ಕೊಲ್ಕತ್ತಾ: ಸರಕಾರದ ಆರ್ಥಿಕ ಪ್ಯಾಕೇಜ್ ಮೇಲೆ ಅವಲಂಬಿತರಾಗಬೇಡಿ. ಹೊಸ ಆಲೋಚನೆಗೆ ತೆರೆದುಕೊಂಡು ಸ್ವಾವಲಂಬಿಗಳಾಗಿ ಉದ್ಯಮ ನಡೆಸಿ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿಯವರು ಜವಳಿ ಉದ್ಯಮಕ್ಕೆ ಸಲಹೆ ನೀಡಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಸದಸ್ಯರ ಜತೆ ವೀಡಿಯೋ ಸಂವಾದ ನಡೆಸಿದ ಸಚಿವರು, ಜವಳಿ ಉದ್ಯಮವು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವಿದು.ಹೊಸ ಮಾರ್ಗ ಮತ್ತು ಆಲೋಚನೆಗೆ ತೆರೆದುಕೊಳ್ಳಲು ಇದು ಸೂಕ್ತ ಸಮಯ.ಉದ್ಯಮಕ್ಕೆ ಆ ಸಾಮರ್ಥ್ಯವಿದೆ. ಹೊಸ ಪರಿಸ್ಥಿತಿಗೆ ಅವರು ತಮ್ಮನ್ನು ತಾವು ಹೊಂದಿಸಿಕೊಂಡರೆ ಸರಕಾರವನ್ನು ಅವಲಂಬಿಸುವ ಅಗತ್ಯವಿಲ್ಲ ಎಂದರು.
ಉದ್ಯಮಕ್ಕೆ ಅಗತ್ಯವಾದ ನೀತಿಗಳನ್ನು ರೂಪಿಸುವುದು ಮತ್ತು ಉದ್ಯಮದ ಚಟುವಟಿಕೆಗಳಿಗೆ ಬೆಂಬಲ ನೀಡುವುದು ಸರಕಾರದ ಕೆಲಸ. ಈಗ ನೀವು ಸರಕಾರದಿಂದ ನಿರೀಕ್ಷಿಸುತ್ತಿರುವ ಹಣ ಸಾರ್ವಜನಿಕರದ್ದು. ಖರ್ಚು ಮಾಡುವ ಪ್ರತಿ ರೂಪಾಯಿಗೂ ಜನ ಲೆಕ್ಕ ಕೇಳುತ್ತಾರೆ ಎಂದರು.
ಸೆಣಬು ಉದ್ಯಮಕ್ಕೆ ಸಹಾಯ ಮಾಡುವ ವಿಚಾರವಾಗಿ ಪಶ್ಚಿಮ ಬಂಗಾಳ ಸರಕಾರದ ಜತೆ ಜವಳಿ ಸಚಿವಾಲಯದ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದವರು ಹೇಳಿದರು.