ಕಡೂರು: ಸರಕಾರವು ಪ್ರವರ್ಗ-1ರ ಜಾತಿಗಳಿಗೆ ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ನೀಡುವ ಸೌಲಭ್ಯಗಳನ್ನು ನೀಡುತ್ತಿತ್ತು. ಆದರೆ 2012 ರ ನಂತರ ಈ ಸೌಲಭ್ಯವನ್ನು ರದ್ದು ಮಾಡಿದ್ದು ಕೂಡಲೇ ಮೊದಲಿನಂತೆ ಸೌಲಭ್ಯಗಳನ್ನು ನೀಡಬೇಕೆಂದು ಪ್ರವರ್ಗ-1ರ ಜಾತಿಗಳ ಒಕ್ಕೂಟ ಸರಕಾರಕ್ಕೆ ಒತ್ತಾಯ ಮಾಡುತ್ತದೆ ಎಂದು ಜಿಲ್ಲಾ ಪ್ರವರ್ಗ-1 ರ ಜಿಲ್ಲಾ ಸಂಚಾಲಕ ಟಿ.ಆರ್. ಲಕ್ಕಪ್ಪ ತಿಳಿಸಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕಿನ ಸಭಾಂಗಣದಲ್ಲಿ ಭಾನುವಾರ ಹಿಂದುಳಿದ ಆಯೋಗದ ಮಾಜಿ ಸದಸ್ಯರಾದ ಹೆಳವಾರು ಅವರ ಅಧ್ಯಕ್ಷತೆಯಲ್ಲಿ ಒಕ್ಕೂಟದ ಜಿಲ್ಲಾ ಮಟ್ಟದ ಚಿಂತನ-ಮಂಥನ (ಪೂರ್ವಭಾವಿ) ಸಭೆಯನ್ನು ಕರೆಯಲಾಗಿದ್ದು ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
2012ರ ಹಿಂದೆ ಆದಾಯದ ಮಿತಿ ಇರಲಿಲ್ಲ. ಶಿಕ್ಷಣ, ಉದ್ಯೋಗಕ್ಕೂ ಆದಾಯ ಮಿತಿ ಇರಲಿಲ್ಲ. ಉಚಿತವಾಗಿ ಶಿಕ್ಷಣ ಮತ್ತು ಉದ್ಯೋಗ ನೀಡಲಾಗುತ್ತಿತ್ತು. ಆದರೆ ಸರಕಾರದ ಉನ್ನತ ಅಧಿಕಾರಿಗಳ ತಪ್ಪು ಮಾಹಿತಿಯಿಂದ 2012ರ ನಂತರ ಈ ಎಲ್ಲಾ ಸೌಲಭ್ಯಗಳನ್ನು ರದ್ದುಗೊಳಿಸಿದ್ದು ಪ್ರವರ್ಗ-1ರಲ್ಲಿ ಬರುವ 95 ಜಾತಿ-ಉಪಜಾತಿಗಳಿಗೆ ಅನ್ಯಾಯವಾಗಿದೆ. ಕೂಡಲೇ ಸರಕಾರವು ಇದನ್ನು ಸರಿಪಡಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಮುಂದಿನ ದಿನಗಳಲ್ಲಿ ಬೃಹತ್ ರಾಲಿ ನಡೆಸಲಿದ್ದೇವೆ ಎಂದರು.
ರಾಜ್ಯದ ಜನಸಂಖ್ಯೆಯಲ್ಲಿ ಪ್ರವರ್ಗ-1ರಲ್ಲಿ ಒಂದು ಕೋಟಿಗೂ ಹೆಚ್ಚಿನ ಜನರಿದ್ದು ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಹಿಂದುಳಿದಿದ್ದು ನಮ್ಮ ನ್ಯಾಯಬದ್ಧವಾದ ಹಕ್ಕುಗಳನ್ನು ಪಡೆಯಲು ಒಕ್ಕೂಟ ನಿರಂತರವಾಗಿ ಹೋರಾಟ ಮಾಡಲಿದೆ. ಇದಕ್ಕೆ ನಮ್ಮ ರಾಜ್ಯಾಧ್ಯಕ್ಷ ಟಿ.ಡಿ. ಶ್ರೀನಿವಾಸ ಮತ್ತು ಪದಾಧಿಕಾರಿಗಳು ಈಗಾಗಲೇ 16 ಜಿಲ್ಲೆಗಳಲ್ಲಿ ಸಂಘಟನೆ ಮಾಡಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಅಧ್ಯಕ್ಷರ ಆಯ್ಕೆಗಳನ್ನು ಮಾಡುತ್ತಿದ್ದು ರಾಜ್ಯದ 60 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಒಕ್ಕೂಟದಲ್ಲಿ ಬರುವ ಜನಾಂಗಗಳ ಮತದಾರರೇ ನಿರ್ಣಯಕರಾಗಲಿದ್ದಾರೆ ಎಂಬುದನ್ನು ಎಲ್ಲಾ ರಾಜಕೀಯ ಪಕ್ಷಗಳು ಮರೆಯಬಾರದು ಎಂಬ ಎಚ್ಚರಿಕೆ ನೀಡಿದರು.
ಒಕ್ಕೂಟವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದು ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡುವ ಶೈಕ್ಷಣಿಕ ಸೌಲಭ್ಯಗಳನ್ನು ನೀಡಬೇಕು. ರಾಜ್ಯದ ವಿವಿಗಳಲ್ಲಿ ಪ್ರವರ್ಗ-1ರ ಜಾತಿಗಳ ಕೋಶವನ್ನು ಮರು ಸ್ಥಾಪಿಸಬೇಕು. ಜೊತೆಗೆ ವಿದ್ಯಾರ್ಥಿ ನಿಲಯಗಳನ್ನು ಉಳಿಸಬೇಕು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರವರ್ಗ-1ರ ಜಾತಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನೀಡಬೇಕು.
ಈಗಿರುವ ಸರಕಾರದಲ್ಲಿ ಇಬ್ಬರು ಶಾಸಕರಿದ್ದು ಅವರಿಗೆ ಸಚಿವ ಸ್ಥಾನ ನೀಡಬೇಕು. ಅಭಿವೃದ್ಧಿ ನಿಗಮ ಸ್ಥಾಪಿಸಿ 100 ಕೋಟಿ ಅನುದಾನವನ್ನು ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮಕ್ಕೆ 300 ಕೋಟಿ ಅನುದಾನ ನೀಡಬೇಕು. ಗುರುಪೀಠ, ವಿದ್ಯಾರ್ಥಿ ನಿಲಯ ಸ್ಥಾಪಿಸಲು ತಾಲೂಕು, ಜಿಲ್ಲಾ ಮಟ್ಟದಲ್ಲಿ ಒಂದು ಎಕರೆ ಭೂಮಿಯನ್ನು ನೀಡಬೇಕೆಂಬ ಬೇಡಿಕೆಯನ್ನು ಸರಕಾರಕ್ಕೆ ನೀಡಲಾಗಿದೆ ಎಂದರು.
ಸರಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸುತ್ತದೆ ಎಂಬ ಭರವಸೆ ಇದ್ದು ಆಗಸ್ಟ್‌ವರೆಗೆ ಕಾದು ನಂತರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಸೂರ್ಯ ಪ್ರಕಾಶ್ ಕೋಲಿ, ಪ್ರಧಾನ ಕಾರ್ಯದರ್ಶಿ ಎ.ವಿ. ಲೋಕೇಶಪ್ಪ,ನರಸಿಂಹಮೂರ್ತಿ, ಡಾ| ಪೂರ್ಣಿಮಾ ಜೋಗಿ, ಉಪ್ಪಾರ ಸಮಾಜದ ನಾಗರಾಜು, ಗಂಗಾಮತಸ್ಥ ಸಮಾಜದ ಧನಂಜಯ, ತೆಲಗುಗೌಡ ಸಮಾಜದ ಹನುಮಂತಪ್ಪ, ದೊಂಬಿ ದಾಸ ಜನಾಂಗದ ಮಂಜುನಾಥ್, ಪಾರ್ವತಿ, ಜೋಗಿ ಜನಾಂಗದ ವೆಂಕಟೇಶ್, ಯಾದವ ಸಮಾಜದ ದೇವಿರಪ್ಪ, ದೊಂಬಿದಾಸರ ಶಾರದ ಮತ್ತು ಹೇಮಾವತಿ, ಮಲ್ಲಿಕಾರ್ಜುನ್ ಸಿಂಗಟಗೆರೆ, ಕಾವೇರಿ ಲಕ್ಕಪ್ಪ, ಕಡೂರು ಸಪ್ತಕೋಟಿ ಧನಂಜಯ ಮತ್ತಿತರರು ಇದ್ದರು.