Advertisement

ನಿಯಮ ಮೀರಿ ಕಟ್ಟಡ ಕಟ್ಟುವ ಸಾಹಸ ಬೇಡ

12:41 AM Aug 29, 2022 | Team Udayavani |

ಭಾರತದ ಇತಿಹಾಸದಲ್ಲೇ ಅತ್ಯಂತ ದೊಡ್ಡದು ಎನ್ನಬಹುದಾದ ಅಕ್ರಮ ಕಟ್ಟಡದ ಕಾರ್ಯಾಚರಣೆಯೊಂದು ಉತ್ತರ ಪ್ರದೇಶದ ನೋಯ್ಡಾದಲ್ಲಿ ಯಶಸ್ವಿಯಾಗಿದ್ದು ಅಕ್ರಮವಾಗಿ ಕಟ್ಟಡ ಕಟ್ಟುವವರಿಗೆ ಇದೊಂದು ಎಚ್ಚರಿಕೆಯ ಕರೆಗಂಟೆಯಾಗಿದೆ.

Advertisement

ಸುಮಾರು 2009ರಿಂದಲೂ ಕಾನೂನು ಸಮರ ನಡೆಸಿದ ಬಳಿಕ, ಸುಪ್ರೀಂಕೋರ್ಟ್‌ ಆದೇಶದ ಅನ್ವಯದಂತೆ ರವಿವಾರ ಅವಳಿ ಕಟ್ಟಡಗಳನ್ನು ಧರಾಶಾಯಿ ಮಾಡಲಾಗಿದೆ.

ಸೂಪರ್‌ಟೆಕ್‌ ಲಿಮಿಟೆಡ್‌ ಎಂಬ ಕಂಪೆನಿ ಅಪೆಕ್ಸ್‌ ಮತ್ತು ಸಿಯೇನ್‌ ಎಂಬ ಅವಳಿ ಕಟ್ಟಡಗಳನ್ನು ನಿರ್ಮಾಣ ಮಾಡಿತ್ತು. ಈ ಅವಳಿ ಕಟ್ಟಡಗಳು ತಲಾ 40 ಅಂತಸ್ತುಗಳನ್ನು ಹೊಂದಿದ್ದು, ನಿಯಮ ಮೀರಿ ಕಟ್ಟಲಾಗಿತ್ತು. ಮೊದ ಲಿಗೆ ನೋಯ್ಡಾದ ಸಕ್ಷಮ ಪ್ರಾಧಿಕಾರದಿಂದ 14 ಅಂತಸ್ತುಗಳಿಗೆ ಒಪ್ಪಿಗೆ ಪಡೆದಿದ್ದ ಕಂಪೆನಿ ಆ ಬಳಿಕ, ಕಟ್ಟಡದ ಮೂಲನಕ್ಷೆಯನ್ನು ಬದಲಿಸಿ 40 ಅಂತಸ್ತುಗಳಿಗೆ ಏರಿಕೆ ಮಾಡಿಕೊಂಡಿತ್ತು. ಅಲ್ಲದೆ, ಕಟ್ಟಡ ಕಟ್ಟಲಾಗಿರುವ ಜಾಗ ದಲ್ಲಿ ಮೂಲ ಯೋಜನೆಯಂತೆ ಪಾರ್ಕ್‌ ಇರಬೇಕಾಗಿತ್ತು. ಇದನ್ನು ಮೀರಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಈ ಕಟ್ಟಡ ನಿರ್ಮಾಣವನ್ನು ವಿರೋಧಿಸಿ ಕಾನೂನು ಹೋರಾಟ ಮಾಡಿದವರು ಎಮೆರಾಲ್ಡ್‌ ಕೋರ್ಟ್‌ ನಿವಾಸಿಗಳ ಸಂಘ. ಮೊದಲಿಗೆ ಅಲಹಾಬಾದ್‌ ಹೈಕೋರ್ಟ್‌ಗೆ ಈ ಸಂಘ ಮೊರೆ ಹೋಗಿತ್ತು. ಇಲ್ಲಿ ಕಟ್ಟಡವನ್ನು ನಿಯಮ ಮೀರಿ ನಿರ್ಮಾಣ ಮಾಡಿರುವುದು ಸಾಬೀತಾಗಿತ್ತು. ಬಳಿಕ ಸುಪ್ರೀಂಕೋರ್ಟ್‌ನಲ್ಲಿ 2014 ಮತ್ತು 2021ರ ತೀರ್ಪುಗಳಲ್ಲಿಯೂ ನಿಯಮ ಉಲ್ಲಂಘನೆ ಬಗ್ಗೆ ಸ್ಪಷ್ಟವಾಗಿ ಉಲ್ಲೇಖೀಸಲಾಗಿದ್ದಲ್ಲದೇ, ಕಟ್ಟಡ ವನ್ನು ಧ್ವಂಸ ಮಾಡುವಂತೆ ಸೂಚನೆ ನೀಡಿತ್ತು.

ಈಗ ಅ ಅವಳಿ ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡಿದ್ದ ಸಂಸ್ಥೆಗೆ ಎರಡು ರೀತಿಯಲ್ಲಿ ಹೊಡೆತ ಬಿದ್ದಿದೆ. ಒಂದು ಶೇ.12ರ ಬಡ್ಡಿ ಸೇರಿಸಿ, ಫ್ಲ್ಯಾಟ್‌ ಖರೀದಿ ಮಾಡಿದ್ದವರಿಗೆ ಸಂಪೂರ್ಣವಾಗಿ ಹಣ ವಾಪಸ್‌ ನೀಡಬೇಕು. ಅಲ್ಲದೆ, ಕಟ್ಟಡ ಧ್ವಂಸಗೊಳಿಸಲು ವ್ಯಯಿಸಿದ 20 ಕೋಟಿಯನ್ನೂ ಅದೇ ಭರಿಸಬೇಕು. ಕಂಪೆನಿಯ ಪ್ರಕಾರವೇ ಒಟ್ಟಾರೆಯಾಗಿ 500 ಕೋಟಿ ರೂ.ಗಳಷ್ಟು ನಷ್ಟವಾಗಿದೆ.

Advertisement

ಆದರೆ, ಕಟ್ಟಡ ನಿರ್ಮಾಣ ಮತ್ತು ಅದರ ಧ್ವಂಸದಿಂದ 500 ಕೋಟಿ ರೂ. ನಷ್ಟವಾಗಿದೆ ಎಂಬುದನ್ನು ಕಂಪೆನಿ ಹೇಳಿಕೊಂಡರೂ, ಅದರ ನೋವು ಕೇಳಲು ಈಗ ಯಾರೂ ತಯಾರಿಲ್ಲ. ಏಕೆಂದರೆ, ಕೆಲವೊಂದು ಸುರಕ್ಷತ ಕಾರಣಗಳಿಂದಾಗಿ, ಅಕ್ರಮವಾಗಿ ಇಂಥ ಕಟ್ಟಡಗಳನ್ನು ನಿರ್ಮಿಸಿದ್ದರೂ, ಅವುಗಳನ್ನು ಸಕ್ರಮ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಇನ್ನು ಮುಂದೆ ಯಾವುದೇ ರಿಯಾಲ್ಟಿ ಕಂಪೆನಿಗಳು ಅಕ್ರಮವಾಗಿ ಮತ್ತು ನಿಯಮ ಮೀರಿ ಕಟ್ಟಡ ನಿರ್ಮಾಣ ಮಾಡುವುದಕ್ಕಿಂತ ಮುನ್ನ ಎರಡು ಬಾರಿ ಯೋಚನೆ ಮಾಡುವುದು ಒಳಿತು.

ಇದು ಒಂದು ಕಡೆಯಾದರೆ, ಇನ್ನೊಂದು ಕಡೆ ಈ ಅವಳಿ ಕಟ್ಟಡದಲ್ಲಿ ಫ್ಲ್ಯಾಟ್‌ಗಳನ್ನು ಖರೀದಿ ಮಾಡಿದ್ದವರ ನೋವನ್ನು ಯಾರು ಕೇಳುವುದು ಎಂಬ ಪ್ರಶ್ನೆ ಎದುರಾಗಿದೆ. ತಮಗೊಂದು ಹೊಸ ಮನೆ ಸಿಗುತ್ತದೆ ಎಂಬ ಆಸೆಯಿಂದ 2009ರಿಂದಲೇ ಇವರು ಕಾಯುತ್ತಿದ್ದರು. ಈಗ ಮನೆ ಸಿಗಲ್ಲ, ಬದಲಿಗೆ ಹಣವನ್ನೇ ವಾಪಸ್‌ ತೆಗೆದುಕೊಳ್ಳಿ ಎಂದು ಹೇಳಿದ್ದರಿಂದ ಅವರ ಭಾವನೆಗಳಿಗೂ ಧಕ್ಕೆಯಾಗಿರುವುದು ಸತ್ಯ. ಆದರೂ, ಈ ಅಂಶಕ್ಕಿಂತ ಮನೆ ಖರೀದಿ ಮಾಡುವವರು, ಫ್ಲ್ಯಾಟ್‌ಗಳ ಖರೀದಿಗೂ ಮುನ್ನವೇ ಅದರ ಪೂರ್ವಾಪರ ತಿಳಿದುಕೊಳ್ಳುವುದು ವಾಸಿ. ಇಲ್ಲದಿದ್ದರೆ ಇಂಥ ಸಮಸ್ಯೆ ಕಾಣಿಸಿಕೊಳ್ಳುತ್ತವೆ ಎಂಬುದು ನಿಶ್ಚಿತ.

Advertisement

Udayavani is now on Telegram. Click here to join our channel and stay updated with the latest news.

Next