Advertisement

ಕಸುಬುಗಾರಿಕೆ ಮೆರೆಯಿರಿ

01:58 AM Jun 14, 2019 | sudhir |

ಮೊದಲ ಸಂಪುಟ ಸಭೆಯಲ್ಲಿ ಪ್ರಧಾನಿ ಮೋದಿ ತನ್ನ ಸಂಪುಟದ ಸಚಿವರಿಗೆ ಅಕ್ಷರಶಃ ಹೆಡ್‌ಮೇಷ್ಟ್ರ ಶೈಲಿಯಲ್ಲಿ ಪಾಠ ಮಾಡಿದ್ದಾರೆ. ಕಚೇರಿಗೆ ಸರಿಯಾದ ಸಮಯಕ್ಕೆ ಬರಬೇಕು, ಮನೆಯಲ್ಲಿ ಕುಳಿತು ಕೆಲಸ ಮಾಡುವ ಅಭ್ಯಾಸ ಒಳ್ಳೆಯದಲ್ಲ, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ, ಹಿರಿಯರು ಕಿರಿಯ ಸಚಿವರಿಗೆ ಕಲಿಸಬೇಕು, ನಿತ್ಯ ಕೆಲವು ನಿಮಿಷ ಇಲಾಖೆಗೆ ಸಂಬಂಧಪಟ್ಟ ಹೊಸ ವಿಚಾರಗಳನ್ನು ಅಧಿಕಾರಿಗಳ ಜೊತಗೆ ಚರ್ಚಿಸಿ ತಿಳಿದುಕೊಳ್ಳಬೇಕು, ಹಾಗೆಯೇ ಸಚಿವರು ಅನಗತ್ಯವಾಗಿ ಗೈರು ಹಾಜರಾಗದೆ ನಿಗದಿತವಾಗಿ ಕಚೇರಿಗೆ ಬರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂಬಿತ್ಯಾದಿ ಹಿತವಚನಗಳನ್ನು ಮೋದಿ ಹೇಳಿದ್ದಾರೆ.

Advertisement

ಸರಕಾರವನ್ನು ನಡೆಸುವ ಮುಖ್ಯಸ್ಥನಾಗಿ ಸಂಪುಟದ ಸಹೋದ್ಯೋಗಿಗಳ ಜತೆಗಿನ ಹೀಗೊಂದು ಮಾತುಕತೆ ಬಹಳ ಉತ್ತಮವಾದ ನಡೆ. ಹಾಗೆಂದು ಸಚಿವರಾದವರಿಗೆ ಹೇಗೆ ಕಾರ್ಯ ನಿಭಾಯಿಸಬೇಕು ಎಂದು ತಿಳಿದಿಲ್ಲ ಅಂತ ಅಲ್ಲ. ಆದರೆ ಸರಕಾರದ ಮುಖ್ಯಸ್ಥನಾಗಿ ಮೋದಿ ಮುಂದಿನ ಐದು ವರ್ಷ ತನ್ನ ಜತೆ ಸಂಪುಟವನ್ನು ಮುಂದಕ್ಕೊಯ್ಯಬೇಕಾ ಗಿರುವುದರಿಂದ ಆರಂಭದಲ್ಲೇ ಅದಕ್ಕೊಂದು ಮಾರ್ಗಸೂಚಿ ಹಾಕಿ ಕೊಡಬೇಕಿತ್ತು. ಆ ಕೆಲಸವನ್ನು ಅವರು ಅಚ್ಚುಕಟ್ಟಾಗಿ ಮಾಡಿದ್ದಾರೆ.

ಮೋದಿಯ ವೇಗಕ್ಕೆ ತಕ್ಕಂತೆ ಕೆಲಸ ಮಾಡುವುದೇ ಸಚಿವರು ಮಾತ್ರವಲ್ಲ ಅಧಿಕಾರಿಗಳಿಗೂ ಇರುವ ಸವಾಲು. ಪಕ್ಕಾ ಕಸುಬುದಾರನ ಕೈಕೆಳಗೆ ಕೆಲಸ ಮಾಡುವಾಗ ನಾವೂ ಅದಕ್ಕೆ ತಕ್ಕ ವೃತ್ತಿಪರತೆಯನ್ನು ಮೈಗೂಡಿಸಿ ಕೊಳ್ಳಬೇಕಾಗುತ್ತದೆ. ಹಿಂದೆ ಈ ರೀತಿ ಕೆಲಸ ಮಾಡಿ ಗೊತ್ತಿಲ್ಲದಿದ್ದರೂ ಮೋದಿ ಕೈಕೆಳಗೆ ಕೆಲಸ ಮಾಡುವಾಗ ಬಲವಂತವಾಗಿಯಾದರೂ ರೂಢಿಸಿಕೊಳ್ಳ ಬೇಕಾಗುತ್ತದೆ. ಇದಕ್ಕೆ ಹೊಂದಿಕೊಳ್ಳಲಾಗದವರು ನೇಪಥ್ಯಕ್ಕೆ ಸರಿಯುತ್ತಾರೆ ಎನ್ನುವುದು ಈ ಸಲ ರಚಿಸಿದ ಸಂಪುಟದಲ್ಲೇ ಗೊತ್ತಾಗುತ್ತದೆ. ತನ್ನ ಸಂಪುಟದಲ್ಲಿ ಕೆಲಸ ಮಾಡುವವರಿಗಷ್ಟೇ ಜಾಗ ಎನ್ನುವುದನ್ನು ಮೋದಿ ಸೂಚ್ಯವಾಗಿಯೇ ತಿಳಿಸಿದ್ದಾರೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಇಂಥದ್ದೊಂದು ಕಠಿಣ ನಿಲುವಿನ ಅಗತ್ಯವೂ ಇದೆ.

ಮೋದಿ ಪ್ರತಿಯೊಂದು ಇಲಾಖೆಯನ್ನೂ ಗಮನಿಸುತ್ತಿರುತ್ತಾರೆ. ಪ್ರತಿಯೊಬ್ಬ ಸಚಿವನ ಮೇಲೂ ಅವರು ಒಂದು ಕಣ್ಣಿಟ್ಟಿರುತ್ತಾರೆ. ಮೋದಿ ಪ್ರಧಾನಿಯಾದ ಬಳಿಕ ಸರಕಾರಿ ಇಲಾಖೆಗಳಲ್ಲಿ ಆಗಿರುವ ಬದಲಾವಣೆಗಳ ಕುರಿತು ಆಗಾಗ ಸುದ್ದಿಗಳು ಬರುತ್ತಿರುತ್ತಿವೆ. ಹಿಂದೆ ಬೆಳಗ್ಗೆ 11.30ಕ್ಕೆ ಕಚೇರಿಗೆ ಬಂದು ಮಧ್ಯಾಹ್ನ 1.30ಕ್ಕೆ ಎದ್ದು ಹೋಗುತ್ತಿದ್ದ ಅಧಿಕಾರಿಗಳು ಈಗ ಬೆಳಗ್ಗೆ 9.30ಕ್ಕೆಲ್ಲ ಕಚೇರಿಯಲ್ಲಿರುತ್ತಾರೆ. ಊಟಕ್ಕಾಗಿ ಪ್ರತ್ಯೇಕ ಸಮಯ ಎಂದಿಲ್ಲ. ಕೆಲಸದ ನಡುವೆಯೇ ಒಂದಿಷ್ಟು ಬಿಡುವು ಮಾಡಿಕೊಂಡು ಊಟ, ತಿಂಡಿ ಮಾಡಿಕೊಳ್ಳಬೇಕು ಎಂಬೆಲ್ಲ ವರದಿಗಳನ್ನು ಓದಿದ್ದೇವೆ. ಸರಕಾರ ನಡೆಸುವ ಮುಖ್ಯಸ್ಥ ಪಕ್ಕಾ ಕಸುಬುದಾರನಾಗಿದ್ದರೆ ಹೇಗೆ ಬದಲಾವಣೆ ತನ್ನಿಂದ ತಾನೇ ಆಗುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ. ಇಂಥ ವೃತ್ತಿಪರತೆಯನ್ನೇ ಮೋದಿ ತನ್ನ ಸಹೋದ್ಯೋಗಿಗಳಿಂದ ನಿರೀಕ್ಷಿಸುತ್ತಿರುವುದು. ಕೆಲಸವನ್ನು ಆನಂದಿಸುವವರಿಗೆ ಮೋದಿ ಸಂಪುಟದಲ್ಲಿ ಕೆಲಸ ಮಾಡುವುದೊಂದು ವಿಶಿಷ್ಟ ಅನುಭವ ಎನ್ನುವುದು ನಿತಿನ್‌ ಗಡ್ಕರಿಯವರಂಥ ಕೆಲ ಸಚಿವರ ಖಾಸಾ ಅನುಭವವೂ ಹೌದು.

ಸಚಿವರು ಸಂಸದರಿಗಿಂತ ಮೇಲಲ್ಲ ಎಂಬ ಮಾತನ್ನು ಕೂಡಾ ಮೋದಿ ಈ ಸಂದರ್ಭದಲ್ಲಿ ಹೇಳಿದ್ದಾರೆ. ಸಚಿವರಾದ ಕೂಡಲೇ ತಮ್ಮ ತೂಕ ಒಂದು ಹಿಡಿ ಹೆಚ್ಚುತ್ತದೆ ಎಂದು ಭಾವಿಸುವವರಿಗೆ ಹೇಳಿದ ಮಾರ್ಮಿಕವಾದ ಮಾತಿದು.

Advertisement

ಎರಡನೇ ಅವಧಿಗೆ ಅಭೂತಪೂರ್ವ ಬಹುಮತದೊಂದಿಗೆ ಅಧಿಕಾರ ಕ್ಕೇರಿರುವ ಮೋದಿ ನೇತೃತ್ವದ ಸರಕಾರದ ಮೇಲೆ ಜನರು ಅಪಾರ ನಿರೀಕ್ಷೆ ಇಟ್ಟಿದ್ದಾರೆ. ಅಂತೆಯೇ ಆರ್ಥಿಕತೆಯನ್ನು ಸದೃಢಗೊಳಿಸುವ, ಕೃಷಿ ಕ್ಷೇತ್ರದ ಬಿಕ್ಕಟ್ಟನ್ನು ನಿವಾರಿಸುವ, ಕೈಗಾರಿಕೋದ್ಯಮಗಳಿಗೆ ವೇಗೋತ್ಕರ್ಷ ನೀಡುವಂಥ ಬೃಹತ್‌ ಸವಾಲುಗಳು ಅವರ ಮೇಲಿದೆ. ಐದು ವರ್ಷದ ಅವಧಿಯಲ್ಲಿ ಇದನ್ನು ಸಾಧಿಸದೇ ಹೋದರೆ ಮೋದಿಯ ಮೇಲಿಟ್ಟ ನಂಬಿಕೆ ಹುಸಿಯಾಗಬಹುದು.ಹೀಗಾಗಬಾರದೆಂದಿದ್ದರೆ ಇಡೀ ಸರಕಾರ ಅತ್ಯುತ್ತಮವಾದ ಕಸುಬುಗಾ ರಿಕೆಯನ್ನು ಮೈಗೂಡಿಕೊಳ್ಳುವುದು ಅನಿವಾ ರ್ಯ. ಮೋದಿಯ ಮಾತಿನ ಹಿಂದೆ ಈ ಎಚ್ಚರಿಕೆ ಇದೆ. ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದು ಸಚಿವರಾದವರ ಜವಾಬ್ದಾರಿ.

Advertisement

Udayavani is now on Telegram. Click here to join our channel and stay updated with the latest news.

Next