ನಾವು ಪ್ರೀತಿಯನ್ನು ಆರಾ ಧಿಸಬೇಕು. ಪ್ರೀತಿಯಲ್ಲಿ ಬೀಳಬಾರದು. ಪ್ರೀತಿಯಲ್ಲಿ ಎದ್ದರೆ ಮಾತ್ರ ಅದಕ್ಕೆ ಪ್ರೀತಿ ಎನ್ನುತ್ತಾರೆ. ನಾವು ಮಾಡುವ ಪ್ರೀತಿ ಹೇಗಿರಬೇಕೆಂದರೆ, ಕುರಿ ಸರೋವರದಲ್ಲಿ ನೀರು ಕುಡಿದಂತಿರಬೇಕು. ಎಮ್ಮೆಯಂತೆ ಇಳಿದು ಸರೋವರ ಕೊಳಕು ಮಾಡಿದಂತೆ ಜಗತ್ತನ್ನು ಕೆಡಿಸುವ ಕೆಲಸ ಮಾಡಬಾರದು.
ನಾವು ಜೀವಿಸುವ ಜಗತ್ತು ಬಹು ಅನುಭವಗಳ ತಾಣ. ಅನುಭವಗಳಿಂದ ನಾವೂ ಕೆಡಬಾರದು. ಜಗತ್ತೂ ಕೆಡಬಾರದು. ನಾವು ಹೋದ ನಂತರ ಮುಂದಿನ ಪೀಳಿಗೆ ಈ ಜಗತ್ತು ಕೆಟ್ಟದ್ದು ಎನ್ನಬಾರದು. ಈ ಜಗತ್ತನ್ನು ಅನುಭವಿಸಿ ನಾವು ಶ್ರೀಮಂತರಾದರೆ ನಮ್ಮ ಬದುಕು ಶ್ರೀಮಂತ. ಜಗತ್ತು ಅನುಭವಿಸಿ ಬಡವನಾದರೆ ನಮ್ಮ ಬದುಕೂ ಬಡವಾಗುತ್ತದೆ.
ನಾವು ನೋಡುವ ದೃಷ್ಟಿಯಲ್ಲಿ ಹಲವಾರು ಬಗೆಗಳಿವೆ. ರೈತರು ಮಣ್ಣಲ್ಲಿ ಭತ್ತ ಬೆಳೆದು ಜಗತ್ತಿಗೆ ಅನ್ನ ಕೊಟ್ಟರೆ, ಇನ್ನೂ ಕೆಲವರು ಚೀನಾಕ್ಕೆ ಮಣ್ಣು ಮಾರಿ ಚೈನಿ ಮಾಡಿದರು. ಜೀವನದಲ್ಲಿ ದಿವ್ಯತೆ ಬರಬೇಕಾದರೆ ಸೃಷ್ಟಿ ಬದಲಾಗಲ್ಲ. ಆ ಸೃಷ್ಟಿ ನೋಡುವ ನಮ್ಮ ದೃಷ್ಟಿ ಬದಲಾದರೆ ಜಗತ್ತು ದಿವ್ಯವಾಗುತ್ತದೆ. ಸ್ವರ್ಗವಾಗುತ್ತದೆ. “ಸೋಚ ಬದಲೋ ದೇಶ ಬದಲೇಗಾ’, “ವೇಷ್ ಬದಲನೆಸೆ ದೇಶ ನಹಿ ಬದಲೇಗಾ’- ಅಂದರೆ, ವಿಚಾರಗಳು ಬದಲಾಗಬೇಕು. ಆಗ ದೇಶ ಬದಲಾಗುತ್ತದೆ.
ನಾನೂ ಬೆಳೆಯಬೇಕು, ಇತರರೂ ಬೆಳೆಯಬೇಕೆಂಬ ಭಾವನೆಗಳು ನಮ್ಮಲ್ಲಿ ಬರಬೇಕು. ನಾವು ಇನ್ನೊಬ್ಬನ ತಟ್ಟೆಯಲ್ಲಿರುವುದನ್ನು ತೋರಿಸಬಾರದು. ದೇವರು ನನಗೆ ಕೊಟ್ಟಿದ್ದನ್ನು ನಾನು ಅನುಭವಿಸಬೇಕು. ಯಾವುದು ನಾಲಿಗೆಗೆ ರುಚಿ ಕೊಡುತ್ತದೆಯೋ ಅದು ದೇಹಕ್ಕೆ ಕಹಿ ಕೊಡುತ್ತದೆ. ಯಾವುದು ದೇಹಕ್ಕೆ ಕಹಿ ಕೊಡುತ್ತದೆಯೋ, ಅದು ನಾಲಿಗೆಗೆ ಬಹಳ ರುಚಿ ಕೊಡುತ್ತದೆ.
ಅಬ್ದುಲ್ ಕಲಾಂರಿಗೆ ಒಬ್ಬ ವ್ಯಕ್ತಿ, “ನಿಮ್ಮ ಆರೋಗ್ಯ, ನಿಮ್ಮ ಸಂತೋಷಕ್ಕೆ ಕಾರಣ ಏನು? ನಿಮ್ಮ ಆರೋಗ್ಯದ ಗುಟ್ಟೇನು?’ ಎಂದು ಕೇಳಿದರಂತೆ. ಆಗ ಅವರು, “ನನ್ನಲ್ಲಿಗೆ ಬಂದವನಿಗೆ ನಾನು ಏನು ಕೊಟ್ಟು ಖುಷಿಪಡಿಸಲಿ?’ ಎಂದು ಯೋಚಿಸುತ್ತೇನೆ. ಹೀಗಾಗಿ ನಾನು ಆರೋಗ್ಯವಂತನಾಗಿಯೂ, ಸಂತೋಷಭರಿತನಾಗಿಯೂ ಇದ್ದೇನೆ’ ಎಂದರಂತೆ. ನಾವು, ದೇವರು ಕೊಟ್ಟದನ್ನು ಹಂಚಿ ತಿನ್ನಬೇಕು. ಕೋಳಿ- ಕಾಗೆ ಒಂದಗುಳ ಕಂಡರೆ ತನ್ನ ಬಳಗ ಕರೆಯುತ್ತದೆ. ಹಾಗೆ, ಮನುಷ್ಯನೂ ಹಂಚಿಕೊಂಡು ತಿನ್ನುವ ಮನೋಭಾವ ಬೆಳೆಸಿಕೊಳ್ಳಬೇಕು.
* ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಗವಿಸಿದ್ದೇಶ್ವರಮಠ, ಕೊಪ್ಪಳ