ದೇಶದ ವಿವಿದ ವಲಯಗಳಿಂದ, ವಿವಿಧ ಬಗೆಯ ಜನರಿಂದ, ವಿವಿಧ ರೀತಿಯಲ್ಲಿ ಟೀಕೆ ವ್ಯಕ್ತವಾಗಿತ್ತು. ಆಕೆಯ ತಂದೆ ಕ್ಯಾಪ್ಟನ್ ಮನ್‌ದೀಪ್ ಸಿಂಗ್ 1999ರಲ್ಲಿ ಜಮ್ಮು – ಕಾಶ್ಮೀರದ ಮೇಲೆ ಪಾಕ್ ಉಗ್ರರು ನಡೆಸಿದ್ದ ದಾಳಿಯಲ್ಲಿ ಹುತಾತ್ಮರಾಗಿದ್ದರು.
ಎಬಿವಿಪಿ ವಿರುದ್ದ ಸಾಮಾಜಿಕ ಜಾಲ ತಾಣ ಅಭಿಯಾನ ಕೈಗೊಂಡಿದ್ದ ಗುರ್‌ವೆುಹರ್‌ಗೆ ಪ್ರಾಣ ಬೆದರಿಕೆ ಹಾಗೂ ರೇಪ್ ಬೆದರಿಕೆಗಳು ಬಂದಿದ್ದವು. ಲೇಡಿ ಶ್ರೀ ರಾಮ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಆಕೆ, ಇದೀಗ ದಿಲ್ಲಿಯನ್ನು ತೊರೆದು ತನ್ನ ಹುಟ್ಟೂರಾದ ಜಾಲಂಧರ್‌ಗೆ ತೆರಳಿದ್ದಾಳೆ.
“ನಾನು ಎಬಿವಿಪಿಗೆ ಹೆದರುವುದಿಲ್ಲ’ ಎಂದು ಹೇಳಿಕೊಂಡಿದ್ದ ಗುರ್‌ವೆುಹರ್ ಕೌರ್ ಮೊನ್ನೆ ಇದ್ದಕ್ಕಿದ್ದಂತೆಯೇ “ನಾನು ಸಾಮಾಜಿಕ ಜಾಲ ತಾಣ ಅಭಿಯಾನವನ್ನು ಕೈಬಿಟ್ಟಿದ್ದೇನೆ’ ಎಂದು ಹೇಳುವ ಮೂಲಕ ಅಚ್ಚರಿ ಉಂಟುಮಾಡಿದ್ದರು.
“ನನ್ನ ಅಪ್ಪನನ್ನು ಕೊಂದದ್ದು ಪಾಕಿಸ್ಥಾನವಲ್ಲ; ಯುದ್ಧ’ ಎಂಬ ಗುರ್‌ವೆುಹರ್ ಮಾತು, ಲ್ಯಾನ್ಸ್ ನಾಯಕ್ ಮೂಲರಾಜ್ ಅವರ ಪುತ್ರಿ ಪೂಜಾಗೆ ಸರಿ ಕಂಡಿಲ್ಲ; ಅಂತೆಯೇ ಆಕೆ “ನಿಮ್ಮ ತಂದೆಯ ಹುತಾತ್ಮಗಿರಿಯನ್ನು ಜೋಕ್ ಮಾಡಬೇಡಿ’ ಎಂದು ಗುರ್‌ವೆುಹರ್‌ಗೆ ಹೇಳಿರುವುದಾಗಿ ತಿಳಿಯಲಾಗಿದೆ.