ಬೀದರ: ಪ್ರತಿಯೊಬ್ಬರ ಜೀವನ ಅತ್ಯಮೂಲ್ಯ. ಕೋವಿಡ್ ನಿಯಂತ್ರಣ, ಜೀವಗಳ ಉಳಿವಿಗಾಗಿ ಸರ್ಕಾರ ಕರ್ಫ್ಯೂ ಕರ್ಫ್ಯೂ ಜಾರಿಗೊಳಿಸಿದೆ. ನಿಮಗೆ ಕೈ ಮುಗಿಯುತ್ತೇನೆ, ಮನೆಯಿಂದ ಹೊರಗೆ ಬರಬೇಡಿ, ಕೊರೊನಾ ನಿಯಮ ಪಾಲಿಸಿ. ಹೀಗೆ ನಗರದಲ್ಲಿ ಮಂಗಳವಾರ ಕರ್ಫ್ಯೂ ನಡುವೆಯೂ ಬೇಕಾಬಿಟ್ಟಿಯಾಗಿ ಸಂಚರಿಸುತ್ತ ವಾಹನ ಸವಾರರಿಗೆ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮಾಡಿಕೊಂಡ ಮನವಿ ಇದು.
ಇಲ್ಲಿನ ಬ್ರಿಮ್ಸ್ ಕಾಲೇಜಿನಲ್ಲಿ ಕೋವಿಡ್ ಲಸಿಕೆ ಪಡೆದ ಬಳಿಕ ಸಚಿವರು ನೇರವಾಗಿ ಕರ್ಫ್ಯೂ ಜಾರಿ ಪರಿಶೀಲನೆಗೆ ಸಿಟಿ ರೌಂಡ್ ನಡೆಸಿದರು. ಜಿಲ್ಲೆಯಲ್ಲಿ ಕರ್ಫ್ಯೂ ಜಾರಿ ಇದ್ದರೂ ಅಲ್ಲಲ್ಲಿ ವಾಹನಗಳ ಓಡಾಟ, ಜನ ಸಂಚಾರ ಕಾಣುತ್ತಿದೆ ಎಂಬ ಮಾಧ್ಯಮಗಳು ಗಮನಕ್ಕೆ ತಂದ ಹಿನ್ನೆಲೆ ತಾವೇ ಖುದ್ದು ಸಿಟಿಯಲ್ಲಿ ಸಂಚರಿಸಿದರು. ಮೊದಲಿಗೆ ಬ್ರಿಮ್ಸ್ ಆಸ್ಪತ್ರೆ ಹೊರಾಂಗಣದಲ್ಲಿ ಸಂಚರಿಸಿದ ಸಚಿವರು, ರೋಗಿಗಳ ಸಂಬಂಧಿಕರಿಗೆ ಮಾತ್ರ ಪ್ರವೇಶಾವಕಾಶ ನೀಡಿರಿ.
ಅನವಶ್ಯಕವಾಗಿ ಜನರು ಆಸ್ಪತ್ರೆಗಳ ಸುತ್ತಲು ಇರದಂತೆ ಕಟ್ಟುನಿಟ್ಟಿನ ಕ್ರಮ ವಹಿಸಿರಿ ಎಂದು ಇದೇ ವೇಳೆ ಸಚಿವರು ಆಸ್ಪತ್ರೆ ಹೊರಾಂಗಣದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿದರು. ಎಸ್‌ಪಿ ನಾಗೇಶ ಡಿ.ಎಲ್. ಅವರೊಂದಿಗೆ ಸಿಟಿ ರೌಂಡ್ ಗೆ ಹೊರಟ ಸಚಿವರು, ಅಂಬೇಡ್ಕರ್ ವೃತ್ತ ಮತ್ತು ಬಸವೇಶ್ವರ ವೃತ್ತದಲ್ಲಿ ಕೆಲ ಹೊತ್ತು ನಿಂತು, ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸವಾರರನ್ನು ತಡೆದು ಕರ್ಫ್ಯೂ ಇದೆ ಅನವಶ್ಯವಾಗಿ ಸುತ್ತಬೇಡಿ ಎಂದು ಕೈ ಮುಗಿದು ಮನವಿ ಮಾಡಿದರು.
ನಾಗಮಾರಪಳ್ಳಿ ಆಸ್ಪತ್ರೆಗೆ ಭೇಟಿ: ಬೊಮ್ಮಗೊಂಡೇಶ್ವರ ವೃತ್ತದಿಂದ ಮೈಲೂರ ಕಡೆಗಿನ ರಸ್ತೆ, ರಾಣಿ ಚನ್ನಮ್ಮ ವೃತ್ತದಲ್ಲಿ ಕೆಲ ಹೊತ್ತು ಪರಿಶೀಲಿಸಿದ ಸಚಿವರು, ತಮ್ಮೆದುರಿಗೆ ಬಂದ ವ್ಯಕ್ತಿಗೆ, “ಆಸ್ಪತ್ರೆಗೆ ಹೋಗುತ್ತಿದ್ದೀರಿ ಸರಿ, ಮಾಸ್ಕ್ ಹಾಕಿಕೊಳ್ಳಿ? ಎಂದು ಸಲಹೆ ಮಾಡಿದರು. ಸಿಟಿ ರೌಂಡ್ ವೇಳೆಯಲ್ಲಿ ಸಚಿವರಾದ ಪ್ರಭು ಚವ್ಹಾಣ, ನಗರದ ನಾಗಮಾರಪಳ್ಳಿ ಆಸ್ಪತ್ರೆಗೂ ಭೇಟಿ ನೀಡಿದರು. ಅಲ್ಲಿ ಕೋವಿಡ್ ಕೇರ್ ಸೆಂಟರ್ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೀದರ ನಗರ ಸೇರಿದಂತೆ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕರ್ಫ್ಯೂಗೆ ಎಲ್ಲ ರೀತಿಯ ಕ್ರಮ ವಹಿಸಲಾಗಿದೆ.
ಆಯಾ ಪೊಲೀಸ್ ಠಾಣೆಗಳ ಅ ಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯತತ್ಪರಾಗಿದ್ದಾರೆ. ಎಲ್ಲೆಡೆ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿ ಕಾರಿಗಳು ಮತ್ತು ಸಿಬ್ಬಂದಿ ನಿಯೋಜಿಸಿ ಸಂಪೂರ್ಣ ಕರ್ಫ್ಯೂ ಜಾರಿಗೆ ಗಮನ ಹರಿಸಲಾಗಿದೆ. ಕರ್ಫ್ಯೂ ಜಾರಿ ಕ್ರಮಕ್ಕಾಗಿ ಹೆಚ್ಚುವರಿಯಾಗಿ ಬೀದರಗೆ 4 ಡಿಆರ್ ಪಡೆಗಳು ಮತ್ತು 2 ಕೆಎಸ್‌ಆರ್‌ಪಿ ಪಡೆಗಳು ಆಗಮಿಸಿವೆ.
ಬೀದರ ಸಿಟಿನಲ್ಲಿ ಒಟ್ಟು 13 ಪಾಯಿಂಟ್‌ಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಇದೇ ವೇಳೆ ಎಸ್‌ಪಿ ನಾಗೇಶ ಡಿ.ಎಲ್., ಎಎಸ್‌ಪಿ ಡಾ| ಗೋಪಾಲ ಎಂ.ಬ್ಯಾಕೋಡ್ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕೆಆರ್‌ಐಐಡಿಬಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬು ವಾಲಿ, ಸಚಿವರ ವಿಶೇಷ ಕರ್ತವ್ಯಾಧಿ ಕಾರಿ ಡಾ| ಶಿವಕುಮಾರ ಕಟ್ಟೆ, ಆಪ್ತ ಸಹಾಯಕ ಪ್ರಶಾಂತ ಜಾಧವ್ ಸೇರಿದಂತೆ ಇತರರು ಇದ್ದರು