Advertisement

ವದಂತಿಗಳಿಗೆ ಕಿವಿಗೊಡದಿರಿ: ಮಹಾಂತೇಶ್‌

06:55 PM Sep 26, 2020 | Suhan S |

ಜಗಳೂರು: ಜಿಲ್ಲಾಡಳಿತದಿಂದ ಕೋವಿಡ್‌ ನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದು, ವೆಂಟಿಲೇಟರ್‌ ಬೆಡ್‌ಗಳ ಕೊರತೆ  ಟೆಸ್ಟ್‌ ಮಾಡಿಸಿದರೆ ಹಣ ಬರುತ್ತದೆ ಎಂಬ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಮನವಿ ಮಾಡಿದರು.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಐಸೋಲೇಷನ್‌ ವಾರ್ಡ್‌ ಪರಿಶೀಲಿಸಿ ನಂತರ ಮಾತನಾಡಿದ ಅವರು, ಕೋವಿಡ್‌ ಪರೀಕ್ಷೆ ಮಾಡಿಸಿದರೆ ಹಣ ಬರುತ್ತದೆ ಎಂಬುದು ಸೇರಿದಂತೆ ಸಾಕಷ್ಟು ವದಂತಿಗಳು ಹಬ್ಬಿದ್ದು ಅವೆಲ್ಲಾ ಸುಳ್ಳು. ಹಾಗಾಗಿ ಸಾರ್ವಜನಿಕರು ಕಿವಿ ಕೊಡಬಾರದು. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರ್ಯಾಪಿಡ್‌ ಟೆಸ್ಟ್‌ಗಳನ್ನು ಕಡಿಮೆ ಮಾಡಿ ಗಂಟಲು ದ್ರವ ಪರೀಕ್ಷೆ ಒತ್ತು ನೀಡುವಂತೆ ಮತ್ತು ಪ್ರತಿನಿತ್ಯ 2500 ಟೆಸ್ಟ್‌ ಮಾಡಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನವಾಗಿದೆ. ಹಾಗಾಗಿ ಪ್ರತಿಯೊಬ್ಬರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ವೈದ್ಯರು ಎಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು. ಕೋವಿಡ್‌ ರೋಗಿಗಳ ಬಗ್ಗೆ ಹೆಚ್ಚು ಗಮನಹರಿಸಿ ಎಂದು ಸೂಚನೆ ನೀಡಿದರು. ಆಸ್ಪತ್ರೆಯ ಎಡಭಾಗದಲ್ಲಿ ಕೋವಿಡ್‌ ವಾರ್ಡ್‌ಗೆ ಪ್ರತ್ಯೇಕವಾಗಿ ನಿರ್ಮಾಣಗೊಳ್ಳುತ್ತಿರುವ ರ್‍ಯಾಂಪ್‌ ಕಾಮಗಾರಿ ಇನ್ನೂ 3 ದಿನದೊಳಗೆ ಪೂರ್ಣಗೊಳ್ಳಬೇಕು. ಕೋವಿಡ್‌ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಮೇಲ್ಭಾಗದಲ್ಲಿ ಪ್ರತ್ಯೇಕ ವಾರ್ಡ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಿ ಇತರೆ ರೋಗಿಗಳನ್ನು ಕೆಳಭಾಗದಲ್ಲಿರಿಸಿ ಚಿಕಿತ್ಸೆ ನೀಡಬೇಕು ಎಂದರು. ಆಂಬ್ಯುಲೆನ್ಸ್‌ ಕೊರತೆಯಿಂದ ಎಲ್ಲಾ ರೀತಿಯ ರೋಗಿಗಳಿಗೂ ಒಂದೇ ಆಂಬ್ಯುಲೆನ್ಸ್‌ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಪ.ಪಂ ಜೆಸಿಬಿ ದುರಸ್ತಿಯಲ್ಲಿದ್ದು, ಕೋವಿಡ್‌ ರೋಗಿಗಳ ಶವಸಂಸ್ಕಾರಕ್ಕೆ ತೊಂದರೆಯಾಗುತ್ತಿದೆ ಎಂಬ ದೂರಿನ ಬಗ್ಗೆ ತಕ್ಷಣವೇ ಜೆಸಿಬಿ ರಿಪೇರಿ ಮಾಡಿಸಲು ಮುಖ್ಯಾಧಿಕಾರಿ ರಾಜು ಬಣಕಾರ್‌ ಅವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಫೈನಾನ್ಸ್‌ಗಳ ಮೇಲೆ ನಿಗಾವಹಿಸಿ: ಗ್ರಾಮೀಣ ಭಾಗದಲ್ಲಿ ಯಾವುದೇ ಕೋವಿಡ್ ಬಗ್ಗೆ ಮುಂಜಾಗ್ರತಾ ಕ್ರಮಗಳಾದ ಸಾನಿಟೈಸರ್‌, ಮಾಸ್ಕ್ ಸಾಮಾಜಿಕ ಅಂತರವಿಲ್ಲದೆ ಸಾಲ ವಸೂಲಾತಿಗೆ ಹೋಗುತ್ತಿರುವ ಮಾಹಿತಿ ಬಂದಿದ್ದು, ಕೂಡಲೇ ತಹಶೀಲ್ದಾರ್‌ ಹಾಗೂ ಡಿವೈಎಸ್ಪಿ ಅವರು ಫೈನಾನ್ಸ್‌ ಸಂಸ್ಥೆಗಳ ಮುಖ್ಯಸ್ಥರ ಜತೆ ಸಭೆ ನಡೆಸಿ ಎಚ್ಚರಿಕೆ ನೀಡಿರಿ ಎಂದು ಸೂಚಿಸಿದರು.

Advertisement

ತಹಶೀಲ್ದಾರ್‌ ಡಾ.ನಾಗವೇಣಿ, ಪಪಂ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್‌, ಕಂದಾಯ ನಿರೀಕ್ಷಕ ಕುಬೇಂದ್ರನಾಯ್ಕ, ಡಾ.ಸಂಜಯ್‌ ಹಿರಿಯ ಶುಶ್ರೂಷಕಿ ಮೀನಾಕ್ಷಮ್ಮ, ಮಹಾದೇವಮ್ಮ ಕಿರಿಯ ಆರೋಗ್ಯ ಸಹಾಯಕ ಪಿ.ಎಂ. ರುದ್ರೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next