Advertisement
ವಾಷಿಂಗ್ಟನ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್, ‘ಭಾರತವೇನಾದರೂ ನಮ್ಮ ನೆಲದಲ್ಲಿ ಸರ್ಜಿಕಲ್ ದಾಳಿ ನಡೆಸಿದರೆ ಅಥವಾ ನಮ್ಮ ಅಣ್ವಸ್ತ್ರ ಘಟಕಗಳ ಮೇಲೆ ದಾಳಿ ನಡೆಸಿದರೆ, ನಾವು ಸುಮ್ಮನಿರುವುದಿಲ್ಲ. ಅಂಥ ಸಂದರ್ಭದಲ್ಲಿ ಇಸ್ಲಾಮಾಬಾದ್ ಸೈರಣೆ ತೋರುತ್ತದೆ ಎಂದು ಯಾರು ಕೂಡ ನಿರೀಕ್ಷಿಸುವುದು ಬೇಡ’ ಎಂದು ಎಚ್ಚರಿಕೆ ಮಿಶ್ರಿತ ಧ್ವನಿಯಲ್ಲಿ ಹೇಳಿದ್ದಾರೆ. ಇದೇ ವೇಳೆ, ಭಾರತಕ್ಕೆ ಸಂಬಂಧಿಸಿದ ಇತರೆ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ಅವರು, “ಎರಡೂ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸಿಕೊಳ್ಳಲು ನಾವು ಬಯಸುತ್ತೇವೆ. ಆದರೆ, ಭಾರತವು ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾಶ್ಮೀರದಲ್ಲಿನ ಪರಿಸ್ಥಿತಿಯು ಮಾತುಕತೆಗೆ ಅತಿದೊಡ್ಡ ತೊಡಕಾಗಿದೆ,’ ಎಂದಿದ್ದಾರೆ.
ಇನ್ನೊಂದೆಡೆ, ಹೊಸದಿಲ್ಲಿಯಲ್ಲಿ ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೊನಾಲ್ಡ್ ಫ್ರಾನ್ಸಿಸ್‌ಝೆಕ್ ಟಸ್ಕ್ ಹಾಗೂ ಐರೋಪ್ಯ ಆಯೋಗದ ಅಧ್ಯಕ್ಷ ಜೀನ್ ಕ್ಲಾಡ್ ಜಂಕರ್ ಶುಕ್ರವಾರ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಗ್ರರ ವಿರುದ್ಧದ ಹೋರಾಟದಲ್ಲಿ ಪರಸ್ಪರ ಸಹಕಾರದ ಕುರಿತು ಒಪ್ಪಂದ ಮಾಡಿಕೊಂಡಿದ್ದಾರೆ. ಉಗ್ರ ಹಫೀಜ್ ಸಯೀದ್, ಮುಂಬಯಿ ದಾಳಿ ಸಂಚುಕೋರ ಲಖ್ವೀ, ದಾವೂದ್ ಇಬ್ರಾಹಿಂ, ಲಷ್ಕರ್, ಜೆಇಎಂ, ಐಸಿಸ್ ಮತ್ತಿತರ ಉಗ್ರರು ಮತ್ತು ಉಗ್ರ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಹಕಾರ ಮಾಡಿ ಕೊಂಡಿದ್ದೇವೆ ಎಂದು ಟಸ್ಕ್ ತಿಳಿಸಿದ್ದಾರೆ. ಇದೇ ವೇಳೆ, ಅಂತಾರಾಷ್ಟ್ರೀಯ ಸೌರ ಒಪ್ಪಂದ ಸೇರಿದಂತೆ 3 ಪ್ರಮುಖ ಒಪ್ಪಂದಗಳಿಗೆ ಸಹಿಯನ್ನೂ ಹಾಕಲಾಗಿದೆ.