ಆಧುನಿಕ ಕಾಲ ಘಟ್ಟದಲ್ಲಿ ಜಗತ್ತು ಎಂಬುದು ತೀರಾ ಸಣ್ಣದಾಗಿಬಿಟ್ಟಿದೆ. ಎಲ್ಲಿ ಏನೇ ಆದರೂ ಅದು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ವಿಶ್ವದ ಬಹುತೇಕ ದೇಶಗಳ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಅದರಲ್ಲೂ ನಿಕಟ ಸಂಬಂಧ ಹೊಂದಿರುವ ದೇಶಗಳಲ್ಲಿ ಏನಾದರೂ ಇಂತಹ ವಿಪ್ಲವಗಳು ಸಂಭವಿಸಿದರೆ ಅದರ ಆಪ್ತ ದೇಶಗಳ ಮೇಲೆ ಹೆಚ್ಚಿನ ಪ್ರಭಾವ ಬೀರುವುದು ನಿಶ್ಚಿತ. ಪ್ರಸ್ತುತ ಇಸ್ರೇಲ್‌ನಲ್ಲಿ ನಡೆಯುತ್ತಿರುವ ಯುದ್ಧವೂ ಅಷ್ಟೇ. ಭಾರತದಿಂದ ಸರಿಸುಮಾರು 4,000 ಕಿ.ಮೀ. ದೂರದಲ್ಲಿ ಈ ಯುದ್ಧ ನಡೆಯುತ್ತಿದ್ದರೂ ಇದರ ಪಾರ್ಶ್ವ ಪರಿಣಾಮ ಈಗಾಗಲೇ ದೇಶದ ಮೇಲೆ ಬೀರಲಾರಂಭಿಸಿದೆ.
Advertisement
ಈಗಿನ ಸ್ಥಿತಿಗತಿಯನ್ನು ಪರಾಮರ್ಶಿಸಿದರೆ ಯುದ್ಧ ಬೇಗನೆ ಮುಗಿಯುವ ಸಾಧ್ಯತೆ ಕಾಣಿಸುತ್ತಿಲ್ಲ. ಬೇರೆ ಬೇರೆ ದೇಶಗಳ ನಾಯಕರ ಮಾತುಗಳು ಬೆಂಕಿಗೆ ತುಪ್ಪ ಸುರಿಯುವಂತೆ ಕಾಣಿಸುತ್ತಿದೆ. ಒಂದು ವೇಳೆ ಯುದ್ಧ ಇಸ್ರೇಲ್ ಮತ್ತು ಹಮಾಸ್ ನಡುವಿನ ಹೋರಾಟವಾಗಿರದೆ ಇತರ ಮಧ್ಯಪ್ರಾಚ್ಯ ದೇಶಗಳಿಗೆ ಹಬ್ಬಿದರೆ ನಮ್ಮ ಆರ್ಥಿಕ ಸ್ಥಿತಿಗತಿ ಮತ್ತು ಅಭಿವೃದ್ಧಿಯ ಮೇಲೆ ದೊಡ್ಡ ಹೊಡೆತವೇ ಬೀಳುವ ಸಾಧ್ಯತೆ ಇದೆ. ರಷ್ಯಾ-ಉಕ್ರೇನ್ ನಡುವಿನ ಯುದ್ಧದಿಂದ ಒಟ್ಟಾರೆಯಾಗಿ ಹೆಚ್ಚಿನ ಏಟು ಬೀಳದಿದ್ದರೂ ಇಸ್ರೇಲ್ ಕದನ ವಿಸ್ತರಣೆಯಾದರೆ ದೇಶದ ಪ್ರತೀ ನಾಗರಿಕನ ಕಿಸೆಗೂ ಕತ್ತರಿ ಬೀಳಲಿದೆ.
ಸುಮಾರು 18,000 ಮಂದಿ ಭಾರತೀಯರು ಇಸ್ರೇಲ್‌ನಲ್ಲಿ ವಿವಿಧ ಉದ್ಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರೆಲ್ಲರ ಭವಿಷ್ಯದ ಮೇಲೆ ಈಗ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ. ಭಾರತ ಸರಕಾರ ಸ್ವದೇಶಿಯರನ್ನು ಕರೆತರುವಾಗಿ ಕೈಗೆತ್ತಿಕೊಂಡಿರುವ “ಆಪರೇಷನ್ ಅಜಯ್’ ಮೂಲಕ ಈಗಾಗಲೇ ನೂರಾರು ಮಂದಿ ಭಾರತಕ್ಕೆ ವಾಪಸ್ ಬಂದಿದ್ದಾರೆ. 10 ಬಿಲಿಯನ್ ಡಾಲರ್ ವ್ಯವಹಾರ
ಉಭಯ ದೇಶಗಳ ನಡುವಣ ಪ್ರತೀ ವರ್ಷದ ನೇರ ವಹಿವಾಟು ಸುಮಾರು 10 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಇಸ್ರೇಲ್ ನಿಂದ ಭಾರತವು ರಸಗೊಬ್ಬರ ಉತ್ಪನ್ನ ಗಳು, ಯಂತ್ರೋಪಕರಣ, ವಿದ್ಯುತ್ ಪರಿಕರ ಗಳು, ಪೆಟ್ರೋಲಿಯಂ ವಸ್ತುಗಳು, ರಕ್ಷಣ ಸಾಮಗ್ರಿ, ವಜ್ರ, ಮುತ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದರೆ, ಭಾರತದಿಂದ ಆ ದೇಶಕ್ಕೆ ರಾಸಾಯನಿಕ ವಸ್ತುಗಳು, ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳು, ಬಟ್ಟೆಬರೆ, ಅಮೂಲ್ಯ ಶಿಲೆಗಳು, ವಜ್ರ, ಚಿನ್ನಾಭರಣ ಸಹಿತ ವಿವಿಧ ರೀತಿಯ ಲೋಹಗಳನ್ನು ರಫ್ತು ಮಾಡಲಾಗುತ್ತಿದೆ. ಇವು ದೊಡ್ಡ ಪ್ರಮಾಣದ ಆಮದು-ರಫ್ತು ವಸ್ತುಗಳಾದರೆ ಇನ್ನು ಹಲವಾರು ರೀತಿಯ ಸಣ್ಣಪುಟ್ಟ ವಸ್ತುಗಳ ವಿನಿಮಯವಾಗುತ್ತಿದೆ. ಇವೆಲ್ಲವೂ ಇಸ್ರೇಲ್‌ನ ಪ್ರಮುಖ ಮೂರು ಬಂದರುಗಳಾದ ಹೈಫಾ, ಅಶಾxಡ್ ಮತ್ತು ಐಲಟ್ ಮೂಲಕ ನಡೆಯುತ್ತಿದೆ. ಒಂದು ವೇಳೆ ಈ ಬಂದರುಗಳ ವ್ಯವಹಾರ ಸ್ಥಗಿತಗೊಂಡರೆ ಬಹುತೇಕ ಈ ಎಲ್ಲ ವ್ಯಾಪಾರ-ವಹಿವಾಟುಗಳು ಸ್ಥಗಿತಗೊಳ್ಳಲಿವೆ. ಈಗಾಗಲೇ ಅಶಾxಡ್ ಬಂದರಿನಲ್ಲಿ ಒತ್ತಡದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಈಗ ಮೊದಲ ಪ್ರಾಶಸ್ತ್ಯವನ್ನು ಇಸ್ರೇಲ್‌ನ ನೌಕಾದಳದ ಚಟುವಟಿಕೆಗಳಿಗೆ ನೀಡಲಾಗುತ್ತಿದೆ. ಸರಕು ತುಂಬಿರುವ 13 ಹಡಗುಗಳು ಬಂದರಿನೊಳಗೆ ನಿಂತಿದ್ದರೆ, ಇನ್ನು ಆರು ಹಡಗುಗಳು ಬಂದರಿನ ಹೊರಗೆ ಲಂಗರು ಹಾಕಿವೆ. ಸಕಾಲದಲ್ಲಿ ಇವೆಲ್ಲವುಗಳ ಕಾರ್ಯಾಚರಣೆ ನಡೆಯ ದಿದ್ದರೆ ಒಟ್ಟು ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇನ್ನು ಕನಿಷ್ಠ 15 ದಿನ ಯುದ್ಧ ಮುಂದುವರಿದರೂ ಭಾರತದಲ್ಲಿ ಸ್ಮಾರ್ಟ್ ಟಿವಿ, ವಾಶಿಂಗ್ ಮೆಷಿನ್‌ಗಳ ಬೆಲೆ ಏರಿಕೆಯಾಗಬಹುದು ಎಂಬುದು ಅರ್ಥಶಾಸ್ತ್ರಜ್ಞರ ಲೆಕ್ಕಾಚಾರ ವಾಗಿದೆ.
Related Articles
ಇಸ್ರೇಲ್‌ನಲ್ಲಿ ಭಾರತದ ಬೃಹತ್ ಕಂಪೆನಿಗಳಾದ ಸನ್ ಫಾರ್ಮಾ, ಟಾಟಾ, ರಿಲಯನ್ಸ್, ವಿಪ್ರೋ, ಅದಾನಿ, ಎಲ್ ಆ್ಯಂಡ್ ಟಿ, ಇನ್ಫೋಸಿಸ್ ಭಾರೀ ಮೊತ್ತದ ಹೂಡಿಕೆ ಮಾಡಿವೆ. ಇನ್ನು ಸಣ್ಣ ಪುಟ್ಟ ಕೆಲವು ಕಂಪೆನಿಗಳೂ ಇಲ್ಲಿ ವ್ಯವಹಾರ ಹೊಂದಿವೆ. ಯುದ್ಧ ವಿಸ್ತರಣೆ ಯಾದರೆ ಈ ಸಂಸ್ಥೆಗಳು ಅಲ್ಲಿಂದ ಹೊರ ಹೋಗುವುದು ಅನಿವಾರ್ಯವಾಗಬಹುದು. ಇದು ಕೂಡ ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ.
Advertisement
ಇನ್ನು ಜಾಗತಿಕವಾಗಿ 500ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪೆನಿಗಳ ಶಾಖೆ, ಘಟಕಗಳು ಇಲ್ಲಿದ್ದು, ಒಟ್ಟಾಗಿ ಒಂದು ಲಕ್ಷಕ್ಕೂ ಹೆಚ್ಚು ಸಿಬಂದಿ ಇದ್ದಾರೆ.
ಹೂಡಿಕೆದಾರರಲ್ಲಿ ಭಯಸದ್ಯ ಜಗತ್ತಿನ ಇತರ ದೇಶಗಳ ಜಿಡಿಪಿಗೆ ಹೋಲಿಸಿದರೆ ಭಾರತದ ಜಿಡಿಪಿ ನಿರೀಕ್ಷಿತ ಮಟ್ಟದಲ್ಲಿ ಇದೆ. ಅಭಿವೃದ್ಧಿಯ ವೇಗ ಕೂಡ ಕೊರೊನಾ ಬಳಿಕ ಇತರರಿಗಿಂತ ಉತ್ತಮವಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜಾಗತಿಕ ಹೂಡಿಕೆ ದಾರರು ಭಾರತೀಯ ಷೇರು ಮಾರುಕಟ್ಟೆ ಯತ್ತ ಮುಖ ಮಾಡಿದ್ದರು. ಆದರೆ ಈಗಿನ ಜಾಗತಿಕ ವಿದ್ಯಮಾನಗಳ ಬಳಿಕ ಅವರು ಹಿಂದೆ ಸರಿಯುತ್ತಿರುವ ಲಕ್ಷಣ ಕಾಣಿಸುತ್ತಿದೆ. ಷೇರು ಮಾರುಕಟ್ಟೆ ಅಸ್ಥಿರಗೊಂಡು ಕುಣಿಯು ತ್ತಿದೆ. ಇದು ನೇರವಾಗಿ ಸಾಮಾನ್ಯ ಹೂಡಿಕೆ ದಾರರ ಮೇಲೆ ಪರಿಣಾಮ ಬೀರುತ್ತಿದೆ. ಯುದ್ಧ ಆರಂಭವಾದ ಬಳಿಕ ಷೇರು ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದ ಬಂಡವಾಳ ವಾಪಸ್ ಪಡೆಯುತ್ತಿದ್ದಾರೆ. ಸೆಪ್ಟಂಬರ್‌ನಲ್ಲಿ 14,676 ಕೋಟಿ ರೂ. ಬಂಡವಾಳ ಹಿಂದೆಗೆದಿದ್ದಾರೆ, ಅಕ್ಟೋಬರ್‌ನಲ್ಲಿ ಈಗಾಗಲೇ ಸುಮಾರು 10,000 ಕೋಟಿ ರೂ. ಮರಳಿ ಪಡೆದಿದ್ದಾರೆ. ಆಗಸ್ಟ್ ವರೆಗಿನ 6 ತಿಂಗಳ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಮ್ಮಲ್ಲಿ 1.74 ಲಕ್ಷ ಕೋಟಿ ರೂ. ಹೂಡಿಕೆ ಮಾಡಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಇದರ ನಡುವೆ ಅಮೆರಿಕದಲ್ಲಿನ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದ್ದು, ಅಲ್ಲಿನ ಡಾಲರ್ ಮೌಲ್ಯ ಹೆಚ್ಚುತ್ತಿದೆ. ಪರಿಣಾಮವಾಗಿ ಹೂಡಿಕೆದಾರರು ಡಾಲರ್ ಮತ್ತು ಚಿನ್ನದತ್ತ ಹೆಚ್ಚು ವಾಲುತ್ತಿದ್ದಾರೆ. ಕನಸಿಗೆ ತಣ್ಣೀರು?
ಈಗಷ್ಟೇ ನಮ್ಮಲ್ಲಿ ಹಣದುಬ್ಬರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದೆ. ಸಗಟು ಹಣದುಬ್ಬರ ಕೂಡ ಸತತ ಆರು ತಿಂಗಳುಗಳಿಂದ ಇಳಿಕೆಯ ಹಾದಿಯಲ್ಲಿದೆ. ಆದರೆ ಕೈಕೊಟ್ಟಿರುವ ಮುಂಗಾರು ಮಳೆಯ ಜತೆಗೆ ಯುದ್ಧದ ಸ್ಥಿತಿ ಯಿಂದಾಗಿ ಮುಂದಿನ ದಿನಗಳಲ್ಲಿ ಇಂಧನ, ಆಹಾರಧಾನ್ಯಗಳ ಸಹಿತ ಅಗತ್ಯ ವಸ್ತುಗಳ ಬೆಲೆಗಳು ಮತ್ತೆ ಹೆಚ್ಚುವ ಅಪಾಯ ಇದ್ದೇ ಇದೆ. ಸಹಜವಾಗಿಯೇ ಹಣದುಬ್ಬರವೂ ಉತ್ತರಕ್ಕೆ ಮುಖ ಮಾಡಿದರೆ ಬಡ್ಡಿ ದರ ಇಳಿಕೆಯ ಕನಸು ಕಾಣುತ್ತಿರುವ ಸಾಲಗಾರರಿಗೆ ಮತ್ತೆ ನಿರಾಶೆ ಎದುರಾಗಲಿದೆ. ಜಗತ್ತಿನಲ್ಲಿ ವೇಗವಾಗಿ ಅಭಿವೃದ್ಧಿ ಹೊಂದು ತ್ತಿರುವ ದೇಶವೆಂಬ ಹೆಮ್ಮೆಯೊಂದಿಗೆ ಜನರ ಆರ್ಥಿಕ ಸ್ಥಿತಿಯೂ ಉತ್ತಮಗೊಳ್ಳುವ ಹಂತದಲ್ಲಿ ಎದುರಾಗಿರುವ ಈ ಯುದ್ಧವು ಭಾರತೀಯರ ಜನಜೀವನದ ಮೇಲೆ ಪರಿಣಾಮ ಬೀರದಿರಲಿ. ಯುದ್ಧ ಕೊನೆಗೊಂಡು ಶಾಂತಿ ನೆಲೆಸಿ, ಅಭಿವೃದ್ಧಿಯ ಸೂಚ್ಯಂಕ ಏರಲಿ ಎಂಬುದೇ ಎಲ್ಲರ ಆಶಯ. ಕೆ. ರಾಜೇಶ್ ಮೂಲ್ಕಿ