ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿಧಾನಸಭೆ ಸದಸ್ಯತ್ವ ರದ್ದು ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಯತ್ನಾಳ್ ಹೇಳಿಕೆ ಖಂಡಿಸಿ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತ ನಾಡಿ, ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರೇ ಅಲ್ಲ. ಗಾಂಧಿವಾದಿಗಳ ಬಗ್ಗೆಯೇ ಅವಹೇಳನ ಮಾಡುತ್ತಿದ್ದಾರೆ. ಇದು ಅಕ್ಷಮ್ಯ. ಕೂಡಲೇ ಯತ್ನಾಳ್ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ವಿಧಾನಸಭೆ ಕಲಾಪ ನಡೆಯಲು ಬಿಡುವುದಿಲ್ಲ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯ ಹಿಂದೆ ಸಂಘ ಪರಿವಾರದ ಕುಮ್ಮಕ್ಕು ಇದೆ. ಇಂತಹ ಹೇಳಿಕೆ ಇದೇ ಮೊದಲಲ್ಲ. ಹಿಂದೆ ಅನಂತಕುಮಾರ್ ಹೆಗಡೆ, ತೇಜಸ್ವಿ ಸೂರ್ಯ ಇದೇ ರೀತಿ ಹೇಳಿಕೆ ನೀಡಿದ್ದರು. ಇದೀಗ ಯತ್ನಾಳ್ ಸೇರಿದ್ದಾರೆ. ಬಿಜೆಪಿಯವರು ಗೋಡ್ಸೆ ಸಂತತಿಯವರು ಎಂದು ಟೀಕಿಸಿದರು.
ಮಾ. 2ರಿಂದ ಅಧಿವೇಶನ ಆರಂಭವಾಗುತ್ತದೆ. ಯತ್ನಾಳ್ ಸದಸ್ಯತ್ವ ರದ್ದು ಹಾಗೂ ಕ್ಷಮೆಯಾಚನೆಗೆ ಒತ್ತಾಯಿಸಿ ನಾವು ಹೋರಾಟ ಮಾಡಲಿದ್ದೇವೆ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ ಎಂದರು. ಮಾಜಿ ಸ್ವೀಕರ್ ರಮೇಶ್‌ಕುಮಾರ್ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಯಿಂದಲೇ ಉಚ್ಛಾಟಿಸಬೇಕು. ಯತ್ನಾಳ್ ಅವರು ಮೊದಲು ಅವರ ಮೇಲಿರುವ ವಂಚನೆ ಸೇರಿ 23 ಪ್ರಕರಣಗಳ ಬಗ್ಗೆ ಮಾತನಾಡಲಿ.
ಯತ್ನಾಳರಿಗೆ ಮಹಾತ್ಮಗಾಂಧಿ, ನೆಹರು, ದೊರೆಸ್ವಾಮಿಯವರ ಇತಿಹಾಸ ಗೊತ್ತಿಲ್ಲ. ನಮಗೆ ಶಾಸಕತ್ವ ಮುಖ್ಯ ಅಲ್ಲ, ಸಂವಿಧಾನ ಮುಖ್ಯ ಎಂದರು. ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ್, ಮಾಜಿ ಸಚಿವರಾದ ಜಮೀರ್ ಅಹಮದ್, ರಾಮಲಿಂಗಾರೆಡ್ಡಿ ಇತರರು ಪ್ರತಿಭಟನೆಯಲ್ಲಿದ್ದರು.
ಕಾಂಗ್ರೆಸ್, ಜೆಡಿಎಸ್ ಮುಖವಾಣಿಯಂತೆ ವರ್ತಿಸುತ್ತಿರುವ ಎಚ್.ಎಸ್.ದೊರೆಸ್ವಾಮಿ ನಕಲಿ ಸ್ವಾತಂತ್ರ ಹೋರಾಟಗಾರ. ಅವರ ನಡವಳಿಕೆ ಏನೆಂಬುದು ಎಲ್ಲರಿಗೂ ಗೊತ್ತು. ಹೀಗಾಗಿ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದು, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹೇಳಿಕೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ.
-ಬಸನಗೌಡ ಪಾಟೀಲ ಯತ್ನಾಳ, ವಿಜಯಪುರ ಬಿಜೆಪಿ ಶಾಸಕ