ಹೊಸದಿಲ್ಲಿ : ‘ಪಾಕಿಸ್ಥಾನದ ಕುಮ್ಮಕ್ಕಿನಿಂದಾಗಿ ಅಸ್ಸಾಂ ಮತ್ತು ಇತರ ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಭಾರೀ ಪ್ರಮಾಣದಲ್ಲಿ ನುಗ್ಗಿ ಬರುತ್ತಿದ್ದಾರೆ ಮತ್ತು ಇದರಿಂದಾಗಿ ಅಸ್ಸಾಂನಲ್ಲಿ ಮುಸ್ಲಿಮರ ಜನಸಂಖ್ಯೆ ಒಂದೇ ಸಮನೆ ಏರುತ್ತಿದೆ. ಅಸ್ಸಾಮಿನಲ್ಲಿ ಮೌಲಾನಾ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ (ಆಲ್ ಇಂಡಿಯಾ ಯುನೈಟೆಡ್ ಡೆಮೋಕ್ರಾಟಿಕ್ ಫ್ರಂಟ್) ಪಕ್ಷ ಅತ್ಯಂತ ಕ್ಷಿಪ್ರಗತಿಯಲ್ಲಿ ಬಲಿಷ್ಠವಾಗುತ್ತಿದೆ’ ಎಂದು ಭಾರತೀಯ ಸೇನಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆ ನೀಡಿರುವ ಬೆನ್ನಿಗೇ ಇದೀಗ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ರಾವತ್‌ಗೆ ಎಚ್ಚರಿಕೆ ರೂಪದಲ್ಲಿ ತಿರುಗೇಟು ನೀಡಿದ್ದಾರೆ.
“ದೇಶದ ಪ್ರಜಾಸತ್ತೆ ಮತ್ತು ಸಂವಿಧಾನ ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸುತ್ತದೆ. ಸೇನೆ ಯಾವತ್ತೂ ಚುನಾಯಿತ ಪೌರ ನಾಯಕತ್ವದಡಿ ಕೆಲಸ ಮಾಡಬೇಕಾಗುತ್ತದೆ’ ಎಂದು ಓವೈಸಿ, ಜನರಲ್ ರಾವತ್‌ಗೆ ಟಾಂಗ್ ಕೊಟ್ಟಿದ್ದಾರೆ.
ಜನರಲ್ ರಾವತ್ ಅವರು ದೇಶದ ಗಡಿ ಕಾಯುವ ಕೆಲಸ ಮಾಡಿಕೊಂಡಿರಬೇಕೇ ಹೊರತು ರಾಜಕೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವ ಕೆಲಸ ಮಾಡಕೂಡದು ಎಂದು ಹೇಳುವ ಮೂಲಕ ಓವೈಸಿ ಅವರು ರಾವತ್‌ಗೆ ಎಚ್ಚರಿಕೆ ನೀಡಿದ್ದಾರೆ.
“ಮೌಲಾನಾ ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ (ಆಲ್ ಇಂಡಿಯಾ ಯುನೈಟೆಡ್ ಡೆಮೋಕ್ರಾಟಿಕ್ ಫ್ರಂಟ್) ಪಕ್ಷ ಅತ್ಯಂತ ಕ್ಷಿಪ್ರಗತಿಯಲ್ಲಿ ಬಲಿಷ್ಠವಾಗುತ್ತಿದೆ; 1984ರಲ್ಲಿ ಲೋಕಸಭೆಗೆ ಕೇವಲ 2 ಸ್ಥಾನಗಳನ್ನು ಗೆದ್ದು ಅನಂತರ ಅತ್ಯಂತ ವೇಗವಾಗಿ ಬೆಳೆದು ಬಂದ ಬಿಜೆಪಿಗಿಂತಲೂ ಮಿಗಿಲಾಗಿ ಎಐಡಿಯುಎಫ್ ಪಕ್ಷ ಬಲಿಷ್ಠವಾಗುತ್ತಿದೆ. ಅಸ್ಸಾಂ ನಲ್ಲಿ ಮುಸ್ಲಿಮರ ಜನಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿರುವ ಪರಿಣಾಮವಾಗಿ ಮುಂದೊಂದು ದಿನ ಇದರ ಪ್ರತ್ಯೇಕತೆ ಕೂಗು ಬಲಿಷ್ಠವಾಗಬಹುದು” ಎಂದು ಜನರಲ್ ರಾವತ್ ಹೇಳಿದ್ದರು.