Advertisement

ಸಾಲ ವಸೂಲಿಗೆ ಬಲವಂತ ಮಾಡದಿರಿ: ನಳಿನ್‌

01:51 AM May 19, 2020 | Sriram |

ಮಂಗಳೂರು: ಲಾಕ್‌ಡೌನ್‌ನಿಂದ ಜನತೆ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಬ್ಯಾಂಕ್‌ ಅಧಿಕಾರಿಗಳು ಯಾವುದೇ ಕಾರಣಕ್ಕೂ ಬಲವಂತದಿಂದ ಯಾರಿಂದಲೂ ಸಾಲ ವಸೂಲಿ ಮಾಡಬಾರದು ಹಾಗೂ ಕೇಂದ್ರ ಸರಕಾರ ಜಾರಿಗೊಳಿಸಿರುವ ಮಹತ್ವದ ಆರ್ಥಿಕ ಯೋಜನೆಗಳನ್ನು ಎಲ್ಲರಿಗೂ ತಲುಪಿಸಲು ವಿಶೇಷ ಒತ್ತು ನೀಡಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಸೂಚಿಸಿದ್ದಾರೆ.

Advertisement

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆದ ಲೀಡ್‌ ಬ್ಯಾಂಕ್‌ ಪರಿಶೀಲನ ಸಭೆಯಲ್ಲಿ ಅವರು ಮಾತ ನಾಡಿದರು.

ಮಾರ್ಚ್‌, ಎಪ್ರಿಲ್‌ ಮತ್ತು ಮೇ ತಿಂಗಳ ಸಾಲದ ಕಂತಿಗೆ ಸಂಬಂಧಿಸಿ ಗ್ರಾಹಕರಿಗೆ ಕೆಲವು ಬ್ಯಾಂಕ್‌ನವರು ನೋಟಿಸ್‌ ನೀಡಿ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಬಂದಿವೆ. ಸಂಕಷ್ಟದ ಕಾಲದಲ್ಲಿ ಮತ್ತಷ್ಟು ಕಿರುಕುಳ ನೀಡಬಾರದು ಎಂದರು.

ಜನಧನ ಮಾಹಿತಿ ನೀಡಿ
ಜಿಲ್ಲೆಯಲ್ಲಿ 2,13,230 ಜನಧನ ಖಾತೆಗಳಿವೆ. ಅವರಿಗೆ 10 ಸಾವಿರ ರೂ. ಮುಂಗಡ ಪಡೆಯುವ ಸೌಲಭ್ಯ ಇದೆ. ಆದರೆ ಕೇವಲ 1,489 ಮಂದಿ ಮಾತ್ರ ಈ ಸೌಲಭ್ಯ ಪಡೆದಿದ್ದಾರೆ. ಕೇಂದ್ರದ ಸರಕಾರದ ಯೋಜನೆಗಳ ಬಗ್ಗೆ ಜನತೆಗೆ ಮಾಹಿತಿ ಕೊರತೆ ಇದ್ದು, ಸಮಗ್ರ ಮಾಹಿತಿ ಇರುವ ಕರಪತ್ರ ಮುದ್ರಿಸಿ ನೀಡುವಂತೆ ಸೂಚಿಸಿದರು.

ಗೃಹ ಸಾಲ-ಶಿಕ್ಷಣ ಸಾಲ ಸಾಧನೆ ಕಳಪೆ
ಗೃಹ ಸಾಲ ಹಾಗೂ ಶಿಕ್ಷಣ ಸಾಲಕ್ಕೆ ಸರಕಾರ ಗುರಿ ನಿಗದಿಪಡಿಸಿದ್ದರೂ ಕೆಲವು ಬ್ಯಾಂಕ್‌ಗಳ ಸಾಧನೆ ತೃಪ್ತಿಕರವಾಗಿಲ್ಲ; ಕೆಲವು ಬ್ಯಾಂಕ್‌ಗಳ ಸಾಧನೆ ಶೂನ್ಯ
ವಾಗಿದೆ. ಅಂತಹ ಬ್ಯಾಂಕ್‌ಗಳಲ್ಲಿ ಸರಕಾರದ ಯಾವುದೇ ಠೇವಣಿ ಇದ್ದರೆ ಹಿಂಪಡೆಯಲು ಸೂಚಿಸಲಾಗುವುದು ಎಂದು ಎಚ್ಚರಿಸಿದರು.

Advertisement

ಕನ್ನಡಿಗರನ್ನೇ ನಿಯೋಜಿಸಿ
ಗ್ರಾಮಾಂತರ ಬ್ಯಾಂಕ್‌ ಶಾಖೆಗಳಲ್ಲಿ ಕನ್ನಡ ತಿಳಿಯದ ಅಧಿಕಾರಿಗಳಿದ್ದು, ಗ್ರಾಹಕರಿಗೆ ಮಾಹಿತಿಯ ಕೊರತೆ ಉಂಟಾಗುತ್ತಿದೆ. ಕನ್ನಡ, ತುಳು ಬಲ್ಲ ಕನಿಷ್ಠ ಒಬ್ಬ ಸಿಬಂದಿಯನ್ನಾದರೂ ಗ್ರಾಮೀಣ ಶಾಖೆಗಳಲ್ಲಿ ನಿಯೋಜಿಸಬೇಕು ಎಂದು ನಳಿನ್‌ ಸೂಚಿಸಿದರು.

ವೆಂಟಿಲೇಟರ್‌ ಒದಗಿಸಲು ಮನವಿ
ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು ಪ್ರಸ್ತುತ 23 ವೆಂಟಿಲೇಟರ್‌ ಸೌಲಭ್ಯವಿದೆ. ಇನ್ನೂ 30 ವೆಂಟಿಲೇಟರ್‌ಗಳ ಆವಶ್ಯಕತೆ ಇದೆ. ಬ್ಯಾಂಕ್‌ಗಳು ಹಾಗೂ ವಿವಿಧ ಕೈಗಾರಿಕೆಗಳು ತಮ್ಮ ಸಾಮಾಜಿಕ ಜವಾಬ್ದಾರಿ ನಿಧಿಯಡಿ ವೆಂಟಿಲೇಟರ್‌ ನೀಡುವ ಮೂಲಕ ಸಹಕರಿಸಬೇಕು ಎಂದು ಸಂಸದರು ಮನವಿ ಮಾಡಿದರು. ಇದಕ್ಕೆ ಕೆಲವು ಬ್ಯಾಂಕ್‌ ಹಾಗೂ ಕೈಗಾರಿಕೆಯವರು ಸ್ಪಂದಿಸಿದರು.

ಜಿ.ಪಂ. ಸಿಇಒ ಆರ್‌. ಸೆಲ್ವಮಣಿ, ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳಾದ ಯೋಗೀಶ್‌ ಆಚಾರ್ಯ, ಪುಷ್ಪರಾಜ ಹೆಗ್ಡೆ, ರಾಮ್‌ದಾಸ್‌ ಉಪಸ್ಥಿತರಿದ್ದರು.

468.83 ಕೋ.ರೂ. ಸಾಲ;
ಗುರಿ ಮೀರಿದ ಸಾಧನೆ
ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಪ್ರವೀಣ್‌ ಕುಮಾರ್‌ ಮಾತನಾಡಿ, ಲಾಕ್‌ಡೌನ್‌ ಅವಧಿಯಲ್ಲಿ (ಮಾ. 25ರಿಂದ ಮೇ 16)13,373 ಜನರಿಗೆ 468.83 ಕೋಟಿ ರೂ. ಸಾಲ ವಿತರಿಸಲಾಗಿದೆ. ಈ ಪೈಕಿ ಕೃಷಿಗೆ 113.23 ಕೋಟಿ ರೂ., ಚಿಲ್ಲರೆ ವ್ಯಾಪಾರ ವಲಯಕ್ಕೆ 316.93 ಕೋಟಿ ರೂ., ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯಕ್ಕೆ 38.66 ಕೋಟಿ ರೂ. ಸಾಲ ನೀಡಲಾಗಿದೆ. ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಡಿ ಜಿಲ್ಲೆಯ 2,16,030 ಫ‌ಲಾನುಭವಿಗಳ ಖಾತೆಗೆ 21.58 ಕೋಟಿ ರೂ. ಜಮೆಯಾಗಿದೆ. 1,34,143 ಕೃಷಿಕರ ಖಾತೆಗೆ 26.82 ಕೋಟಿ ರೂ. ಜಮೆಯಾಗಿದೆ. ವಾರ್ಷಿಕ 17,500 ಕೋಟಿ ರೂ. ಸಾಲ ವಿತರಣೆ ಗುರಿ ಇದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 20,206.05 ಕೋಟಿ ರೂ.ಸಾಲ ನೀಡುವ ಮೂಲಕ ಗುರಿ ಮೀರಿದ ಸಾಧನೆ ಮಾಡಲಾಗಿದೆ. 2019-20ನೇ ಸಾಲಿನಲ್ಲಿ 5,684 ಕೋಟಿ ರೂ., ಕೃಷಿ ಸಾಲ, 640.14 ಕೋಟಿ ರೂ., ಗೃಹ ಸಾಲ, 131.57 ಕೋಟಿ ರೂ. ಶಿಕ್ಷಣ ಸಾಲ ಹಾಗೂ ಆದ್ಯತಾ ವಲಯಕ್ಕೆ 12,106.23 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next