ಮೈಸೂರು: ಸಮಾಜದಲ್ಲಿ ಮಾನವೀಯ ಮೌಲ್ಯಗಳು ನಶಿಸುತ್ತಿವೆ. ವಸ್ತುಗಳಿಗೆ ಹೆಚ್ಚು ಗೌರವ ಕೊಡಬೇಡಿ, ಮಾನವತೆಯ ತತ್ವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಿ ಎಂದು ಉಪಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ ಸಲಹೆ ನೀಡಿದರು. ನಗರದ ಶ್ರೀ ನಟರಾಜ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 2019-20ನೇ ಶೈಕ್ಷಣಿಕ ಸಾಲಿನ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜನಪದ ಗಾಯಕ ಅಮ್ಮರಾಮಚಂದ್ರ ಮಾತನಾಡಿ, ಇಂದು ಮೂಲ ಜನಪದ ದಾಟಿಯಲ್ಲಿ ಹಾಡುಗಳನ್ನು ಹಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ನಮ್ಮ ಮೂಲ ಜನಪದವನ್ನು ಬಿಡಬಾರದು. ಇತ್ತೀಚೆಗೆ ಮೂಲ ಜನಪದ ದಾಟಿಯಲ್ಲಿ ಹಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೂಲ ಜನಪದ ದಾಟಿಯನ್ನು ಅರಿತು ಆ ದಾಟಿಯಲ್ಲಿಯೇ ಹಾಡುಗಳನ್ನು ಹಾಡಬೇಕು. ಇದರಿಂದ ಜನಪದವು ಮತ್ತಷ್ಟು ಶ್ರೀಮಂತವಾಗುವುದು ಎಂದರು.
ವಿದ್ಯಾರ್ಥಿಗಳು ತಮಗೆ ದೊರೆತ ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿಭೆಯನ್ನು ಹೊರಹಾಕುವ ಮೂಲಕ ಗುರುತಿಸಿಕೊಳ್ಳಬೇಕು. ದೊರೆತ ವೇದಿಕೆಗಳನ್ನು ಸದುಪಯೋಗಪಡಿಸಿಕೊಂಡಿದ್ದಕ್ಕೆ ನಾನು ಈ ಮಟ್ಟಕ್ಕೆ ಏರಲು ಸಾಧ್ಯವಾಯಿತು. ನನ್ನ ಬಡತನವನ್ನು ನಿವಾರಿಸುವುದಕ್ಕೆ ಕಲಿತ ವಿದ್ಯೆಯೇ ಈ ಹಾಡುಗಾರಿಕೆ. ಇದು ಗುಡಿಸಲಿನಿಂದ ಅರಮನೆಯ ಕಡೆಗೆ ಕರೆದೂಯ್ಯುವಂತೆ ಮಾಡಿದೆ ಎಂದು ಹೇಳಿದರು.
ಹಟ, ಛಲ, ಮನಸ್ಸು ಇದ್ದರೆ ಏನನ್ನಾದರೂ ಸಾಧಿಸಬಹುದು. ವಿದ್ಯಾರ್ಥಿಗಳು ಉತ್ತಮ ಮಾರ್ಗದಲ್ಲಿ ಶ್ರಮಿಸಿದರೆ ಬದುಕಿನಲ್ಲಿ ಜಯ ಸಾಧಿಸಬಹುದು. ಕೇವಲ ಗುರಿ ಇದ್ದರೆ ಸಾಲದು ಗುರಿ ಸಾಧಿಸುವ ಛಲ ಇರಬೇಕು. ನಮ್ಮಲ್ಲಿರುವ ಕಲೆ ವಿಶ್ವಮಟ್ಟದಲ್ಲಿ ನಮ್ಮನ್ನು ಬೆಳಸಬಹುದು. ಅದಕ್ಕೆ ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು. ನಟರಾಜ ಪ್ರತಿಷ್ಠಾನ ವಿಶೇಷಾಧಿಕಾರಿ ಪ್ರೊ.ಕೆ.ಸತ್ಯನಾರಾಯಣ, ಕಾಲೇಜು ಪ್ರಾಂಶುಪಾಲ ವಿ.ಪ್ರದೀಪ್, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಬಿ.ರಾಧಾ ಇತರರು ಉಪಸ್ಥಿತರಿದ್ದರು.