ಗೋಕಾಕ: ನಾನು ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ನಂಬಿ ಪಕ್ಷಕ್ಕೆ ಬಂದಿದ್ದೇನೆ. ಮುಂದೆಯೂ ಅವರನ್ನು ನಂಬುತ್ತೇನೆ. ಹೀಗಾಗಿ ನನಗೆ ಇಂಥದ್ದೇ ಖಾತೆ ಬೇಕು ಎಂಬ ಬೇಡಿಕೆ ಇಲ್ಲ ಎಂದು ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಬಿಜೆಪಿ ಸರ್ಕಾರದಲ್ಲಿ ನೂತನ ಸಚಿವರಾದ ನಂತರ ಮೊದಲ ಬಾರಿಗೆ ಹೆಲಿಕಾಪ್ಟರ್‌ನಲ್ಲಿ ಭಾನುವಾರ ನಗರಕ್ಕೆ ಆಗಮಿಸಿದ ಅವರು, ಬೆಂಬಲಿಗರು, ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ ಸ್ವೀಕರಿಸಿ ನಂತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ನನಗೆ ಬಂದ ಸಂಕಷ್ಟ ಯಾವ ವೈರಿಗೂ ಬರಬಾರದು. ರಾಜಕೀಯದಲ್ಲಿ ನಾವು ನಡೆದಿದ್ದೇ ದಾರಿ ಅಂದುಕೊಂಡರೆ ತಪ್ಪು ಎಂದರು.
ನಾನೊಬ್ಬ ಪರಿಪೂರ್ಣ ನಾಯಕನಾಗಲು ಡಿ.ಕೆ.ಶಿವಕುಮಾರ್ ಕಾರಣ. ಅವರು ಬೆಳಗಾವಿ ಜಿಲ್ಲೆಯಲ್ಲಿ ಮೂಗು ತೂರಿಸುವುದನ್ನು ಬಿಟ್ಟಿದ್ದರೆ ನಾನು ರಾಜ್ಯಮಟ್ಟದ ನಾಯಕನಾಗಲು ಸಾಧ್ಯವಾಗುತ್ತಿರಲಿಲ್ಲ, ಅವರ ವಿರೋಧದಿಂದಲೇ ನಾನು ನಾಯಕನಾಗಿ ಬೆಳೆದೆ. ಇದಕ್ಕಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎನ್ನುವ ಮೂಲಕ ಡಿಕೆಶಿಗೆ ಟಾಂಗ್ ನೀಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ನಾವು ಪಕ್ಷ ಬಿಡ ಬೇಕಾಯಿತು. ನಮ್ಮೊಂದಿಗೆ ಆಗ 36 ಶಾಸಕರು ಇದ್ದರು. ಕೊನೆಗೆ ಉಳಿದಿದ್ದು 17 ಜನ ಮಾತ್ರ. ಬಹುತೇಕ ಎಲ್ಲರೂ ಹಿಂದುಳಿದ ವರ್ಗದ ಶಾಸಕರೇ ಇದ್ದೆವು. ಆದರೆ ಆಗ ಶಾಸಕರ ಸಂಖ್ಯೆ ಕಡಿಮೆಯಾದರೂ ನಾವು ಹಿಂದೆ ಸರಿಯಲಿಲ್ಲ. ಇದರಿಂದ ಯಶಸ್ಸು ಸಿಕ್ಕಿದೆ ಎಂದು ಬೀಗಿದರೆ ನಾವು ಮೂರ್ಖ ರು. ಈಗ ನಾವು ಜನರ ವಿಶ್ವಾಸ ಗೆಲ್ಲುವ ಕೆಲಸ ಮಾಡಬೇಕಿದೆ ಎಂದರು.
ಕಾಂಗ್ರೆಸ್ ನಾಯಕರು ನನ್ನನ್ನು ನಿರ್ಲಕ್ಷಿಸಿದ್ದು ಒಳ್ಳೆಯದೇ ಆಗಿದೆ. ನನ್ನ ಕನಸಿನಲ್ಲೂ ಬಿಜೆಪಿಯಲ್ಲಿ ಸಚಿವನಾಗುತ್ತೇನೆಂದು ಉಹಿಸಿರಲಿಲ್ಲ. ಮಹೇಶ ಕುಮಟಳ್ಳಿ ಅಂತಹ ಒಂದಿಬ್ಬರು ವಿಶ್ವಾಸಿಕ ಜನರು ಜೊತೆಗಿದ್ದರೆ ಜಗತ್ತು ಗೆಲ್ಲಬಹುದು. ಚುನಾವಣೆಯಲ್ಲಿ ನನ್ನ ವಿರುದ್ಧ ಅನೇಕ ಷಡ್ಯಂತ್ರ ಮಾಡಿದರೂ ದೇವರು ಹಾಗೂ ಕ್ಷೇತ್ರದ ಜನತೆಯ ಆಶೀರ್ವಾದ ನನ್ನನ್ನು ಕೈ ಬಿಡಲಿಲ್ಲ, ಗೋಕಾಕ್‌ನಲ್ಲಿ ನಾನೇನಾದರೂ ಸೋತರೆ ಸೊಕ್ಕಿನಿಂದ ಮಾತ್ರ ಸೋಲಬೇಕು. ಮುಂದೆ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡಿದರೆ ಸೋಲು ಬರಲು ಸಾಧ್ಯವೇ ಇಲ್ಲ ಎಂದರು.
ಖಾತೆ ಬಗ್ಗೆ ಚಿಂತೆ ಇಲ್ಲ: ನನಗೆ ನೀರಾವರಿ ಖಾತೆ ಕೊಡ್ತಾರೋ, ಗ್ರಂಥಾಲಯ ಖಾತೆ ಕೊಡುತ್ತಾರೋ ಗೊತ್ತಿಲ್ಲ. ಯಡಿಯೂರಪ್ಪ ಹಾಗೂ ಅಮಿತ್ ಶಾ ನಮ್ಮ ವಿಶ್ವಾಸಕ್ಕೆ ಧಕ್ಕೆ ತರಲಾರರು ಎಂಬ ವಿಶ್ವಾಸ ನಮ್ಮಲ್ಲಿದೆ ಎಂದು ರಮೇಶ ಜಾರಕಿಹೊಳಿ ತಮಗೆ ಮಹತ್ವದ ಖಾತೆ ನೀರಾವರಿಯ ಬಗ್ಗೆ ಆಸೆ ಇದೆ ಎಂದು ಸೂಕ್ಷ್ಮವಾಗಿ ಹೇಳಿದರು.
ಆರ್‌ಎಸ್‌ಎಸ್ ಮುಖಂಡರ ಸಲಹೆಯಂತೆ 2 ತಿಂಗಳಿಂದ ನಾನು ಮಾಧ್ಯಮ ಗಳಿಗೆ ಹೇಳಿಕೆ ನೀಡಿಲ್ಲ, ನಾನೀಗ ಬದಲಾವಣೆಯಾಗಿದ್ದೇನೆ. ರಾಜಕೀಯವಾಗಿ ಬಹಳಷ್ಟು ಪಳಗಿದ್ದೇವೆ. ಈಗ ಒಳ್ಳೆಯ ಪಕ್ಷ ಸೇರಿದ್ದೇವೆ. ಈ ಪಕ್ಷದ ಶಿಸ್ತು ಕಲಿತು ಸಂಯಮದಿಂದ ನಡೆಯುತ್ತೇನೆ ಎಂದರು.