ವೆಲ್ಲಿಂಗ್ಟನ್ : ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮೈದಾನದಲ್ಲಿ ತೋರಿಸುವ ಜಾಣ್ಮೆ ಬಗ್ಗೆ ಎಲ್ಲರಿಗೂ ಗೊತ್ತು. ನಾಯಕನಲ್ಲದಿದ್ದರೂ ಕೂಡಾ ಫೀಲ್ಡಿಂಗ್ ಸೆಟ್ ಮಾಡುತ್ತಾ ಯಶಸ್ಸು ಕಾಣುವ ಧೋನಿ, ವಿಕೆಟ್ ಕೀಪಿಂಗ್ ನಲ್ಲಿ ಅಗ್ರಗಣ್ಯ ಎನ್ನುವುದರಲ್ಲಿ ಅತಿಶಯೋಕ್ತಿಯಿಲ್ಲ.
ತನ್ನ ಅತೀ ವೇಗದ ಸ್ಟಂಪಿಂಗ್, ಅದ್ಭುತ ಕ್ಯಾಚ್ ಗಳು, ವಿಶಿಷ್ಟ ರನ್ ಔಟ್ ಗಳಿಂದಲೇ ವಿಶ್ವದ ಗಮನ ಸೆಳೆದಿರುವ ರಾಂಚಿ ರ‍್ಯಾಂಬೋ ಮಾಡಿರುವ ರನ್ ಔಟ್ ಬಗ್ಗೆ ಐಸಿಸಿ ಮೆಚ್ಚುಗೆ ಸೂಚಿಸಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಪಂದ್ಯದ ಸ್ಟಂಪಿಂಗ್ ದೃಶ್ಯವನ್ನು ಟ್ವೀಟ್ ಮಾಡಿರುವ ಐಸಿಸಿ, ‘ಧೋನಿ ವಿಕೆಟ್ ಹಿಂದೆ ಇದ್ದರೆ ನೀವು ಕ್ರೀಸ್ ಬಿಡಬೇಡಿ’ ಎಂದು ಹೇಳುವ ಮೂಲಕ ಮೆಚ್ಚುಗೆ ಸೂಚಿಸಿದೆ.
ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಧೊನಿ ಆತಿಥೇಯ ಕಿವೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ತನ್ನ ಅದ್ಭುತ ಕೈಚಳಕ ತೋರಿಸಿದ್ದಾರೆ. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕಿವೀಸ್ ನ ಜಿಮ್ಮಿ ನೀಶಮ್ ಇನ್ನಿಂಗ್ಸ್ ನ 36 ನೇ ಓವರ್ ನಲ್ಲಿ ಕೇದಾರ್ ಜಾದವ್ ಬಾಲ್ ಗೆ ಸ್ವೀಪ್ ಮಾಡಲು ಪ್ರಯತ್ನಿಸಿದರು. ಆದರೆ ಚೆಂಡು ಬ್ಯಾಟ್ ಗೆ ತಾಗದೆ ವಿಕೆಟ್ ಹಿಂದೆ ಹೋದಾಗ ಕೇದಾರ್ ಏಲ್ ಬಿಡಬ್ಯೂ ಮನವಿ ಮಾಡಿದರು. ಇದನ್ನು ಕಂಡು ನೀಶಮ್ ಕ್ರೀಸ್ ಬಿಟ್ಟಾಗ ಹಿಂದಿನಿಂದ ಕೀಪರ್ ಧೋನಿ ಬುದ್ದಿವಂತಿಕೆಯಿಂದ ಚೆಂಡನ್ನು ನೇರವಾಗಿ ವಿಕೆಟ್ ಗೆ ಎಸೆದು ನೀಶಮ್ ಔಟಾಗಿದ್ದರು. ಇದು ಭಾರತೀಯರ ಗೆಲುವಿಗೆ ಸಹಕಾರಿಯಾಗಿತ್ತು. ಈ ರನ್ ಔಟ್ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.