ಪುನರಾವರ್ತಿತ ವಿದ್ಯಾರ್ಥಿಗಳ ಪಿಯು ಅಂಕ ಪರಿಗಣನೆ ವಿಚಾರದಲ್ಲಿ ಎದ್ದಿದ್ದ ಗೊಂದಲಗಳು ಬಗೆಹರಿದಿದ್ದು, ರಾಜ್ಯ ಸರಕಾರವು ಶೀಘ್ರದಲ್ಲೇ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸಿ ತಾಂತ್ರಿಕ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳುವತ್ತ ಗಮನಹರಿಸಲಿ. ಈಗಾಗಲೇ ಸೆಪ್ಟಂಬರ್ ತಿಂಗಳು ಆರಂಭವಾಗಿದ್ದು, ಸದ್ಯ ವಿದ್ಯಾರ್ಥಿಗಳ ದಾಖಲಾತಿಗಳ ಪರಿ ಶೀಲನೆಯಷ್ಟೇ ಆಗುತ್ತಿದೆ. ಉಳಿದ ಪ್ರಕ್ರಿಯೆ ಈಗ ಆರಂಭವಾದರೂ, ಮುಗಿಯಲು ಇನ್ನೂ ಒಂದು ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತದೆ.
ಶನಿವಾರವಷ್ಟೇ ರಾಜ್ಯ ಹೈಕೋರ್ಟ್ ಪುನರಾವರ್ತಿತ ವಿದ್ಯಾರ್ಥಿಗಳ ಪರವಾಗಿ ತೀರ್ಪು ನೀಡಿತ್ತು. ಅಂದರೆ, ಕಳೆದ ಸಾಲಿನಲ್ಲಿ ಪಿಯು ತೇರ್ಗಡೆ ಯಾಗಿದ್ದ ವಿದ್ಯಾರ್ಥಿಗಳ ಸಿಇಟಿ ಅಂಕವನ್ನು ಮಾತ್ರ ಪರಿಗಣಿಸುತ್ತೇವೆ. ಆದರೆ ಪಿಯು ಅಂಕಗಳನ್ನು ಪರಿಗಣಿಸಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೇಳಿತ್ತು. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ವೃತ್ತಿ ಶಿಕ್ಷಣ ಪ್ರವೇಶ ಪಡೆಯುವಲ್ಲಿ ವಿಫಲರಾಗುತ್ತಿದ್ದರು. ಈ ವಿಚಾರದಲ್ಲಿ ಸರಕಾರಕ್ಕೆ ವಿದ್ಯಾರ್ಥಿಗಳು ಮನವಿ ಮಾಡಿದ್ದರೂ, ಯಾವುದೇ ಫಲ ನೀಡಿರಲಿಲ್ಲ. ಹೀಗಾಗಿ, ಹೈಕೋರ್ಟ್ ಮೆಟ್ಟಿಲೇರಿದ್ದ ವಿದ್ಯಾರ್ಥಿಗಳು ತಮ್ಮ ಪಿಯು ಅಂಕವನ್ನು ಪರಿಗಣನೆ ಮಾಡುವಂತೆ ಸೂಚಿಸಬೇಕು ಎಂದಿದ್ದರು. ಈ ಬಗ್ಗೆ ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್, ಶೇ. 50-50ರ ಆಧಾರದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳಿಗೂ ವೃತ್ತಿಶಿಕ್ಷಣಕ್ಕೆ ಪ್ರವೇಶ ನೀಡಬೇಕು ಎಂದು ಆದೇಶ ನೀಡಿದೆ. ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ನಿರುಮ್ಮಳರಾಗಿದ್ದಾರೆ.
ಈಗ ಹೈಕೋರ್ಟ್‌ನ ಈ ತೀರ್ಪಿನ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಕಳೆದ ಶೈಕ್ಷಣಿಕ ವರ್ಷದ ಸಾಲಿನಲ್ಲಿ ಪಿಯು ಪರೀಕ್ಷೆ ನಡೆಸದೇ ಮೌಲ್ಯಾಂಕನದ ಮೂಲಕ ತೇರ್ಗಡೆ ಮಾಡಲಾಗಿತ್ತು. ಜತೆಗೆ ಕಳೆದ ವರ್ಷ ವೃತ್ತಿಪರ ಶಿಕ್ಷಣ ಪ್ರವೇಶಕ್ಕೆ ಕೇವಲ ಸಿಇಟಿ ಅಂಕಗಳನ್ನು ಮಾತ್ರ ಪರಿ ಗಣಿಸಲಾಗಿತ್ತು. ಈ ಬಾರಿಯೂ ಪುನರಾವರ್ತಿತ ವಿದ್ಯಾರ್ಥಿಗಳ ವಿಚಾರದಲ್ಲಿ ಸರಕಾರ ಅದೇ ನಿಯಮ ಪಾಲನೆ ಮಾಡಿತ್ತು. ಆದರೆ, ಈ ನಿಯಮದಿಂದಾಗಿ ಬಹಳಷ್ಟು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸೀಟು ತಪ್ಪುವ ಆತಂಕ ಎದುರಾಗಿತ್ತು. ಹೀಗಾಗಿ ಹೈಕೋರ್ಟ್‌ಗೆ ಹೋಗಿದ್ದರು.
ಆದರೀಗ ಹೊಸ ಚರ್ಚೆಯೂ ಶುರುವಾಗಿದೆ. ಕಳೆದ ವರ್ಷ ಪರೀಕ್ಷೆ ಇಲ್ಲದ್ದರಿಂದ ಹೆಚ್ಚಾಗಿಯೇ ಅಂಕ ನೀಡಲಾಗಿತ್ತು. ಇದರಿಂದಾಗಿ ಈ ವರ್ಷ ರ್‍ಯಾಂಕ್ ಪಡೆದು ವೃತ್ತಿಪರ ಶಿಕ್ಷಣಕ್ಕೆ ಸೇರಲು ತುದಿಗಾಲಲ್ಲಿ ನಿಂತಿ ರುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ, ಈಗ ಎದ್ದಿರುವ ಗೊಂದಲವನ್ನು ಸರಕಾರ ಯಾವ ರೀತಿ ಪರಿಹಾರ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಏನೇ ಆಗಲಿ, ರಾಜ್ಯ ಸರಕಾರ ಹಗಲಿರುಳು ಕೆಲಸ ಮಾಡಿ ಇದಕ್ಕೊಂದು ಪರಿಹಾರ ಸೂತ್ರ ತರಬೇಕು. ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರಕಾರದ ಮೇಲಿದೆ. ಏಕೆಂದರೆ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಹೊಸ ವಿದ್ಯಾರ್ಥಿಗಳ ರ್‍ಯಾಂಕಿಂಗ್ ಈಗ ಬದಲಾಗುವ ಸಾಧ್ಯತೆಯೂ ಇದೆ.
ಅಲ್ಲದೆ, ಯಾವುದೇ ಕಾರಣಕ್ಕೂ ಸಿಇಟಿ ದಾಖಲಾತಿ ಪ್ರಕ್ರಿಯೆಯನ್ನು ತಡಮಾಡದಿರಲಿ. ಕಾಲೇಜುಗಳು ತಡವಾಗಿ ಆರಂಭವಾದರೆ ವಿದ್ಯಾರ್ಥಿ ಗಳ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತದೆ. ಹೀಗಾಗಿ, ಶಿಕ್ಷಣ ತಜ್ಞರನ್ನು ಒಳಗೊಂಡಂತೆ ಎಲ್ಲರ ಜತೆ ಚರ್ಚಿಸಿ ಇದಕ್ಕೊಂದು ಪರಿಹಾರ ಕಂಡು ಹಿಡಿಯಲಿ ಎಂಬುದೇ ವಿದ್ಯಾರ್ಥಿಗಳ ಬಯಕೆಯಾಗಿದೆ.