ಲಕ್ನೋ: ಹಿಜಾಬ್ ವಿವಾದದ ವಿಚಾರದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಭಾರತಕ್ಕೆ ಪಾಠ ಹೇಳಲು ಯತ್ನಿಸಿದ್ದು, ಇದಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ತೀಕ್ಷ್ಣ ಪ್ರತಿಕ್ರಿಯೆ ಮೂಲಕ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಆಣೆ -ಪ್ರಮಾಣ ಸವಾಲು:ಬೇಳೂರು ಗೋವಾ ಪ್ರಚಾರಕ್ಕೆ ಹಾಲಪ್ಪ ವ್ಯಂಗ್ಯ
ಉತ್ತರಪ್ರದೇಶದ ಚುನಾವಣಾ ಪ್ರಚಾರ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ಒವೈಸಿ, ನೆರೆಯ ಪಾಕಿಸ್ತಾನ ತನ್ನ ವ್ಯವಹಾರವನ್ನು ಮಾತ್ರ ನೋಡಿಕೊಳ್ಳಲಿ. ಮಲಾಲಳನ್ನು ಕಾಪಾಡಲಾಗದ ಪಾಕಿಸ್ತಾನ ಇದೀಗ ಹೆಣ್ಣುಮಕ್ಕಳ ಶಿಕ್ಷಣದ ವಿಚಾರದಲ್ಲಿ ಭಾರತಕ್ಕೆ ಪಾಠ ಮಾಡುವ ಅಗತ್ಯವಿಲ್ಲ ಎಂದು ಚಾಟಿ ಬೀಸಿದ್ದಾರೆ.
ಮಲಾಲ ಯೂಸುಫ್ ಜಾಯ್ ಗೆ ವಿದ್ಯಾಭ್ಯಾಸ ಕಲಿಯುತ್ತಿದ್ದಾಳೆಂದು ಗುಂಡು ಹೊಡೆಯಲಾಗಿತ್ತು. ನಿಮ್ಮ(ಪಾಕಿಸ್ತಾನ) ಹೆಣ್ಣುಮಗಳಿಗೆ ರಕ್ಷಣೆ ಕೊಡಲು ವಿಫಲರಾಗಿದ್ದೀರಿ. ಈಗ ಭಾರತಕ್ಕೆ ಪಾಠ ಮಾಡುತ್ತಿದ್ದೀರಾ ಎಂದು ಒವೈಸಿ ಪ್ರಶ್ನಿಸಿದ್ದಾರೆ.
ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಮೂಲಕ ಭಾರತ ಮುಸ್ಲಿಂ ಹೆಣ್ಣುಮಕ್ಕಳ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ. ಹಿಜಾಬ್ ವಿಚಾರದಲ್ಲಿ ಈ ನಿರ್ಬಂಧ ಸರಿಯಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಹೇಳಿಕೆ ನೀಡಿದ್ದ ಬೆನ್ನಲ್ಲೇ ಒವೈಸಿ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ವಿವರಿಸಿದೆ.